ಶಿವಮೊಗ್ಗ: ಕಾಯಕ ಶರಣರು ನಡೆ-ನುಡಿಗೆ ಅಂತರವಿಲ್ಲದಂತೆ ಬದುಕಿದವರು. ವಿವಿಧ ಕಾಯಕಗಳ ಮೂಲಕ ಕಾಯಕನಿಷ್ಠೆಯಿಂದ ಸಮಾಜ ಸುಧಾರಣೆಗೆ ಕಾರಣರಾದವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಬಣ್ಣಿಸಿದರು.
ಜಿಲ್ಲಾಡಳಿತದಿಂದ ಸೋಮವಾರ ಏರ್ಪಡಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಶರಣರು ಸಮಾಜದ ಏಳಿಗೆಗೆ ಶ್ರಮಿಸಿದವರು. ಕಾಯಕದ ಮೂಲತತ್ವ ಅರಿತು ಶ್ರಮಿಸಿದವರು. 12ನೇ ಶತಮಾನ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ಕಾಲಘಟ್ಟ. ಶರಣರು ತಮ್ಮ ವೃತ್ತಿ ಜತೆಗೆ ಸಮಾಜ ಸುಧಾರಕರಾಗಿ ಕೊಡುಗೆ ನೀಡಿದ್ದಾರೆ. ವಚನಗಳ ಮೂಲಕ ಸಮಾನತೆಯ ತತ್ವ ಸಾರಿದ್ದಾರೆ ಎಂದರು.
ಶಿಕಾರಿಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಸೋಮಶೇಖರ್ ಎಚ್. ಶಿಮೊಗ್ಗಿ ಉಪನ್ಯಾಸ ನೀಡಿ, ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಗುಡ್ಡಯ್ಯ ಮುಂತಾದ ಶರಣರು ತಳ ಸಮುದಾಯದ ಪ್ರತಿನಿಧಿಗಳು. ವಿವಿಧ ವರ್ಗಗಳಿಂದ ಬಂದ ಇವರು ವಿವಿಧ ಕಾಯಕದಲ್ಲಿ ನಿಷ್ಠರಾಗಿ ದುಡಿಯುತ್ತ, ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದವರು ಎಂದು ವಿವರಿಸಿದರು.
ಬಹುತೇಕ ಎಲ್ಲ ವಚನಗಳಲ್ಲಿ ನಾವು ಮುಖ್ಯವಾಗಿ ಹಸಿವು, ಬಡತನ ಮತ್ತು ಆಧ್ಯಾತ್ಮಿಕ ಪರಿವರ್ತನೆ ಕಾಣಬಹುದು. ಅನ್ನದ ಬಗ್ಗೆ ಅಂದಿನ ವಚನಗಳಾದಿಯಾಗಿ ಪ್ರಸ್ತುತದಲ್ಲಿ ಬೇಂದ್ರೆ ಅವರು ಅನ್ನ ದೇವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅನ್ನ ಜಗತ್ತಿನ ಪ್ರಾಣ ಎಂದಿದ್ದಾರೆ. ವಚನ ಸಾಹಿತ್ಯ ನಮ್ಮ ಸಮಾಜಕ್ಕೆ ಒಂದು ವಿಶೇಷ ಕೊಡುಗೆ ಎಂದರು.
ಸ್ಥಾವರ ಸಂಸ್ಕೃತಿಯನ್ನು ಅಂದಿನ ಬಸವಾದಿ ಶರಣರು ವಿರೋಧಿಸಿದ್ದರು. ಅದನ್ನು ಇಂದು ವಿಜೃಂಭಿಸಲಾಗುತ್ತಿದೆ. ಅದರರ್ಥ ವಚನಗಳು ಜನರಿಗೆ ಇನ್ನೂ ಅರ್ಥವಾಗಿಲ್ಲ ಎಂಬುದಾಗಿದೆ. ದಲಿತ, ಹಿಂದುಳಿದ ಸಮುದಾಯದ ವಚನಕಾರರು ಎತ್ತಿದ ಪ್ರಶ್ನೆಗಳು ಚರ್ಚೆಗೆ ಒಳಪಡಬೇಕು. ಜಾತಿಯ ಅಸಮಾನತೆ ತೊಡೆದುಹಾಕುವ ಕೆಲಸ ಮಾಡಿದ ವಚನ ಸಾಹಿತ್ಯ ಮತ್ತು ತಳ ಸಮುದಾಯದ ಶರಣರ ವಚನಗಳನ್ನು ಮರು ಓದಿಗೆ ಒಳಪಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ, ಉಪವಿಭಾಗಾಧಿಕಾರಿ ಸತ್ಯನಾರಾಯಣ, ಸಮಗಾರ ಸಮಾಜದ ಮುಖಂಡ ಕೆ.ಎನ್.ಅಶೋಕಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.