ನ್ಯೂಸ್

ಬೇತಾಳಗಳ ಸಮೂಹದ ಕೇಕೆ... ಅಲ್ಲಲ್ಲಿ ಉರಿಯುತ್ತಿರುವ ಶವಗಳು!

ಶ್ರೀ ವಸಿಷ್ಠರು ಹೇಳುತ್ತಿರುವ ಮಂಟಪೋಖ್ಯಾನದ ಕಥಾ ನಾಯಕಿ ಲೀಲಾಮಹಾರಾಣಿ. ಅವಳ ಪತಿಯಾದ ಪದ್ಮಮಹಾರಾಜನು ಮರಣಹೊಂದಿದ್ದಾನೆ. ಲೀಲಾಮಹಾರಾಣಿಯ ಪ್ರಾರ್ಥನೆಯಂತೆ ಶ್ರೀದೇವಿಯು ಪದ್ಮಮಹಾರಾಜನ ಮುಂದಿನ ಜನ್ಮವಾಗಿರುವ ವಿದೂರಥನನ್ನು ತೋರಿಸಲು ಅವನ ರಾಜಧಾನಿಗೆ ಕರೆದುಕೊಂಡು ಬಂದಿದ್ದಾಳೆ. ಸಾಮ್ರಾಟನಾಗಿರುವ ವಿದೂರಥನ ರಾಜಧಾನಿಯ ಸಮೀಪದಲ್ಲಿ ಘೊರ ಯುದ್ಧವು ನಡೆಯುತ್ತಿದೆ. ಯುದ್ಧಾಂಗಣಕ್ಕೆ ಲೀಲಾಮಹಾರಾಣಿ- ಶ್ರೀದೇವಿಯರು ಸೂಕ್ಷ್ಮರೂಪದಿಂದ ಆಗಮಿಸಿದ್ದಾರೆ. ಇಡೀ ದಿನ ಯುದ್ಧ ನಡೆದು ಸಾಯಂಕಾಲದ ಹೊತ್ತಿಗೆ ಯುದ್ಧ ನಿಲ್ಲಿಸಬೇಕೆಂದು ನಿರ್ಣಯ ಬಂದಿದೆ. ಘೊರ ಯುದ್ಧದಲ್ಲಿ ಅಪಾರ ಪ್ರಾಣಹಾನಿ ಆಗಿದೆ. ಈಗ ಆ ದಿನದ ರಾತ್ರಿಯ ವಾತಾವರಣವನ್ನು ಶ್ರೀ ವಸಿಷ್ಠರು ವರ್ಣಿಸುತ್ತಿದ್ದಾರೆ.

‘ಶ್ರೀರಾಮ! ರಾತ್ರಿ ಕಾಲವಾದ್ದರಿಂದ ಪಕ್ಷಿಗಳು ತಮ್ಮ ತಮ್ಮ ಗೂಡಿನಲ್ಲಿ ಸ್ವಲ್ಪವೇ ಹೊತ್ತಿನಲ್ಲಿ ಸಹಜ ನಿದ್ರೆಗೆ ಜಾರಿದವು. ಕಣ್ಣುಗಳನ್ನು ನಿಧಾನವಾಗಿ ಮುಚ್ಚಿಕೊಳ್ಳುತ್ತಾ, ರೆಕ್ಕೆಗಳನ್ನು ಮುದುಡಿಸಿ ಕೊಳ್ಳುತ್ತಾ, ನಿದ್ರೆಯ ಮಂಪರಿನಲ್ಲಿ ಕಷ್ಟಪಟ್ಟು ಕತ್ತನೆತ್ತುತ್ತ ನಿದ್ರಿಸತೊಡಗಿದವು. ಈ ದೃಶ್ಯಕ್ಕೆ ಯುದ್ಧಾಂಗಣದಲ್ಲಿ ಸದೃಶವಾದ ದೃಶ್ಯ ಕಂಡುಬರುತ್ತಿದೆ. ಮರಣಹೊಂದುತ್ತಿರುವ ಸೈನಿಕರ ಕಣ್ಣುಗಳು ನಿಧಾನವಾಗಿ ಮುಚ್ಚುತ್ತಿವೆ. ಯುದ್ಧದ ಮನಸ್ಥಿತಿಯಲ್ಲಿಯೇ ಮರಣ ಹೊಂದುತ್ತಿರುವುದರಿಂದ ಅವರ ಭುಜಗಳಿಂದ (ಕೈಗಳಿಂದ) ಆಯುಧಗಳು ಕಷ್ಟಪಟ್ಟು ಮೇಲಕ್ಕೆ ಎತ್ತಲ್ಪಟ್ಟು ಸ್ವಲ್ಪಹೊತ್ತಿನಲ್ಲಿ ಕೆಳಕ್ಕೆ ಬೀಳುತ್ತಿವೆ. ಪಕ್ಷಿಗಳು ನಿದ್ದೆಯ ಮಂಪರಿನಲ್ಲಿ ಕಷ್ಟದಿಂದ ಕತ್ತನ್ನೆತ್ತಿ ಕೆಳಕ್ಕೆ ಬಿಡುವಂತೆ ಸೈನಿಕರ ಭುಜಗಳು ಮರಣದ ನೋವಿನಿಂದ ಆಯುಧಗಳನ್ನೆತ್ತಿ ಕೆಳಕ್ಕೆ ಬಿಡುತ್ತಿವೆ. ಪಕ್ಷಿಗಳ ಕಣ್ಣುಗಳು ನಿದ್ದೆಯ ಮಂಪರಿನಿಂದ ಮುಚ್ಚಿಕೊಳ್ಳುತ್ತಿದ್ದರೆ, ಸೈನಿಕರ ಕಣ್ಣುಗಳು ಸಾವಿನಿಂದ ಮುಚ್ಚಿ ಕೊಳ್ಳುತ್ತಿವೆ.ಚಂದ್ರನ ಬೆಳದಿಂಗಳು ಬೀಳುತ್ತಿರುವುದ ರಿಂದ, ಕುಮುದವೇ ಮೊದಲಾದ ರಾತ್ರಿ ಅರಳುವ ಹೂವುಗಳು, ಚಂದ್ರನು ಸುಂದರವಾಗಿ ದರ್ಶನ ನೀಡುವಂತೆ, ಉಲ್ಲಾಸ ತುಂಬಿದ ಹೃದಯದಿಂದ ದರ್ಶನ ನೀಡಿ ದವು (ತೋರಿಕೊಂಡವು). ಇದಕ್ಕೆ ಹೋಲಿಕೆ

ಯಾಗುವಂತೆ ಯುದ್ಧದಲ್ಲಿ ಗೆದ್ದ ಪಕ್ಷಗಳ (ತಂಡಗಳ) ವೀರರು ತಮ್ಮ ಹೃದಯದಲ್ಲಿಯೇ ಅರಳುತ್ತಾ ಶೋಭಿಸುತ್ತಿದ್ದರು. ಸಂಧ್ಯಾಕಾಲದ ಕಿರಣಗಳು ಇನ್ನೂ ಸ್ವಲ್ಪ ಉಳಿದುಕೊಂಡಿದ್ದರಿಂದ ಸರೋವರಗಳು ಕೆಂಪಾಗಿವೆ. ಸರೋವರದ ಮುಖಗಳಂತಿರುವ ಕಮಲಗಳು ಸಂಕೋಚಗೊಳ್ಳುತ್ತಿವೆ. ಕಮಲಗಳೆಂಬ ಸರೋವರದ ಅಂಗಗಳಲ್ಲಿ ‘ಶಿಲೀಮುಖ’ (ಭ್ರಮರ)ಗಳು ಮುಚ್ಚಲ್ಪಡುತ್ತಿವೆ. ಈ ದೃಶ್ಯಕ್ಕೆ ಸರಿಯಾಗಿ ಹೋಲುವಂತೆ ಯುದ್ಧಭೂಮಿಯೆಂಬ ಸರೋವರವು ಸೈನಿಕರ ರಕ್ತದಿಂದ ಕೆಂಪಾಗಿತ್ತು. ಯುದ್ಧಭೂಮಿಯಲ್ಲಿ ಬಿದ್ದಿರುವ ಸೈನಿಕರ ಮುಖಗಳೆಂಬ ಕಮಲಗಳು ಸಂಕೋಚಗೊಳ್ಳುತ್ತಿವೆ (ಮರಣದ ಕಾರಣದಿಂದ ಉಲ್ಲಾಸ ಕಳೆದುಕೊಳ್ಳುತ್ತಿವೆ). ಯುದ್ಧರಂಗದಲ್ಲಿರುವ ಸೈನಿಕರ ಅಂಗಗಳಲ್ಲಿ ಶಿಲೀಮುಖ(ಬಾಣ)ಗಳು ಮುಚ್ಚಲ್ಪಟ್ಟಿವೆ.’

‘ಮೇಲೆ ಆಕಾಶವೆಂಬ ಸರೋವರವು ನಕ್ಷತ್ರಗಳೆಂಬ ಕುಮುದಗಳಿಂದ ಅಲಂಕೃತವಾಗಿದ್ದರೆ ಕೆಳಗೆ ನೀರಿನ ಸರೋವರವು ಅರಳುತ್ತಿರುವ ಕುಮುದಗಳೆಂಬ ನಕ್ಷತ್ರಗಳಿಂದ ಅಲಂಕೃತವಾಗಿದೆ. ಹಗಲು ಹೊತ್ತಿನಲ್ಲಿ ಬೇರೆ ಬೇರೆಯಾಗಿ ಓಡಾಡಿಕೊಂಡಿದ್ದ ಪ್ರಾಣಿಗಳು ರಾತ್ರಿಯ ಕತ್ತಲೆಯಲ್ಲಿ ಒಟ್ಟಿಗೆಸೇರಿದರೂ ಪರಸ್ಪರ ಪರಿಚಯ ಇಲ್ಲದಿರುವುದ ರಿಂದ ಒಬ್ಬ ರಿಂದೊಬ್ಬರು ಭಯಪಡುತ್ತಾ ಪರಸ್ಪರ ದೂರವೇ ಉಳಿದರು. ಸೇತು (ಅಣೇಕಟ್ಟು) ಕಿತ್ತುಹೋದ್ದರಿಂದ ನೀರು ಬೇರೆ ಬೇರೆ ದಿಕ್ಕಿನಲ್ಲಿ ಹರಡಿ ಹೋಗುವಂತೆ ಪ್ರಾಣಿಗಳು ಆದಿನ ರಾತ್ರಿ ಪರಸ್ಪರ ದೂರವೇ ಉಳಿದವು. ಬಹುಶಃ ಯುದ್ಧದ ಭಯದ ವಾತಾವರಣದಿಂದ ಪ್ರಾಣಿಗಳೂ ಆತಂಕಿತರಾಗಿದ್ದು ಇದಕ್ಕೆ ಕಾರಣವಾಗಿರಬಹುದು.’ ‘ರಣಾಂಗಣವು ಈ ಸಮಯದಲ್ಲಿ ಹಾಡುತ್ತಾ(ಕೇಕೆಹಾಕುತ್ತಾ) ಕುಣಿಯುತ್ತಿರುವ ಬೇತಾಳಗಳ ಸಮೂಹದಿಂದ ತುಂಬಿಹೋಗಿತ್ತು.

ಅಲ್ಲದೇ ಶವಗಳ ಎದೆಯಮೇಲೆ ಶಬ್ದ ಮಾಡುತ್ತಾ ಕುಣಿಯುತ್ತಿರುವ ರಣಹದ್ದುಗಳು ಮತ್ತು ಕಾಡುಹಂದಿಗಳು ಎಲ್ಲ ಕಡೆ ಕಾಣುತ್ತಿದ್ದವು.’ ‘ಹೀಗೆ ರಾತ್ರಿಯ ಕೆಲವು ಕಾಲ ಕಳೆಯುತ್ತಿದ್ದಂತೆ ರಣರಂಗ ದಲ್ಲಿಯೇ ಕಾಷ್ಠಚಿತೆಗಳು ಉರಿಯಲು ಆರಂಭಿಸಿದವು. (ಅನೇಕ ಶವಗಳ ವಾರಸುದಾರರು ಅಲ್ಲಿಯೇ ಶವದಹನವನ್ನು ಪ್ರಾರಂಭಿಸಿದರು.) ಪಟ ಪಟನೆ ಸದ್ದು ಮಾಡಿ ಉರಿಯುತ್ತಿರುವ ಬೆಂಕಿಯ ಜ್ವಾಲೆಗಳಿಂದ ಹಾರುತ್ತಿರುವ ಕಿಡಿಗಳು ಆಕಾಶದಲ್ಲಿರುವ ನಕ್ಷತ್ರಗಳಂತೆ ಕಾಣುತ್ತಿದ್ದವು. ಪಚ ಪಚನೆ ಶಬ್ದ ಮಾಡುತ್ತ ಮೇದಸ್ಸು, ಮಾಂಸಗಳು ಆ ಬೆಂಕಿಗಳಲ್ಲಿ ಉರಿದುಹೋಗುತ್ತಿದ್ದವು. ಶವಗಳ ಎಲ್ಲ ಅಂಗಗಳ ಅಸ್ಥಿಗಳು ಸ್ಪೋಟದಂತಹ ಶಬ್ದ ಮಾಡುತ್ತಾ ಉರಿದುಹೋಗುತ್ತಿವೆ. ಸ್ಪುಟವಾಗಿ ಕೇಳಿಸುವ ಆ ಶಬ್ದಗಳೊಡನೆ ಚಿತೆಗಳು ಹೊರಮುಖವಾಗಿ ಜ್ವಾಲೆಗಳನ್ನು ಸೂಸುತ್ತಿರುವುದನ್ನು ನೋಡಿದರೆ, ವೀರಯೋಧರೇ ಯುದ್ಧೋನ್ಮುಖರಾಗಿ ಪರಾಕ್ರಮವೆಂಬ ಜ್ವಾಲೆಯೊಂದಿಗೆ ಮುನ್ನುಗ್ಗಿ ಬರುತ್ತಿದ್ದಾರೋ ಎಂಬಂತೆ ಕಾಣುತ್ತಿತ್ತು. ಮತ್ತೆ ಕೆಲವು ಕ್ಷಣಗಳಲ್ಲಿ ಆ ಜ್ವಾಲೆಗಳು ಚಿತೆಗಳ ಒಳಗೆ ಸೇರಿಕೊಳ್ಳುತ್ತಿದ್ದವು. ಹೆಣ್ಣು ಬೇತಾಳಗಳು ಜಲಕ್ರೀಡೆ ಆಡುತ್ತಾ ನೀರಿನೊಳಗೆ ಸೇರಿಕೊಳ್ಳುವಂತೆ ಈ ದೃಶ್ಯ ಕಂಡುಬರುತ್ತಿತ್ತು. ನಾಯಿ, ಕಾಗೆಗಳ ಕೂಗು ಮತ್ತು ಯಕ್ಷ-ಬೇತಾಳಗಳ ಚಪ್ಪಾಳೆಗಳು, ಇವುಗಳ ಕೋಲಾಹಲವು ತಾರಕಕ್ಕೇರಿದವು.

ಹೀಗೆ ವಿವಿಧ ಪ್ರಾಣಿಗಳ ಓಡಾಟದ ಗಲಿಬಿಲಿಯಿಂದ ಆ ಯುದ್ಧಾಂಗಣವು ಬಿರುಗಾಳಿಗೆ ಸಿಲುಕಿದ ಕಾಡಿನಂತೆ ಗೋಚರ ವಾಗುತ್ತಿತ್ತು. ನೆಲದ ಮೇಲೆ ಬಿದ್ದಿರುವ ಶವಗಳ ರಕ್ತ, ಮಾಂಸ, ಕೊಬ್ಬು, ಮೇದಸ್ಸುಗಳನ್ನು ಕಿತ್ತುಕೊಳ್ಳಲು ವ್ಯಗ್ರಗೊಂಡಿರುವ ಡಾಕಿನಿಗಳು (ಒಂದು ವಿಧದ ಸ್ತ್ರೀ ದೇವತೆಗಳು); ಹಾಗೆ ಇನ್ನೊಂದೆಡೆ ರಕ್ತ, ಕೊಬ್ಬು,ಮಾಂಸಗಳನ್ನು ಗಪಗಪನೆ ತಿಂದಿದ್ದರಿಂದ ಕಟವಾಯಿಯಿಂದ (ಬಾಯಿಯ ತುದಿಯಭಾಗದಿಂದ)ರಕ್ತಾದಿಗಳನ್ನು ಸುರಿಸುತ್ತಾ ಓಡಾಡುತ್ತಿರುವ ಪಿಶಾಚಗಳು, ಆ ದೃಶ್ಯದ ಭಯಂಕರತೆಯನ್ನು ಹೆಚ್ಚಿಸಿವೆ.’