ಎತ್ತಿನ ವೇಷದಲ್ಲಿ ಅರಿಷ್ಟಾಸುರ ಬರುತ್ತಾನೆ. ಆ ಅರಿಷ್ಟಾಸುರ ರುದ್ರದೇವರ ವರದಿಂದ ಉನ್ಮತ್ತನಾಗಿದ್ದ. ಎತ್ತಿನ ರೂಪದಲ್ಲಿ ಬಂದು ಎಲ್ಲ ಗೋಪಾಲಕರನ್ನು ಗೋವುಗಳನ್ನು ಹೆದರಿಸುತ್ತ ಸಂಹಾರ ಮಾಡುತ್ತ ಕೆಟ್ಟ ಧ್ವನಿಯಿಂದ ಕೂಗಾಡುತ್ತ, ಅಲ್ಲಿದ್ದವರಲ್ಲಿ ಭಯವನ್ನು ಉಂಟು ಮಾಡತೊಡಗಿದ್ದ. ಇದನ್ನೆಲ್ಲ ಹಮನಿಸುತ್ತಿದ್ದ ಕೃಷ್ಣ ಅದರ ಎರಡೂ ಕೋಡುಗಳನ್ನು ಹಿಡಿದು ಜೋರಾಗಿ ಹಿಂದೆ ತಳ್ಳುತ್ತಾನೆ. ಹನ್ನೆರಡು ಹೆಜ್ಜೆಗಳಷ್ಟು ಅದನ್ನು ಹಿಂದಕ್ಕೆ ಒತ್ತಿದ್ದಾನೆ. ಇದರಿಂದ ಬಹಳ ಬಲಿಷ್ಠವಾದ ಗೂಳಿ ಹಿಂದೆ ಸರಿದಿದೆ.
ಎರಡು ಆನೆಗಳು ಜಗಳ ಆಡುವಾಗ ಹೇಗೆ ಒಂದು ಆನೆ ಇನ್ನೊಂದು ಆನೆಯನ್ನು ಒದೆಯುವುದೋ ಹಾಗೆ ಶ್ರೀಕೃಷ್ಣ ಪರಮಾತ್ಮ ಎಂಬ ಆನೆ ಬಂದಿದೆ. ಮಹಾಪರಾಕ್ರಮಿಯಾದ ಗೂಳಿಯನ್ನು ಇನ್ನೊಮ್ಮೆ ಜೋರಾಗಿ ಒತ್ತಿದರೆ ಅದು ಹದಿನೆಂಟು ಹೆಜ್ಜೆ ಹಿಂದೆ ಹೋಗಿದೆ. ನದಿಯೊಳಗೆ ಸ್ನಾನ ಮಾಡಿದ ನಂತರ ಒದ್ದೆ ಬಟ್ಟೆಯನ್ನು ಚೆನ್ನಾಗಿ ಹಿಂಡುವಂತೆ ಶ್ರೀಕೃಷ್ಣ ಗೂಳಿಯನ್ನು ಹಿಂಡಿ ಎಸೆದಿದ್ದಾನೆ. ಗೂಳಿಗೆ ಬಹಳ ಬಲಿಷ್ಠವಾದ ಕೋಡುಗಳು ಇವೆ. ಅವುಗಳನ್ನು ಕಿತ್ತು ಅದರ ಕೋಡುಗಳಿಂದಲೆ ಆ ಗೂಳಿಯನ್ನು ಕೊಂದಿದ್ದಾನೆ.
ಕೋಡುಗಳನ್ನು ತಲೆ ಮೇಲೆ ಹೊತ್ತು ಓಡಾಡುತ್ತಿದ್ದ ಆ ಗೂಳಿ ಶತ್ರುಕರವಶವಾಯಿತು. ಅಸುರರಿಗೆ ಶತ್ರು ಎಂದರೆ ಕೃಷ್ಣ. ಈಗ ಗೂಳಿ ಅವನ ವಶವಾಗಿವೆ. ನಮ್ಮ ಸಂಪತ್ತು ನಮ್ಮ ಅವಯವಗಳು ಶತ್ರುವಶವಾದರೆ ನಾಶ ನಿಶ್ಚಿತ. ಕೃಷ್ಣ ತನ್ನ ಕಾರ್ಯದ ಮೂಲಕ ಹೇಳಿದ್ದೂ ಅದನ್ನೇ. ಯಾವುದೇ ಒಬ್ಬ ವ್ಯಕ್ತಿ ಶತ್ರುವಿನ ಕರವಶವಾದರೆ ನಾಶಹೊಂದುವುದು ನಿಶ್ಚಿತ ಎನ್ನುವ ಸಂದೇಶವನ್ನು ಈ ಅರಿಷ್ಟಾಸುರ ಸಂಹಾರದ ಮೂಲಕ ಶ್ರೀಕೃಷ್ಣನು ತಿಳಿಸುತ್ತಿದ್ದಾನೆ. ಆಗ ಶ್ರೀಕೃಷ್ಣನ ಮೇಲೆ ದೇವತೆಗಳು ಪುಷ್ಪವೃಷ್ಟಿಯನ್ನು ಮಾಡಿದರು. ಹೀಗೆ ಶ್ರೀಕೃಷ್ಣ ಶಂಖಚೂಡನನ್ನು, ಅರಿಷ್ಟಾಸುರನನ್ನು ಸಂಹರಿಸಿ ತನ್ನ ನಾಮಸ್ಮರಣೆಯನ್ನು ಭಕ್ತಿಯಿಂದ ಮಾಡುವವರ ಅರಿಷ್ಟಗಳನ್ನು ದೂರ ಓಡಿಸುತ್ತೇನೆ ಎಂಬ ಸಂದೇಶವನ್ನು ಭಕ್ತರಿಗೆ ನೀಡುತ್ತಿದ್ದಾನೆ.