ನ್ಯೂಸ್

ಡೆಲಿವರಿ ಬಾಯ್‌ಗೆ ಹಿಗ್ಗಾಮುಗ್ಗಾ ಥಳಿಸಿದ ದೃಶ್ಯ ವೈರಲ್

ಬೆಂಗಳೂರು: ಜಯನಗರ 7ನೇ ಹಂತದ ಯಡಿಯೂರು ಸಿಗ್ನಲ್ ಬಳಿ ಆಟೋಗೆ ಬೈಕ್ ತಾಗಿದ ಕಾರಣಕ್ಕೆ ಕೋಪಗೊಂಡ ಚಾಲಕನು ಸ್ನೇಹಿತರ ಜತೆ ಸೇರಿ ಡೆಲಿವರಿ ಬಾಯ್‌ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹಲ್ಲೆಯ ದೃಶ್ಯಾವಳಿ ವೈರಲ್ ಆಗಿದೆ.
ಹಲ್ಲೆಗೊಳಗಾಗಿರುವ ಡೆಲಿವರಿ ಬಾಯ್ ಚರಣ್‌ಕುಮಾರ್ ಈ ಸಂಬಂಧ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಚಾಮರಾಜಪೇಟೆ ಬಳಿಯ ಆಜಾದ್ ನಗರ ನಿವಾಸಿಯಾದ ಚರಣ್‌ಕುಮಾರ್, ತ್ಯಾಗರಾಜನಗರದ ಬಿಗ್ ಬ್ಯಾಸ್‌ಕೆಟ್ ಕಂಪನಿ ಶಾಖೆಯಲ್ಲಿ ಡೆಲಿವರಿ ಬಾಯ್ ಆಗಿದ್ದಾರೆ. ಅವರು ಬೆಳಗ್ಗೆ ಬಿಟಿಎಂ ಲೇಔಟ್‌ಗೆ ಆಹಾರ ಪದಾರ್ಥಗಳನ್ನು ಕೊಡಲು ಬೈಕ್‌ನಲ್ಲಿ ಹೋಗುತ್ತಿದ್ದಾಗ ಯಡಿಯೂರು ಸಿಗ್ನಲ್ ಬಳಿ ಆಟೋಗೆ ಬೈಕ್ ತಾಗಿದೆ.
ಮುಂದೆ ಹೋಗುತ್ತಿದ್ದ ಆಟೊ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದಾನೆ. ಆಗ ಹಿಂದೆ ಬರುತ್ತಿದ್ದ ಚರಣ್‌ಕುಮಾರ್‌ರ ಬೈಕ್, ಆಟೋಗೆ ತಾಗಿದೆ. ಈ ವಿಚಾರವಾಗಿ ಆಟೋ ಚಾಲಕನು ಚರಣ್‌ಕುಮಾರ್ ಜತೆ ವಾಗ್ವಾದ ನಡೆಸಿದ್ದಾನೆ. ನಂತರ ಚರಣ್‌ಕುಮಾರ್ ಅಲ್ಲಿಂದ ಹೊರಟಿದ್ದಾರೆ. ಆದರೆ, ಆಟೋ ಚಾಲಕ ತನ್ನ ಸ್ನೇಹಿತರ ಜತೆ ಚರಣ್‌ಕುಮಾರ್‌ನನ್ನು ಹಿಂಬಾಲಿಸಿಕೊಂಡು ಬಂದು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೆ, ಮನಸೋ ಇಚ್ಛೆ ಥಳಿಸಿದ್ದಾರೆ. ಚರಣ್‌ಕುಮಾರ್‌ರ ತಲೆ, ಭುಜ, ಮುಖದ ಭಾಗದಲ್ಲಿ ಗಾಯವಾಗಿದೆ. ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.