ಸಾಗರ: ಭಗವದ್ಗೀತೆ ಕಲಿತರೆ ಸಾಲದು. ಅದನ್ನು ಇನ್ನೊಬ್ಬರಿಗೂ ಕಲಿಸಬೇಕು. ಭಗವದ್ಗೀತೆ ಕಲಿಕೆಯಿಂದ ಮಾನಸಿಕ ನೆಮ್ಮದಿ ಲಭ್ಯವಾಗುತ್ತದೆ. ನಮ್ಮ ಎಲ್ಲ ಪ್ರಶ್ನೆಗಳಿಗೆ ಅದರಲ್ಲಿ ಉತ್ತರವಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ತಾಲೂಕಿನ ಮಡಸೂರು ಲಿಂಗದಹಳ್ಳಿಯ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಭಗವದ್ಗೀತೆ ಅಭಿಯಾನ ಸಮಿತಿಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಭಗವದ್ಗೀತೆ ಅಭಿಯಾನ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಒಳ್ಳೆಯ ಉಡುಗೆ-ತೊಡುಗೆ, ಆಡಂಬರ, ಶ್ರೀಮಂತಿಕೆ, ಮಾತುಗಾರಿಕೆಯಿಂದ ಬದುಕು ಸುಂದರವಾಗುವುದಿಲ್ಲ. ಧಾರ್ಮಿಕ, ಆಧ್ಯಾತ್ಮಿಕದ ಸಾಂಗತ್ಯ ಹೊಂದಿದಾಗ ಬದುಕು ಹಸನಾಗುತ್ತದೆ. ಭಗವದ್ಗೀತೆ ನಮ್ಮನ್ನು ಸನ್ಮಾರ್ಗದಲ್ಲಿ ಕರೆದೊಯ್ಯುತ್ತದೆ ಎಂದರು.
ರಾಜ್ಯಾದ್ಯಂತ ಭಗವದ್ಗೀತೆ ಅಭಿಯಾನ ಸಿದ್ಧತೆ ನಡೆಯುತ್ತಿದೆ. ಅ.25ರಂದು ಭಗವದ್ಗೀತೆ ಅಭಿಯಾನ ನಾಲ್ಕು ಹಂತಗಳಲ್ಲಿ ಉದ್ಘಾಟನೆಯಾಗಲಿದೆ. ಮಕ್ಕಳು, ದೊಡ್ಡವರು ಒಂದೇ ಹಂತದಲ್ಲಿ ಶಿವಮೊಗ್ಗದಲ್ಲಿ ನಡೆಯಲಿರುವ ಅಭಿಯಾನದ ಸಮಾರೋಪದಲ್ಲಿ ಹಾಡುತ್ತಾರೆ. ಆಗ ಅತ್ಯಂತ ಆಕರ್ಷಕವಾಗಿ ಇರುತ್ತದೆ. ರಾಮಕೃಷ್ಣ ಶಾಲೆ ಮಕ್ಕಳು ಭಗವದ್ಗೀತೆಯನ್ನು ಉತ್ತಮವಾಗಿ ಕಂಠಸ್ಥ ಮಾಡಿಕೊಂಡಿರುವುದು ಸಂತೋಷದ ಸಂಗತಿ ಎಂದರು.
ಅಭಿಯಾನ ಸಮಿತಿಯ ಮಾ.ಸ.ನಂಜುಂಡಸ್ವಾಮಿ ಮಾತನಾಡಿ, ಸಾಗರದಲ್ಲಿ ಕೆ.ವಿ.ಜಯರಾಮ್ ನೇತೃತ್ವದಲ್ಲಿ ಭಗವದ್ಗೀತೆ ಅಭಿಯಾನ ಕಾರ್ಯಕ್ರಮ ಉತ್ತಮವಾಗಿ ನಡೆಯುತ್ತಿದೆ. ಎಲ್ಲ ಶಾಲಾ ಕಾಲೇಜುಗಳಲ್ಲಿ ಪ್ರೋತ್ಸಾಹ ಸಿಗುತ್ತಿದೆ. ನ.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಹಿರಿಯರು ಸಾಗರ ತಾಲೂಕಿನಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಅಭಿಯಾನ ಸಮಿತಿ ಅಧ್ಯಕ್ಷ ಕೆ.ವಿ.ಜಯರಾಮ್, ರಾಮಕೃಷ್ಣ ವಿದ್ಯಾಸಂಸ್ಥೆ ಸಂಸ್ಥಾಪಕ ದೇವರಾಜ್, ಪ್ರಮುಖರಾದ ಅಶ್ವಿನಿಕುಮಾರ್, ಅಶೋಕ್ ಭಟ್, ಪಾಣಿ ರಾಜಪ್ಪ, ಮಧುರಾಯ್ ಶೇಟ್, ಸುಲೋಚನಾ, ಬದರಿನಾಥ್, ಅಶೋಕಕುಮಾರ್, ಸವಿತಾ ಶ್ರೀಕಾಂತ್, ಜಿ.ವಿ.ಹೆಗಡೆ, ಸರಿತಾ ದೇವರಾಜ್ ಇತರರಿದ್ದರು.