ನ್ಯೂಸ್

10 ವರ್ಷದಿಂದಲೂ ಪೊಲೀಸ್​ ಮೆದುಳಿನಲ್ಲಿದೆ ಬುಲೆಟ್​: ಹೀಗಿದ್ರೂ ಎಲ್ಲರಂತೆ ಜೀವಿಸೋದು ಹೇಗೆ ಸಾಧ್ಯ!

ಮಾಸ್ಕೋ: ಗ್ಯಾಂಗ್​ ಒಂದು ಹತ್ತು ವರ್ಷಗಳ ಹಿಂದೆ ನಡೆಸಿದ್ದ ಗುಂಡಿನ ದಾಳಿಯಲ್ಲಿ ಬುಲೆಟ್ ಒಂದು​ ತಲೆಹೊಕ್ಕಿ ಮೆದುಳು ಸೇರಿದ್ದರು ರಷ್ಯಾದ ಮಾಜಿ ಪೊಲೀಸ್​ ಅಧಿಕಾರಿಯೊಬ್ಬರು ಇನ್ನು ಜೀವಂತವಾಗಿದ್ದು, ಸುಂದರ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ.

ಇಂತಹ ಪ್ರಕರಣಗಳಲ್ಲಿ 10 ಲಕ್ಷಕ್ಕೊಬ್ಬರು ಮಾತ್ರ ಬದುಕುಳಿಯಲು ಸಾಧ್ಯವೆನ್ನುತ್ತಾರೆ ವೈದ್ಯರು. ಇದನ್ನು ಅದೃಷ್ಟ ಎನ್ನಬೇಕೋ ಅಥವಾ ದುರಾದೃಷ್ಟ ಎನ್ನಬೇಕೋ? ವ್ಲಾಡಿಮಿರ್​ ಕ್ರುತೊವ್​ (36) ಮಾತ್ರ ಎಲ್ಲರ ಅಚ್ಚರಿಗೆ ಕಾರಣಕರ್ತರಾಗಿದ್ದಾರೆ.

ವ್ಲಾಡಿಮಿರ್ ಅವರ ಎಕ್ಸ್​ರೇ ವರದಿಯಲ್ಲಿ ಗುಂಡು ತಲೆಯ ಮೇಲ್ಭಾಗದಲ್ಲಿ ಸಿಲುಕಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆಪರೇಷನ್​ ಸಮಯದಲ್ಲಿ ಅದನ್ನು ತೆಗೆದಿದ್ದರೆ ಪ್ರಾಣಕ್ಕೆ ಹಾನಿ ಸಂಭವಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ವೈದ್ಯರು ಅದನ್ನು ಹಾಗೆಯೇ ಬಿಟ್ಟಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವ್ಲಾಡಿಮಿರ್​ 10 ವರ್ಷಗಳಿಂದ ಬದುಕುಳಿದು ಎಲ್ಲರಂತೆ ಸಹಜವಾಗಿಯೇ ಜೀವನ ನಡೆಸುತ್ತಿರುವುದು ಎಲ್ಲರ ಹುಬ್ಬೇರಿಸದೇ ಇರದು.​

ಅಂದಹಾಗೆ ವ್ಲಾಡಿಮಿರ್​ ತಲೆಯಲ್ಲಿರುವುದು 7.62 ಕ್ಯಾಲಿಬರ್​ ನಗನ್​ ರಿವಾಲ್ವರ್​ನಿಂದ ಸಿಡಿದ ಗುಂಡಾಗಿದೆ. ತಲೆಬುರುಡೆಯ ಬುಡಕ್ಕೆ ಪ್ರವೇಶಿಸಿದ ಗುಂಡು ನನ್ನ ಇಡೀ ಮೆದುಳಿನ ಮೂಲಕ ಹಾದುಹೋಯಿತು ಎಂದು ವ್ಲಾಡಿಮಿರ್​ ನೋವಿನ ಕ್ಷಣದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಘಟನೆ ಹಿನ್ನೆಲೆ ಏನು?

ಹತ್ತು ವರ್ಷಗಳ ಹಿಂದೆ ಜೂಜಾಟದ ಕೇಂದ್ರದಲ್ಲಿ ದರೋಡೆವೊಂದು ನಡೆದಿತ್ತು. ಪ್ರಕರಣ ಬೆನ್ನತ್ತಿ ಖದೀಮರ ಗ್ಯಾಂಗ್​ ಹಿಡಿಯಲು ಕಾರ್ಯಾಚರಣೆಗೆ ರಷ್ಯಾ ಪೊಲೀಸರು ಇಳಿದಾಗ ಸೇಂಟ್​ ಪೀಟರ್​ಬರ್ಗ್​ನಲ್ಲಿ ಖದೀಮರ ಗ್ಯಾಂಗ್​ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆಯುತ್ತದೆ. ಈ ಘಟನೆಯಲ್ಲಿ 26 ವರ್ಷದ ವ್ಲಾಡಿಮಿರ್​ ಸಹೋದ್ಯೋಗಿ ಡ್ಮಿಟ್ರಿ ವರೊನಿನ್​ ಸಹ ಗುಂಡಿನ ದಾಳಿಗೆ ಬಲಿಯಾಗುತ್ತಾರೆ.

ಗುಂಡಿನ ದಾಳಿ ಮುಂದುವರಿಯುತ್ತಾ ಗುಂಡೊಂದು ವ್ಲಾಡಿಮಿರ್​ ತಲೆಯೊಕ್ಕುತ್ತದೆ. ಅದಾದ 9 ದಿನಗಳ ನಂತರವಷ್ಟೇ ವ್ಲಾಡಿಮಿರ್​ಗೆ ಎಚ್ಚವಾಗುತ್ತದೆ. ಏಕೆಂದರೆ ಅಲ್ಲಿಯವರೆಗೆ ಅವರು ಕೋಮಾಗೆ ಜಾರಿರುತ್ತಾರೆ. ಅಲೆಕ್ಸಾಂಡ್ರೊವ್ಸ್ಕಿ ಆಸ್ಪತ್ರೆಯಲ್ಲಿ ವ್ಲಾಡಿಮಿರ್​ಗೆ ಆಪರೇಷನ್​ ನಡೆಯುತ್ತದೆ. ಈ ವೇಳೆ ಗುಂಡು ತಲೆಬುರುಡೆಯನ್ನು ಹೊಕ್ಕಿ ಮೆದುಳಿನಲ್ಲಿ ಸೇರಿರುವುದು ವೈದ್ಯರ ಗಮನಕ್ಕೆ ಬರುತ್ತದೆ. ಆದರೆ, ಮೆದುಳಿನಿಂದ ಗುಂಡು ಹೊರತೆಗೆದರೆ ಪ್ರಾಣಕ್ಕೆ ಅಪಾಯ ಎದುರಾಗಬಹುದು ಎಂದರಿತು ಗುಂಡನ್ನು ವೈದ್ಯರು ಅಲ್ಲಿಯೇ ಬಿಡುತ್ತಾರೆ.

ಸದ್ಯ ಆರೋಗ್ಯವಾಗೇ ಇರುವ ವ್ಲಾಡಿಮಿರ್​ ಮರಿನಾ (36) ಎಂಬಾಕೆಯನ್ನು ಮದುವೆಯಾಗಿ ಸುಂದರ ವೈವಾಹಿಕ ಜೀವನವನ್ನು ನಡೆಸುತ್ತಿದ್ದಾರೆ. ಅವರ ಸುಖ ದಾಂಪತ್ಯಕ್ಕೆ ಸಾಕ್ಷಿಯಾಗಿ 5 ತಿಂಗಳ ಹಿಂದಷ್ಟೇ ಹೆಣ್ಣು ಮಗಳು ಜನಿಸಿದ್ದಾಳೆ.

ಅಂದಹಾಗೆ ಖದೀಮರ ಗ್ಯಾಂಗ್ ಹಾಗೂ ಪೊಲೀಸರ ನಡುವೆ ಶೂಟೌಟ್ ನಡೆದಿದ್ದು, 2010 ಅಕ್ಟೋಬರ್​ ತಿಂಗಳಲ್ಲಿ​. ಹತ್ತು ವರ್ಷಗಳಾಗಿದ್ದು, ವ್ಲಾಡಿಮಿರ್​ ಇನ್ನು ಜೀವಂತವಾಗಿದ್ದು, ಎಲ್ಲರ ಅಚ್ಚರಿಗೆ ಪ್ರಮುಖ ಕಾರಣರಾಗಿದ್ದಾರೆ. (ಏಜೆನ್ಸೀಸ್​)