ನ್ಯೂಸ್

ಗ್ಯಾರಂಟಿ ದಯನೀಯ ಸ್ಥಿತಿ ಬಂದಿಲ್ಲ: ಸುನಿಲ್‌ಕುಮಾರ್ ತಿರುಗೇಟು | Tax payers money

ಮೃತ್ಯುಂಜಯ ಕಪಗಲ್

ಬೆಂಗಳೂರು: ಕಾಂಗ್ರೆಸ್‌ನವರ ಗ್ಯಾರಂಟಿಗಾಗಿ ಹೊಟ್ಟೆಬಟ್ಟೆ ಕಟ್ಟಿಕೊಳ್ಳುವ ದಯನೀಯ ಸ್ಥಿತಿ ಮಂಗಳೂರಿನ ಜನರಿಗೆ ಬಂದಿಲ್ಲ. ಗ್ಯಾರಂಟಿ ಘೋಷಣೆಯ ಬಳಿಕವೂ ಉಡುಪಿ- ದಕ್ಷಿಣಕನ್ನಡದಲ್ಲಿ ಮಖಾಡೆ ಮಲಗಿರುವ ಕಾಂಗ್ರೆಸ್‌ನ್ನು ಎಬ್ಬಿಸುವುದಕ್ಕೆ ವಿಶೇಷ ಯೋಜನೆ ರೂಪಿಸಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿ ಶಾಸಕ ವಿ.ಸುನೀಲ್ಕುಮಾರ್ ತಿರುಗೇಟು ನೀಡಿದ್ದಾರೆ.

ಮಂಗಳೂರಿನ ಜನರು ಗ್ಯಾರಂಟಿಗಳಿಂದಲೇ ಹೊಟ್ಟೆಬಟ್ಟೆ ಕಟ್ಟಿಕೊಂಡರೂ ನಮಗೆ ವೋಟು ನೀಡುವುದಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಸುನಿಲ್‌ಕುಮಾರ್ ಪ್ರತ್ಯುತ್ತರಿಸಿ ಹೇಳಿಕೆ ನೀಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಕನಕಪುರದ ಆಚೆಗೆ ಬೇರೇನು ನಡೆಯುತ್ತಿದೆ ಎಂಬುದೇ ಗೊತ್ತಿಲ್ಲ. ಹೀಗಾಗಿ ಅನ್ಯ ಜಿಲ್ಲೆಗಳ ಬಗ್ಗೆ ತಾತ್ಸಾರದ ಮಾತನಾಡುತ್ತಿದ್ದಾರೆ. ಈ ಹಿಂದೆ ಬೆಂಗಳೂರು ನಗರದ ಜನತೆಯ ಬಗ್ಗೆಯೂ ಹೀಗೆ ಮಾತನಾಡಿದ್ದರು ಎಂದು ನೆನಪಿಸಿದ್ದಾರೆ.

ಬೌದ್ಧಿಕ ದಾರಿದ್ರ್ಯವಿಲ್ಲ

ಮಂಗಳೂರು ಸೇರಿ ಕರಾವಳಿಯ ಜನರು ಸ್ವಾಭಿಮಾನಿಗಳು. ಬೆಂಗಳೂರಿನ ನಂತರ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುವುದು ಇಲ್ಲಿಂದಲೇ. ನಿಮ್ಮ ಗ್ಯಾರಂಟಿ ನಂಬಿ ಮತದಾನ ಮಾಡುವಂತ ಬೌದ್ಧಿಕ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಘೋಷಣೆ ಮಾಡುವಾಗ ಇದು ಮಂಗಳೂರಿಗೆ ಅನ್ವಯವಾಗುವುದಿಲ್ಲ ಎಂಬ ನಿಬಂಧನೆ ವಿಧಿಸಿದ್ದಿರೇ ? ಗ್ಯಾರಂಟಿ ಜಾರಿಯಾದ ಮೇಲೆ ಮಂಗಳೂರಿನವರು ಅರ್ಜಿ ಸಲ್ಲಿಸಬಾರದು ಎಂದು ಕರಾರು ಹೇರಿದ್ದಿರೇ ? ಎಂದು ಕೇಳಿದ್ದಾರೆ.

ಮಂಗಳೂರು ಕರ್ನಾಟಕದ ಭಾಗವಾಗಿರುವುದರಿಂದ ಇಲ್ಲಿನ ಜನ ಅರ್ಜಿ ಸಲ್ಲಿಸಿದ್ದಾರೆ. ಅಷ್ಟಕ್ಕೂ ನಿಮ್ಮ ಗ್ಯಾರಂಟಿ ಯೋಜನೆ ಕನಕಪುರದವರಿಗೆ ಮಾತ್ರ ಸೀಮಿತವಲ್ಲ ಎಂದು ಕುಟುಕಿದ್ದಾರೆ.

ಕರದಾತರ ಹಣ

ರಾಜ್ಯದ ಕರದಾತರ ಹಣದಲ್ಲಿ ಅನುಷ್ಠಾನ ಮಾಡುತ್ತಿದ್ದೀರಿ. ಹೊಟ್ಟೆಬಟ್ಟೆ ಕಟ್ಟಿಯಾದರೂ ನೀವು ಇದನ್ನು ಅನುಷ್ಠಾನ ಮಾಡಬೇಕೆ ವಿನಾ ನಿಲ್ಲಿಸುವುದಕ್ಕೆ ಕಳ್ಳಮಾರ್ಗ ಹುಡುಕಬೇಡಿ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಹದೆಗೆಡುತ್ತಿದೆ. ಇದಕ್ಕೆ ನಿಮ್ಮ ಓಲೈಕೆ ರಾಜಕಾರಣವೇ ಕಾರಣ. ಇದಕ್ಕಾಗಿಯೇ ಮಂಗಳೂರಿನ ಜನತೆ ನಿಮ್ಮನ್ನು ತಿರಸ್ಕರಿಸಿದ್ದಾರೆ ಎಂದು ತಿವಿದಿದ್ದಾರೆ.

ನಾವು ಬೇಕಿದ್ದರೆ ಹೊಟ್ಟೆಬಟ್ಟೆ ಕಟ್ಟಿಯಾದರೂ ದುಡಿಯುತ್ತೇವೆ. ಆದರೆ ಕಾಂಗ್ರೆಸಿಗರ ಹಂಗು, ದಯಾ ಭಿಕ್ಷೆ ಬೇಕಿಲ್ಲ. ಇಂಥ ಕೀಳು ಅಭಿರುಚಿಯ ಹೇಳಿಕೆ ನೀಡಿ ಮಂಗಳೂರಿನವರ ಆತ್ಮಾಭಿಮಾನ ಕೆಣಕಬೇಡಿ ಎಂದು ವಿ.ಸುನಿಲ್‌ಕುಮಾರ್ ಸಲಹೆ ನೀಡಿದ್ದಾರೆ.