ಶಿವಮೊಗ್ಗ: ಬಸವಣ್ಣನನ್ನು ಸಾಂಸ್ಕೃತಿಕ ನಾಯಕನನ್ನಾಗಿ ರೂಪಿಸಿದ್ದು, 800 ವರ್ಷಗಳ ಹಿಂದೆಯೇ ವಿಶ್ವಪ್ರಜ್ಞೆ ಮೂಡಿಸಿದ್ದು ವಚನ ಚಳವಳಿಯ ಹೆಗ್ಗಳಿಕೆ ಎಂದು ಕುವೆಂಪು ವಿವಿ ಪ್ರಾಧ್ಯಾಪಕ ಡಾ. ಜಿ.ಪ್ರಶಾಂತ ನಾಯಕ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದಿಂದ ಏರ್ಪಡಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಅಸ್ಪಶ್ಯತೆ, ವರ್ಣಪದ್ಧತಿ, ಮೌಢ್ಯಾಚರಣೆ ತೊಡೆದು ಹಾಕಿದ ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯಲು ನಾವು 350 ವರ್ಷಗಳನ್ನು ತೆಗೆದುಕೊಂಡೆವು ಎಂಬುದೇ ಬೇಸರದ ಸಂಗತಿ ಎಂದರು.
ಬಸವಣ್ಣನ ಜಯಂತಿಯಂತಹ ಪ್ರಮುಖ ಕಾರ್ಯಕ್ರಮಗಳಿಗೂ ಯುವಜನರು ಬರುತ್ತಿಲ್ಲ. ಯಾರಿಗೆ ಇಂದು ಬಸವಣ್ಣನ ತತ್ವಗಳನ್ನು ಅರಿಯುವ ಅವಶ್ಯಕತೆಯಿದೆಯೋ ಅವರೇ ದೂರ ಉಳಿಯುತ್ತಿದ್ದಾರೆ. ಇದನ್ನು ಗಮನಿಸಿದಾಗ ಭವಿಷ್ಯದ ಬಗ್ಗೆ ಆತಂಕ ಕಾಡುತ್ತದೆ. ಇಂತಹ ಜಯಂತಿಗಳು ನಮಗೆ ಆತ್ಮಾವಲೋಕನಕ್ಕೆ ಕಾರಣವಾಗಬೇಕು ಎಂದು ಹೇಳಿದರು.
ಮನುಕುಲವನ್ನು ಒಂದೇ ವೇದಿಕೆಯಲ್ಲಿ ತರಲು ಬಸವಾದಿ ಶರಣರು ಬಯಸಿದ್ದರು. ಆದರೆ ಇಂದು ಜಾತಿಯೇ ವಿಜೃಂಭಿಸುತ್ತಿದೆ. ಬಸವಣ್ಣನವರು ಹೇಳಿದ ಅಂಶಗಳಲ್ಲಿ ಕೆಲವೊಂದನ್ನೂ ಅಳವಡಿಸಿಕೊಳ್ಳಲು ನಾವು ವಿಫಲರಾಗಿದ್ದೇವೆ. ಪರಧರ್ಮ, ಪರವಿಚಾರಗಳನ್ನು ಸಹಿಸಿಕೊಳ್ಳುವುದರಲ್ಲೇ ನಮ್ಮ ಹಿತವಿದೆ. ನಮ್ಮ ಮಾತು ಹೇಗಿರಬೇಕೆಂದು ಬಸವಣ್ಣ ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಇಂದು ನಮ್ಮ ಮಾತುಗಳೇ ದಿಕ್ಕು ತಪ್ಪುತ್ತಿವೆ ಎಂದರು.
ಸಮಾಜದಲ್ಲಿ ಬದುಕನ್ನು ಸಂಕೀರ್ಣಗೊಳಿಸಿ, ಅಸಮಾನತೆಯನ್ನು ವಿಜೃಂಭಿಸಿ, ತಾರತಮ್ಯ ಹೆಚ್ಚಿಸಿ, ಜಾತಿ ಅಹಂಕಾರ ಮೆರೆಯುತ್ತಿರುವುದು ನಮ್ಮ ಮೊದಲ ಸೋಲು. ನಮ್ಮಲ್ಲಿ ವಚನಕಾರರನ್ನು ದೂರವಿಡುವ ಪ್ರಜ್ಞೆ ಕಾಣುತ್ತಿದೆ. ನಮ್ಮ ರಾಜ್ಯದ ಜನ ಬಸವಾದಿ ಶರಣರನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರೆ ಇಡೀ ವಿಶ್ವಕ್ಕೆ ಮಾನವೀಯತೆ, ಜಾತ್ಯತೀತತೆ ಬೋಧಿಸುವ ಗುರುಗಳಾಗಿ ನಾವು ರೂಪುಗೊಳ್ಳಬಹುದಿತ್ತು ಎಂದು ಹೇಳಿದರು.
ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಉಮೇಶ್, ವೀರಶೈವ ಸಮಾಜ ಸೇವಾ ಸಂಘದ ಅಧ್ಯಕ್ಷ ಜ್ಯೋತಿಪ್ರಕಾಶ್, ಉಪಾಧ್ಯಕ್ಷ ಎಸ್.ಪಿ.ದಿನೇಶ್ ಇತರರಿದ್ದರು.