ನ್ಯೂಸ್

ಕುಡುಕರ ಅಡ್ಡೆಯಾದ ಶಾಲೆ ಆವರಣ

ರೋಣ: ತಾಲೂಕಿನ ಮಲ್ಲಾಪೂರ ಗ್ರಾಮದ ಮೇಲ್ದರ್ಜೆಗೇರಿಸಲಾದ ಸರ್ಕಾರಿ ಪ್ರಾಥಮಿಕ ಶಾಲೆ ಸುತ್ತಮುತ್ತ ಕುಡುಕರ ಹಾವಳಿ ಹೆಚ್ಚಿದೆ. ಸಂಜೆಯಾಗುತ್ತಿದ್ದಂತೆ ಶಾಲಾ ಆವರಣ ಕುಡುಕರ ಅಡ್ಡೆಯಾಗಿ ಮಾರ್ಪಡುತ್ತದೆ. ಎಲ್ಲಿಬೇಕಲ್ಲಿ ಮದ್ಯದ ಬಾಟಲಿ, ಪೌಚ್​ಗಳು, ಸೇದಿ ಬೀಸಾಕಿದ ಬೀಡಿ, ಸಿಗರೇಟಿನ ತುಂಡುಗಳೇ ಕಾಣಿಸುತ್ತವೆ. ಶಾಲೆ ಆವರಣ ತ್ಯಾಜ್ಯದ ಆಗರವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮುಜುಗರ ಪಟ್ಟುಕೊಳ್ಳುವಂತಾಗಿದೆ.

ಈ ಶಾಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ವಿದ್ಯಾರ್ಥಿಗಳಿದ್ದು, ಸದ್ಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಪಾಠ ನಡೆಯುತ್ತಿದೆ. ಆದರೆ, ಉಳಿದ ಮಕ್ಕಳು ಆಟವಾಡಲು ಇಲ್ಲಿಗೆ ಬರುತ್ತಾರೆ.

ಕುಡಿದ ಮತ್ತಿನಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಎಲ್ಲೆಂದರಲ್ಲಿ ಎಸೆಯುವುದು ಸಾಮಾನ್ಯವಾಗಿದೆ. ಹೀಗಾಗಿ, ಆಟವಾಡುವಾಗ ಮಕ್ಕಳಿಗೆ ಗಾಜಿನ ಚೂರುಗಳು ತಗುಲಿ ಗಾಯಗೊಂಡಿರುವ ಘಟನೆ ನಡೆದಿವೆ ಎಂದು ಇಲ್ಲಿನ ಶಿಕ್ಷಕರು ಹೇಳುತ್ತಾರೆ.

ಗ್ರಾಮದ ಕೆಲ ಹೋಟೆಲ್, ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದೇ ಶಾಲೆಯ ದುಸ್ಥಿತಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶಾಲೆಗೆ ಬರುವ ಮಕ್ಕಳು ಹಾಗೂ ಶಿಕ್ಷಕರಿಗೆ ಬೀಡಿ, ಸಿಗರೇಟು, ಮದ್ಯದ ಬಾಟಲಿಗಳನ್ನು ಸ್ವಚ್ಛ ಮಾಡುವುದೇ ಕೆಲಸವಾಗಿದೆ. ಈ ಕುರಿತಂತೆ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. | ವಿನೋದಗೌಡ ದಾನಪ್ಪಗೌಡ್ರ, ಎಸ್​ಡಿಎಂಸಿ ಅಧ್ಯಕ್ಷ