ನ್ಯೂಸ್

ಭಾರತದಲ್ಲಿ ಸೋಂಕಿನ ತೀವ್ರತೆ ಕಡಿಮೆ

ನವದೆಹಲಿ: ಭಾರತದಲ್ಲಿ ಕರೊನಾ ವೈರಸ್ ಸೋಂಕು ಹಾಗೂ ಸಾವಿನ ಪ್ರಕರಣಗಳು ದೇಶದ ಜನಸಾಂದ್ರತೆಗೆ ಹೋಲಿಸಿದರೆ ಜಾಗತಿಕ ಸರಾಸರಿಗಿಂತ ಕಡಿಮೆಯಾಗಿದೆ. ಸೋಂಕಿನ ಸಂಖ್ಯೆ ಜಾಗತಿಕ ಸರಾಸರಿ ಪ್ರತಿ ಹತ್ತು ಲಕ್ಷಕ್ಕೆ (ಮಿಲಿಯನ್) 120 ಆಗಿದ್ದು ಭಾರತದ್ದು ಕೇವಲ ಒಂದು ಆಗಿದೆ.

ಸಾವಿನ ಸಂಖ್ಯೆಯ ಜಾಗತಿಕ ಸರಾಸರಿ ಪ್ರತಿ ಮಿಲಿಯನ್​ಗೆ ಆರು ಆಗಿದ್ದು ಭಾರತದ್ದು ಕೇವಲ 0.04 ಆಗಿದೆ. ಜಗತ್ತಿನಾದ್ಯಂತದ ಕರೊನಾ ವೈರಸ್ ಪ್ರಕರಣಗಳನ್ನು ದಾಖಲಿಸುವ ‘ವಲ್ಡರ್ೊುೕಟರ್ಸ್’ ಎಂಬ ವೆಬ್​ಸೈಟ್ ಈ ಅಂಕಿಸಂಖ್ಯೆಗಳನ್ನು ದಾಖಲಿಸಿದೆ.

ಇದುವರೆಗೆ ಕರೊನಾ ಸೋಂಕಿನ ಪ್ರಕರಣ ವರದಿಯಾದ ದೇಶಗಳ ಅಂಕಿ-ಸಂಖ್ಯೆಗಳನ್ನು ಪರಿಗಣಿಸಿ ಅದರ ಆಧಾರದಲ್ಲಿ ‘ಪ್ರತಿ ಮಿಲಿಯಕ್ಕೆ ಸಾವಿನ ಸಂಖ್ಯೆ’ ಲೆಕ್ಕ ಹಾಕಿದರೆ ವೆಬ್​ಸೈಟ್​ನಲ್ಲಿ ಪಟ್ಟಿ ಮಾಡಿರುವ 208 ದೇಶಗಳ ಪೈಕಿ ಭಾರತ 133ನೇ ರ್ಯಾಂಕ್ ಹೊಂದಿದೆ.

ಇಟಲಿ, ಸ್ಪೇನ್, ಬೆಲ್ಜಿಯಂ, ನೆದರ್ಲೆಂಡ್, ಫ್ರಾನ್ಸ್, ಸ್ವಿಜರ್ಲೆಂಡ್ ಮತ್ತು ಬ್ರಿಟನ್ ಸಹಿತ ಅನೇಕ ಯುರೋಪ್ ದೇಶಗಳು ಪ್ರತಿ ಮಿಲಿಯನ್​ನಲ್ಲಿ ಸಾವಿನ ಸಂಖ್ಯೆಯ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯುತ್ತವೆ. ಈ ವಿಚಾರದಲ್ಲಿ ಟಾಪ್ 20 ದೇಶಗಳಲ್ಲಿ ಸ್ಥಾನ ಪಡೆದಿರುವ ದೇಶಗಳ ಪೈಕಿ ಇರಾನ್ ಒಂದೇ ಏಷ್ಯಾದ ದೇಶವಾಗಿದೆ. ಇದುವರೆಗೆ ಅತಿಹೆಚ್ಚು ಕರೊನಾ ವೈರಸ್ ಸೋಂಕಿತರನ್ನು ದಾಖಲಿಸಿರುವ ಅಮೆರಿಕ, ಪಟ್ಟಿಯಲ್ಲಿ 21ನೇ ಸ್ಥಾನ ಪಡೆದಿದೆ.

ಪ್ರತಿ ಮಿಲಿಯನ್ ಜನಸಂಖ್ಯೆಯಲ್ಲಿ ಸೋಂಕಿತರ ಪ್ರಮಾಣ ಪರಿಗಣಿಸಿದರೆ, ಭಾರತ ಇನ್ನೂ ಕೆಳಗಿನ ಅಂದರೆ 178ನೇ ಸ್ಥಾನದಲ್ಲಿ ನಿಲ್ಲುತ್ತದೆ. ಬಾಂಗ್ಲಾದೇಶ (0.3) ಮತ್ತು ನೇಪಾಳ (0.2) ಇನ್ನೂ ಕಡಿಮೆ ಸರಾಸರಿ ಹೊಂದಿರುವ ಏಷ್ಯಾದ ಇತರ ದೇಶಗಳು. ಕರೊನಾ ವೈರಸ್ ಅತಿ ಕಡಿಮೆ ಪ್ರಮಾಣದಲ್ಲಿ ಬಾಧಿಸಿದ 25 ದೇಶಗಳಲ್ಲಿ ಭಾರತವೂ ಒಂದಾಗಿದೆ.