ಸಾಂದರ್ಭಿಕ ಚಿತ್ರ 
ನ್ಯೂಸ್

ಡ್ರಾಪ್ ನೆಪದಲ್ಲಿ ಮೊಬೈಲ್ ದೋಚಿದ ಸವಾರ

ಬೆಂಗಳೂರು: ರಾಪಿಡೋ ಬೈಕ್ ಬುಕ್ ಮಾಡಿಕೊಂಡು ಡ್ರಾಪ್ ಪಡೆಯಲು ಬಂದ ಯುವಕನ ಮೊಬೈಲ್ ದೋಚಿ ಸವಾರ ಪರಾರಿಯಾಗಿದ್ದಾನೆ.

ಸಂಜಯನಗರದ ಅಮನ್ ಚಕ್ಮಾ, ಮೊಬೈಲ್ ಕಳೆದುಕೊಂಡವ. ಇದೇ ತಿಂಗಳು 7ರಂದು ಸ್ನೇಹಿತನನ್ನು ಭೇಟಿ ಮಾಡುವ ಉದ್ದೇಶಕ್ಕೆ ನಾಗಶೆಟ್ಟಿಹಳ್ಳಿಯಿಂದ ಎಂ.ಜಿ. ರಸ್ತೆಗೆ ಹೋಗಲು ಬೈಕ್ ಬುಕ್ ಮಾಡಿದ್ದ.

ಅಲ್ಲಿಗೆ ಬಂದ ಬೈಕ್ ಸವಾರ, ಅಮನ್‌ನ್ನು ಪಿಕಪ್ ಮಾಡಿಕೊಂಡು ಹೋಗುವ ಸಮಯದಲ್ಲಿ ‘ಮ್ಯಾಪ್ ನೋಡಿಕೊಳ್ಳಲು ನಿಮ್ಮ ಮೊಬೈಲ್ ಕೊಡಿ’ ಎಂದು ಕೇಳಿದ್ದ. ಅಮನ್ ಕೊಟ್ಟಿದ್ದ. ಮಾರ್ಗಮಧ್ಯೆ ಸಾಗುವಾಗ ಬಳ್ಳಾರಿ ರಸ್ತೆಯ ಭಾರತ್ ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕಿಸಿಕೊಂಡ ಸವಾರ, ಸಮೀಪದಲ್ಲಿ ಟೀ ಕುಡಿದು ನಂತರ ಹೋಗೋಣ ಎಂದಿದ್ದ.

ಅದಕ್ಕೆ ಅಮನ್, ಸಹ ಒಪ್ಪಿಕೊಂಡಿದ್ದ. ಸ್ವಲ್ಪ ದೂರ ಹೋದ ಮೇಲೆ ಬೈಕ್ ನಿಲ್ಲಿಸಿ ಕೆಳಗಿಳಿಯುವಂತೆ ಸೂಚಿಸಿದ್ದ. ಅಮನ್ ಇಳಿಯುತ್ತಿದಂತೆ, ‘ಪಾರ್ಕ್ ಮಾಡಿ ಬರುತ್ತೇನೆ. ಟೀ ಅಂಗಡಿ ಬಳಿಗೆ ಹೋಗಿ’ ಎಂತೆ ಹೇಳಿ ಮೊಬೈಲ್‌ಸಮೇತ ಪರಾರಿಯಾಗಿದ್ದ. ದಿಕ್ಕು ತೋಚದೆ ವಾಪಸ್ ಮನೆಗೆ ಬಂದ ಹಿಂಬದಿ ಸವಾರ, ಸದಾಶಿವನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.