ಬೈರತಿ ಸುರೇಶ್​ 
ನ್ಯೂಸ್

ಬಿಜೆಪಿಯಲ್ಲೇ ಆಗಲಿದೆ ಕ್ರಾಂತಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ನವೆಂಬರ್​ನಲ್ಲಿ ಕ್ರಾಂತಿ ಆಗುವುದು ಕಾಂಗ್ರೆಸ್​ನಲ್ಲಿ ಅಲ್ಲ, ಬಿಜೆಪಿಯಲ್ಲಿ. ಅದಕ್ಕೆ ಕಮಲ ಪಾಳಯದವರು ಬೊಬ್ಬೆಹೊಡೆಯುತ್ತಿದ್ದಾರೆ ಎಂದು ಸಚಿವ ಬೈರತಿ ಸುರೇಶ್​ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಚರ್ಚಿಸಲು ವಿಷಯವಿಲ್ಲ. ಆದ್ದರಿಂದಲೇ ಅವರ ಪಕ್ಷದಲ್ಲಿ ಆಗುವ ಕ್ರಾಂತಿ ಬಗ್ಗೆ ಮಾತನಾಡುತ್ತಿದ್ದಾರೆ. ಯತ್ನಾಳ್​, ವಿಜಯೇಂದ್ರ, ಅಶೋಕ್​... ಹೀಗೆ ಕಿತ್ತಾಡುತ್ತಿದ್ದಾರೆ. ಆದ್ದರಿಂದ ಬಿಜೆಪಿಯಲ್ಲಿ ಕ್ರಾಂತಿ ಆಗುವ ಸಾಧ್ಯತೆ ಇದೆ ಎಂದರು.

ಸಂಪುಟ ವಿಸ್ತರಣೆ ಕುರಿತು ಸಿಎಂ, ಹೈಕಮಾಂಡ್​ ಹಂತದಲ್ಲಿ ಚರ್ಚೆಯಾಗಿದ್ದು, ಯಾವುದೇ ರೀತಿ ತೀರ್ಮಾನಕ್ಕೂ ನಾವೆಲ್ಲ ಬದ್ಧ. ಸಿಎಂ, ಡಿಸಿಎಂ ಆದಿಯಾಗಿ ಎಲ್ಲ ಸಚಿವರು ಹೇಳುವುದು ಹೈಕಮಾಂಡ್​ ತೀರ್ಮಾನಕ್ಕೆ ಬದ್ಧರಾಗಿ ಅಂತನೇ ಎಂದ ಅವರು, ದಲಿತ ಸಮುದಾಯದ ಸಿಎಂ ಆಗಬೇಕು ಎಂದು ಕೇಳುವುದರಲ್ಲಿ ತಪ್ಪೇನಿಲ್ಲ. ಹಕ್ಕು ಮಂಡನೆ ಮಾಡಲು ಎಲ್ಲರಿಗೂ ಅವಕಾಶವಿದೆ ಎಂದರು.

ಸಿಎಂ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಿ ನಮ್ಮನ್ನು ಸಿಎಂ ಮಾಡಿ ಎಂದು ಯಾರೂ ಕೇಳುತ್ತಿಲ್ಲ. ಅವಕಾಶ ಬಂದರೆ ಪರಿಗಣಿಸಿ ಅಂತ ಕೆಲವರು ಅಭಿಪ್ರಾಯ ತಿಳಿಸಿದ್ದಾರೆ. ಕೆ.ಎಚ್​.ಮುನಿಯಪ್ಪ 7 ಬಾರಿ ಸಂಸದರಾಗಿದ್ದು, ಈಗ ಸಚಿವರಾಗಿದ್ದಾರೆ. ನಂಜೇಗೌಡರು ಸಹ ಗ್ರಾಪಂ ಸ್ಥಾನದಿಂದ ಶಾಸಕರಾಗಿದ್ದಾರೆ. ಸಚಿವರು ಆಗುವ ಅರ್ಹತೆಯಿದ್ದು, ಹೈಕಮಾಂಡ್​ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಜಿಲ್ಲೆಗೆ ಸಿಎಂ ಬರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೈರತಿ ಸುರೇಶ್​, ಕೆಡಿಪಿ ಸಭೆ ಹಾಗೂ ಯರಗೋಳ್​ ಡ್ಯಾಂ ಉದ್ಘಾಟನೆಗೆ ಬಂದು ಹೋಗಿದ್ದಾರೆ. ಮತ ಮರು ಎಣಿಕೆ ಸಂಬಂಧಕ್ಕೂ, ಸಿಎಂ ಬರೊದಕ್ಕೂ ಸಂಬಂಧವಿಲ್ಲ. ಸಮಯ ನೋಡಿಕೊಂಡು ಆಗಮಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.