ಸೋಮವಾರಪೇಟೆ ಪ್ರತಿಕಾ ಭವನದಲ್ಲಿ ಆಯೋಜಿಸಿದ್ದ ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮಕ್ಕೆ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಎನ್. ರವೀಂದ್ರ ಚಾಲನೆ ನೀಡಿದರು. ಈಶ್ವರಚಂದ್ರ ಸಾಗರ್, ಹರೀಶ್, ಮುರುಳೀಧರ್, ಕವನ್ ಇದ್ದರು. 
ನ್ಯೂಸ್

ಕೋವಿಡ್ ವೇಳೆ ಪತ್ರಕರ್ತರ ಸೇವೆ ಶ್ಲಾಘನೀಯ

ಸೋಮವಾರಪೇಟೆ: ಕೊಡಗು ಪತ್ರಕರ್ತರ ಸಂಘದ ಸೋಮವಾರಪೇಟೆ ತಾಲೂಕು ಘಟಕದ ವತಿಯಿಂದ ಪಟ್ಟಣದ ಪತ್ರಿಕಾಭವನ ಸಭಾಂಗಣದಲ್ಲಿ ದತ್ತಿನಿಧಿ ಸ್ಥಾಪನೆ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಚ್.ಎನ್.ರವೀಂದ್ರ ಅವರು, ಕೋವಿಡ್, ಅತಿವೃಷ್ಟಿ, ಅನಾವೃಷ್ಟಿ ಸಂದರ್ಭ ಪತ್ರಕರ್ತರು ಸಲ್ಲಿಸಿದ ಸೇವೆ ಶ್ಲಾಘನೀಯ. ಪತ್ರಕರ್ತರು ನ್ಯಾಯ ನಿಷ್ಟೂರತೆಯಿಂದಿರಬೇಕು. ಸಮಾಜದ ಒಳಿತು-ಕೆಡುಕುಗಳನ್ನು ಯಾರ ಮರ್ಜಿಗೂ ಒಳಗಾಗದೇ ತೋರ್ಪಡಿಸಬೇಕು. ಹಾಗಾದಾಗ ಮಾತ್ರ ಸಮಾಜ ಸುರಕ್ಷಿತವಾಗಿರುತ್ತದೆ ಎಂದರು.

ನಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜ ಕಾರ್ಯಕ್ಕೆ ನೀಡಬೇಕು ಎಂದ ರವೀಂದ್ರ ಅವರು, ಪತ್ರಕರ್ತರ ಸಂಘದ ದತ್ತಿನಿಧಿ ಸ್ಥಾಪನೆಗಾಗಿ 50 ಸಾವಿರ ರೂ.ಗಳ ದೇಣಿಗೆ ನೀಡಲಾಗುವುದು ಎಂದು ಘೋಷಿಸಿದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ವಕೀಲ ಈಶ್ವರಚಂದ್ರ ಸಾಗರ್ ಮಾತನಾಡಿ, ಪತ್ರಕರ್ತರು ಸಮಾಜದ ಕಣ್ಣುಗಳಿದ್ದಂತೆ. ಕೊಡಗಿನ ಪತ್ರಿಕೋದ್ಯಮಕ್ಕೆ ಉತ್ತಮ ಹೆಸರಿದೆ. ಇದನ್ನು ಉಳಿಸಿಕೊಂಡು ಹೋಗಬೇಕು. ತಾಲೂಕು ಸಂಘದ ದತ್ತಿನಿಧಿಗೆ 25 ಸಾವಿರ ರೂ. ನೀಡಲಾಗುವುದು ಎಂದು ತಿಳಿಸಿದರು.

ತಾಲೂಕು ಘಟಕದ ಅಧ್ಯಕ್ಷ ಎಚ್.ಆರ್.ಹರೀಶ್ ಕುಮಾರ್, ಕೊಡಗು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷ ಎಸ್.ಎ. ಮುರಳೀಧರ್, ಜಿಲ್ಲಾ ಸಂಘದ ಉಪಾಧ್ಯಕ್ಷ ಕವನ್ ಕಾರ್ಯಪ್ಪ, ತಾಲೂಕು ಕಾರ್ಯದರ್ಶಿ ಡಿ.ಪಿ.ಲೋಕೇಶ್ ಇದ್ದರು. ವಿವಿಧ ಸಂಘ ಸಂಸ್ಥಗಳಿಂದ ಹಲವಾರು ಪ್ರಶಸ್ತಿಗೆ ಭಾಜನರಾಗಿರುವ ಎಚ್.ಎನ್.ರವೀಂದ್ರ ಅವರನ್ನು ಸನ್ಮಾನಿಸಲಾಯಿತು.