ಆ ಸ್ಥಿತಿಯಲ್ಲಿರುವಾಗಲೇ ಲೀಲಾಮಹಾರಾಣಿಯು ಶ್ರೀದೇವಿಯನ್ನು ಪ್ರಾರ್ಥಿಸಿಕೊಂಡು ತನ್ನ ಪತಿಯನ್ನು ತಿರುಗಿ ಕೊಡಬೇಕೆಂದು ಆಗ್ರಹಿಸಿದಳು. ಶ್ರೀದೇವಿಯು ಅವಳ ಮನಸ್ಸಿನ ಪರಿವರ್ತನೆಗೋಸ್ಕರ ಮತ್ತು ಜಗತ್ತು ತೋರಿಕೆ ಎಂಬುದನ್ನು ಮನವರಿಕೆ ಮಾಡುವುದಕ್ಕೋಸ್ಕರ ಇದೇ ವೇಳೆಯಲ್ಲೇ ಅನೇಕ ದರ್ಶನಗಳನ್ನು ಮಾಡಿಸಿದಳು- ಮಂಟಪದಲ್ಲಿ ಪಾರ್ಥಿವ ಶರೀರ ಇರುವಷ್ಟು ಕಾಲ ಎಂದರೆ ಬಹುಶಃ ಒಂದೆರಡು ದಿನಗಳು. ಇಷ್ಟು ಚಿಕ್ಕ ಅವಧಿಯಲ್ಲಿ ಅನೇಕ ಜನ್ಮಗಳಲ್ಲಿ ನೋಡಬಹುದಾದ ದೃಶ್ಯಗಳನ್ನು ಶ್ರೀದೇವಿಯು ಅವಳಿಗೆ ತೋರಿಸಿದ್ದಾಳೆ. ನೂರಾರು ವರ್ಷಗಳಷ್ಟು ದೀರ್ಘವಾದ ಚರಿತ್ರೆಗಳನ್ನು ಒಂದೆರಡು ಘಂಟೆಗಳ ಚಲನಚಿತ್ರದಲ್ಲಿ ತೋರಿಸಲಾಗುತ್ತದೆ.
ಇದೇ ರೀತಿ ದೀರ್ಘವಾದ ಘಟನಾವಳಿಗಳ ಸಾಲು ಮೂರು-ನಾಲ್ಕು ನಿಮಿಷಗಳ ಸ್ವಪ್ನದಲ್ಲಿ ಬಂದು ಹೋಗುತ್ತವೆ. ಹಾಗೆಯೇ ಸಮಾಧಿಸ್ಥಿತಿಯಲ್ಲಿರುವಾಗ ಲೀಲಾಮಹಾರಾಣಿಯು ಬೇರೆ ಬೇರೆ ಲೋಕಗಳನ್ನು ನೋಡಿದಳು. ತನ್ನ ಹಿಂದಿನ ನೂರಾರು ಜನ್ಮಗಳನ್ನು ನೋಡಿದಳು. ಈಗ ವಿದೂರಥನೆಂಬ ಚಕ್ರವರ್ತಿಯ ಯುದ್ಧಭೂಮಿಯನ್ನು ನೋಡುತ್ತಿದ್ದಾಳೆ. ಕಡಿಮೆ ವೇಳೆಯಲ್ಲಿಯೇ ಇಷ್ಟೆಲ್ಲಾ ಆಗುತ್ತಿರುವುದರ ಮರ್ಮವನ್ನು ತುಂಬಾ ಹಿಂದೆ ಶ್ರೀವಸಿಷ್ಠರು ಹೇಳಿದ್ದಾರೆ. ಯಥೈತತ್ ಪ್ರತಿಭಾಮಾತ್ರಂ ಜಗತ್ಸರ್ಗಾವಭಾಸನಮ್ ತಥೈತತ್ ಪ್ರತಿಭಾಮಾತ್ರಂ ಕ್ಷಣಕಲ್ಪಾವ
ಭಾಸನಮ್|(3-20-29) ಜಗತ್ತಿನ ಸೃಷ್ಟಿ ಹೇಗೆ ತೋರಿಕೆಯೋ ಅದೇ ರೀತಿ, ಕ್ಷಣದಿಂದಾರಂಭಿಸಿ ಕಲ್ಪದ ವರೆಗಿನ ಕಾಲ ಪರಿಮಿತಿಗಳೂ ತೋರಿಕೆಗಳೇ ಆಗಿವೆ. ಸ್ವಪ್ನ ಮತ್ತು ಭ್ರಾಂತಿಗಳಲ್ಲಿ ಅನುಭವಕ್ಕೆ ಬರುವ ಕಾಲವೂ ಭ್ರಾಂತಿಯೇ ಆಗಿರುತ್ತದೆ. ಇದನ್ನು ಅನುಭವದಲ್ಲಿ ತಂದು ಮನದಟ್ಟು ಮಾಡಲು ಕಡಿಮೆ ವೇಳೆಯಲ್ಲಿ ಇಷ್ಟೊಂದು ಘಟನೆಗಳನ್ನು ತೋರಿಸಿದ್ದಾಳೆ. ಮಂಟಪ ಇರುವ ವೇಳೆಯಲ್ಲಿ ಜರುಗಿದ ಘಟನೆಗಳೇ ಮಂಡಪೋಪಾಖ್ಯಾನ.
ವಿದೂರಥನ ರಾಜಧಾನಿಯ ಸಮೀಪ ನಡೆದ ಯುದ್ಧ ಈಗ ಸಾಯಂ ಸಂಧ್ಯಾಕಾಲ ಬಂದಿದ್ದರಿಂದ ಮತ್ತು ಎರಡೂ ಪಕ್ಷದವರು ನಿರ್ಣಯಿಸಿದ್ದರಿಂದ ಯುದ್ಧ ವಿರಾಮ ಘೊಷಣೆಯಾಗಿದೆ. ಆದರೆ ಯುದ್ಧಭೂಮಿಯ ದೃಶ್ಯ ದಾರುಣವಾಗಿದೆ. ಇದನ್ನು ಶ್ರೀವಸಿಷ್ಠರು ಹೇಳುತ್ತಿದ್ದಾರೆ. ‘ಶ್ರೀರಾಮ! ಯುದ್ಧದಲ್ಲಿ ತೀವ್ರ ಗಾಯಗೊಂಡು ಬಿದ್ದು ಪ್ರಾಣಬಿಡುತ್ತಿರುವ ಸೈನಿಕರನ್ನು ಲೆಕ್ಕಿಸದೆ ಹೇಡಿಗಳಾದ ಸೈನಿಕರು ಅವರನ್ನು ಅವಮಾನಿಸುತ್ತಾ ಕಾಲಿನಿಂದ ತುಳಿಯುತ್ತಾ ಪಲಾಯನ ಗೈಯುತ್ತಿದ್ದಾರೆ. ಆದ್ದರಿಂದಲೇ ಯಾವ ಸಂಕೋಚವೂ ಇಲ್ಲದೇ ರಕ್ತದ ಪ್ರವಾಹಗಳಿರುವ ಭಯಾನಕ ಸ್ಥಳಗಳಲ್ಲಿಯೂ ಆ ಹೇಡಿ ಸೈನಿಕರು ಓಡುತ್ತಿದ್ದಾರೆ. ಕೆಲವರು ಸೈನಿಕರಂತೂ ತಮ್ಮ ಶರೀರದ ಮರ್ಮಸ್ಥಾನಗಳಿಗೆ ಬಾಣಗಳು ನಾಟಿ ಒದ್ದಾಡುತ್ತಾ ತಮ್ಮ ಜನ್ಮಾಂತರದ ಪಾಪಗಳನ್ನು ಅರ್ಥಮಾಡಿಕೊಳ್ಳುತ್ತಾ ಮರುಗುತ್ತಿದ್ದಾರೆ. ಇನ್ನೊಂದೆಡೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಬಂಧಗಳನ್ನು ಹಿಡಿದು ಅವರ ರಕ್ತವನ್ನು ಹೀರಲು ಬೇತಾಳಗಳು ಬಾಯಿಯನ್ನು ತೆರೆದು ಕಬಂಧಗಳನ್ನು ಆಕ್ರಮಿಸುತ್ತಿವೆ.’
‘ರಕ್ತದ ನದಿಗಳಲ್ಲಿ ಧ್ವಜಗಳು, ಛತ್ರಗಳು, ಸುಂದರವಾದ ಚಾಮರಗಳು ತೇಲುತ್ತಿವೆ. ಸರೋವರದಲ್ಲಿರುವ ಕಮಲಗಳಂತೆ ಈ ಧ್ವಜ, ಛತ್ರ, ಚಾಮರಗಳು ಗೋಚರಿಸುತ್ತಿವೆ. ಇಡೀ ಯುದ್ಧರಂಗವೇ ಸಂಧ್ಯಾಕಾಲದ ಕೆಂಪು ಬೆಳಕಿನಿಂದಾಗಿ ಕೆಂಪು ಕಮಲದಂತೆ ಮತ್ತು ಆ ಕೆಂಪು ಕಮಲವು ಸಂಧ್ಯಾಕಾಲದ ಕೆಂಪು ಬಣ್ಣದಿಂದ ತೇಜಸ್ಸುಳ್ಳದ್ದಾಗಿ ಎಲ್ಲಾ ದಿಕ್ಕುಗಳಲ್ಲಿ ಕೆಂಪು ಪ್ರಭೆಯನ್ನು ಹರಡಿಸುತ್ತಿರುವಂತೆ ಕಾಣುತ್ತಿದೆ.’ ‘ಇಡೀ ಯುದ್ಧರಂಗವು ಎಂಟನೇ ಸಮುದ್ರವೋ ಎಂಬುದಾಗಿ ಗೋಚರಿಸುತ್ತಿದೆ. ಅದರಲ್ಲಿ ಬಿದ್ದಿರುವ ರಥಗಳು ಆ ರಕ್ತ ಸಮುದ್ರದ ನಡುವೆ ಇರುವ ಪರ್ವತಗಳಂತೆ, ರಥದ ಚಕ್ರಗಳು ಸಮುದ್ರದಲ್ಲಿರುವ ಚಕ್ರಾಕಾರದ ಆವರ್ತಗಳಂತೆ, ಪತಾಕೆಗಳು ನೊರೆಯ ಸಮೂಹದಂತೆ ಮತ್ತು ಸುಂದರ ಚಾಮರಗಳು ಸಮುದ್ರದ ನೀರಿನಲ್ಲಿರುವ ಗುಳ್ಳೆಗಳಂತೆ ಭಾಸವಾಗುತ್ತಿವೆ’.
‘ರಕ್ತದ ಕೆಸರಿನಲ್ಲಿ ರಥಗಳು ತಲೆಕೆಳಗಾಗಿ ಬಿದ್ದಿದ್ದನ್ನು ನೋಡಿದರೆ ಪ್ರಳಯ ಕಾಲದಲ್ಲಿ ಉಕ್ಕಿಬಂದ ಸಮುದ್ರದಲ್ಲಿ ಮುಳುಗಿರುವ ಪುರಗಳಂತೆ ಮತ್ತು ಉತ್ಪಾತ ವಾಯುವಿನಿಂದ ಕಿತ್ತು ತಲೆಕೆಳಗಾಗಿ ಎಸೆಯಲ್ಪಟ್ಟ ವಿಸ್ತಾರವಾದ ವನದಂತೆ ಕಾಣುತ್ತಿದೆ’.
‘ಕಲ್ಪಾಂತ್ಯದ ಭಯಂಕರ ಅಗ್ನಿಯಲ್ಲಿ ಸುಟ್ಟುಹೋಗಿ ಉಳಿದುಕೊಂಡಿರುವ ಜಗತ್ತಿನಂತೆ, ಅಗಸ್ತ್ಯ ಮುನಿಯು ಆಪೋಶನವಾಗಿ ಸಮುದ್ರವನ್ನು ಕುಡಿದ ನಂತರ ಉಳಿದಿರುವ ದೃಶ್ಯದಂತೆ, ಅತಿವೃಷ್ಟಿಯಿಂದ ಪೀಡಿತವಾದ ಪ್ರದೇಶದಂತೆ, ಯುದ್ಧರಂಗವು ನಿರ್ಜನವಾಗಿ ಕಾಣುತ್ತಿತ್ತು. ಬೆಳಗಿನಿಂದಲೇ ಲಕ್ಷಗಟ್ಟಲೆ ಜನರು ಜಮಾಯಿಸಿದ ಯುದ್ಢರಂಗ ಈಗ ಹಿಂದೆ ಹೇಳಿದ ದಾರುಣ ದೃಶ್ಯಗಳೊಂದಿಗೆ ನಿರ್ಜನವೂ ಆಗತೊಡಗಿತು’.
(ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)