ಶಿಕಾರಿಪುರ: ನಮ್ಮದು ಮಠಗಳ ಸಂಸ್ಕೃತಿ. ಮಠಗಳ ಅಂಗಳ ಎಂದರೆ ಆಧ್ಯಾತ್ಮಿಕ ಸುಗಂಧ ಬೀರುವ ನಂದನವನ ಎಂದು ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ಹಿರೇಮಾಗಡಿ ಮಠದಲ್ಲಿ ಕಾರ್ತಿಕೋತ್ಸವ, ಮಠದ ನಿಯೋಜಿತ ಉತ್ತರಾಧಿಕಾರಿಗಳ ಪಟ್ಟಾಧಿಕಾರ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಧರ್ಮೋತ್ಥಾನ ಕಾರ್ಯಗಳಲ್ಲಿ ಮಠಗಳ ಪಾತ್ರ ದೊಡ್ಡದು. ಗುರುಗಳು ಮತ್ತು ಭಕ್ತರ ನಡುವೆ ಮಠಗಳು ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಹಿರೇಮಾಗಡಿಯ ಶ್ರೀಮಠ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶ್ರೀಗಳ ನೇತೃತ್ವದಲ್ಲಿ ಒಂದು ವಿಶಿಷ್ಟ ಧಾರ್ಮಿಕ ಕೇಂದ್ರವಾಗಿ ಬೆಳೆದಿದೆ ಎಂದರು.
ನಿಯೋಜಿತ ಸ್ವಾಮೀಜಿ ಶಿವಯೋಗಿ ದೇವರು ಮಾತನಾಡಿ, ಪ್ರಸ್ತುತ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು. ಪೂಜ್ಯರ ಆಶಯಗಳು ಮುಂದಿನ ಶ್ರೀಗಳಿಂದ ಕಾರ್ಯರೂಪಕ್ಕೆ ಬರಬೇಕು. ಶ್ರೀಮಠವು ಶಿವಮೂರ್ತಿ ಮುರುಘರಾಜೇಂದ್ರ ಪೂಜ್ಯರ ನೇತೃತ್ವದಲ್ಲಿ ಭಕ್ತಸ್ನೇಹಿಯಾಗಿ ಗಮನಸೆಳೆಯುತ್ತಿದೆ ಎಂದು ಹೇಳಿದರು.
ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಅನಾದಿಕಾಲದಿಂದಲೂ ಮಠ ಮಂದಿರಗಳು, ಗುರುಪರಂಪರೆ, ರಾಜಮಹಾರಾಜರಿಗೆ ಸ್ಫೂರ್ತಿಯ ತಾಣವಾಗಿದ್ದವು. ಪ್ರತಿ ಸಾಮ್ರಾಜ್ಯದ ಹಿಂದೆ ಗುರುಗಳು ಇದ್ದರು. 2025ರ ಏ.18, 19, 20ರಂದು ಶ್ರೀ ಶಿವಯೋಗಿ ದೇವರ ಪಟ್ಟಾಧಿಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶ್ರೀಗಳು ಕಳೆದ 43ವರ್ಷಗಳ ಅವಧಿಯಲ್ಲಿ ಜ್ಯೋತಿಯಂತೆ ಬೆಳಗಿ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಜಡೆ ಹಿರೇಮಠದ ಶ್ರೀ ಅಮರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಪಂಚದ ದಾರ್ಶನಿಕರು, ಸಾಧು ಸಂತರು, ಗುರುಗಳು ಮನುಕುಲದ ಒಳಿತಿಗಾಗಿ ಶ್ರಮಿಸಿ, ಧರ್ಮದ ತಳದಿ ಮೇಲೆ ಬದುಕು ಸಾಗಿಸಲು ದಾರಿ ತೋರಿಸಿದ್ದಾರೆ. ಇದರಂತೆ ನಮ್ಮ ಜೀವನವನ್ನು ರೂಪಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.
ನಿಯೋಜಿತ ಉತ್ತರಾಧಿಕಾರಿ ಶ್ರೀ ಶಿವಯೋಗಿ ದೇವರು, ಬಟಕುರ್ಕಿ ಶ್ರೀ ಗದಿಗಯ್ಯ ದೇವರು, ಶಿರಾಳಕೊಪ್ಪದ ಶ್ರೀ ವಿನಾಯಕ ದೇವರು, ಮಠದ ಕಾರ್ಯದರ್ಶಿ ಬಸವನ ಗೌಡ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೃತ್ಯುಂಜಯ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ರುದ್ರೇಗೌಡ, ಚಂದ್ರಶೇಖರ, ರೂಪಾ ಹಾಲೇಶ್, ಪರಮೇಶ್ವರ ಶಾಸಿ, ಮೂಕಯ್ಯ ಹಿರೇಮಠ, ಶಿಕ್ಷಕ ಬೆನಕಪ್ಪ, ಲತಾ ಯೋಗೇಶ್ವರ್, ವಿ.ಕೆ.ಪಾಟೀಲ್ ಇದ್ದರು.