ಹುಣಸೂರು: ಕಂದಾಯ ಸಚಿವ ಕೃಷ್ಣ ಬೈರೇಗೌಡ ನಗರದ ಬೈಪಾಸ್ ರಸ್ತೆಯಲ್ಲಿರುವ ತಾಲೂಕು ಕಚೇರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಕತಡಗಳ ಪರಿಶೀಲನೆ ನಡೆಸಿದರು. ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವುದನ್ನು ಗಮನಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಚಿವ ಬೈರೇಗೌಡ ಅವರು ತಾಲೂಕು ಕಚೇರಿಯ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ವಾಹನದಿಂದ ಕೆಳಗಿಳಿದು ನಡೆದುಕೊಂಡು ತಾಲೂಕು ಕಚೇರಿ ಆವರಣ ಪ್ರವೇಶಿಸಿದರು. ನಂತರ ನೇರವಾಗಿ ಶಿರಸ್ತೇದಾರರ ಕಚೇರಿಯತ್ತ ಸಾಗಿದರು. ಅಷ್ಟರಲ್ಲಾಗಲೇ ಸಾರ್ವಜನಿಕರು ಸಚಿವರನ್ನು ಗುರುತಿಸಿ ಅವರನ್ನು ಹಿಂಬಾಲಿಸಿದರು. ಶಿರಸ್ತೇದಾರ್ ಶ್ರೀಪಾದ್‌ರಿಗೆ ವಿಲೇ ಆಗದೇ ಉಳಿದಿರುವ ಕಡತಗಳ ಪಟ್ಟಿಯ ರಿಜಿಸ್ಟ್ರರ್ ಪುಸ್ತಕವನ್ನು ನೀಡಲು ಕೋರಿದರು. ಅಧೀನ ಅಧಿಕಾರಿ ಪ್ರಶಾಂತ್ ಕಡತವನ್ನು ತಂದರು. ಅದರಲ್ಲಿ ಸಾರ್ವಜನಿಕರು ನೀಡಿರುವ ಅರ್ಜಿಗಳನ್ನು ತಿಂಗಳುಗಳ ಕಾಲ ವಿಲೇ ಆಗದಿರುವುದನ್ನು ಕಂಡು ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿ ಕೊರತೆಯಿದ್ದು, ಇರುವ ಸಿಬ್ಬಂದಿಯಿಂದಲೇ ಕೆಲಸ ಮಾಡಿಸುತಿದ್ದೇವೆ ಎಂದು ಶಿರಸ್ತೇದಾರ್ ಸಮಜಾಯಿಷಿ ನೀಡಲು ಮುಂದಾದಾಗ ಸಚಿವರು ಕಾರಣಗಳನ್ನು ಹೇಳಬೇಡಿ ಎಂದರು.
ಇ ಆಫೀಸ್ ಓಪನ್ ಆಗಲಿಲ್ಲ: ಈ ನಡುವೆ ಕಂದಾಯ ಇಲಾಖೆ ಹೊರತಂದಿರುವ ಇ ಆಫೀಸ್ ಆನ್‌ಲೈನ್ ತೆರೆದು ತೋರಿಸಿ ಎಂದು ಸಿಬ್ಬಂದಿ ಪ್ರಶಾಂತ್‌ರಿಗೆ ತಿಳಿಸಿದರು. ನಾಲ್ಕೈದು ನಿಮಿಷಗಳಾದರೂ ಆನ್‌ಲೈನ್ ಓಪನ್ ಆಗಲಿಲ್ಲ. ಇದರಿಂದ ಕುಪಿತರಾದ ಸಚಿವರು, ನೀವು ಈ ತಂತ್ರಜ್ಞಾನದ ಬಳಕೆ ಮಾಡುತ್ತಿಲ್ಲವೆಂದು ತಿಳಿಯಿತು. ಹಾಗಾಗಿ ಅದು ಓಪನ್ ಆಗುತ್ತಿಲ್ಲ. ಕರ್ತವ್ಯದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಈ ತಂತ್ರಜ್ಞಾನದ ಬಳಕೆ ಮಾಢಲು ಸೂಚಿಸಲಾಗಿದೆ. ಆದರೆ ಇಲ್ಲಿ ಅದರ ಉಲ್ಲಂಘನೆಯಾಗುತ್ತಿದೆ. ಇನ್ನೇನು ಕೆಲಸ ಮಾಡುತ್ತಿದ್ದೀರಿ? ವಿಳಂಬವಾಗಲು ನೂರಾರು ನೆಪ ಹೇಳುವ ನೀವು, ಕೆಲಸ ಮಾಡಲು ಕೇವಲ 5 ಕಾರಣ ಕೊಡಿ ನೋಡೋಣವೆಂದು ಚಾಟಿ ಬೀಸಿದರು.
ಪೌತಿ ಖಾತೆ ಆಂದೋಲನ ಮಾಡಿಲ್ಲ ಯಾಕೆ?: ಜಿಲ್ಲಾ ಮಟ್ಟದ ಸಭೆಯಲ್ಲಿ ಜಿಲ್ಲೆಯಾದ್ಯಂತ ಒನ್ ಟು ಫೈವ್ ಮತ್ತು ಪೌತಿಖಾತೆ ಆಂದೋಲನ ಆಯೋಜಿಸುವ ಮೂಲಕ ಕಂದಾಯ ಇಲಾಖೆಯ ಜ್ವಲಂತ ಸಮಸ್ಯೆ ಪರಿಹಾರಕ್ಕೆ ಕ್ರಮವಹಿಸಬೇಕೆಂದು ಸೂಚಿಸಿದ್ದೆ. ಆದರೆ ನೀವ್ಯಾರು ಅದನ್ನು ಮಾಡಿಲ್ಲ ಯಾಕೆ? ಪ್ರತಿಯೊಂದು ಹೋಬಳಿ ವ್ಯಾಪ್ತಿಯಲ್ಲಿ ವಿಎಗಳು ಸ್ವಯಂಪ್ರೇರಿತರಾಗಿ ಒನ್ ಟು ಫೈವ್ ಕಾರ್ಯವನ್ನು 15 ದಿನಕ್ಕೊಮ್ಮೆ ಕನಿಷ್ಟ ಒಂದು ಪ್ರಕರಣವನ್ನಾದರೂ ಪೂರ್ಣಗೊಳಿಸಿ ವರದಿ ನೀಡಲು ಸೂಚಿಸಿದ್ದೆ. ನಿಮ್ಮಲ್ಲಿ ಎಷ್ಟು ಪ್ರಕರಣಗಳು ಪೂರ್ಣಗೊಂಡಿವೆ? ಪೌತಿಖಾತೆ ಆಂದೋಲನ ಆಯೋಜಿಸಿ ಎಷ್ಟು ಪ್ರಕರಣಗಳಿಗೆ ಪರಿಹಾರ ನೀಡಿದ್ದೀರಿ? ಇದ್ಯಾವುದು ಮಾಡಿಲ್ಲವೆಂದರ ಸರ್ಕಾರದ ಆದೇಶಕ್ಕೆ ಕಿಮ್ಮತ್ತಿಲ್ಲವೆನ್ನುವುಧೇ ನಿಮ್ಮ ಅಭಿಪ್ರಾಯ ಎಂದು ಅಲ್ಲಿದ್ದ ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಖಾರವಾಗಿ ಪ್ರಶ್ನಿಸಿದಾಗ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರು.
ಸಚಿವರ ಜೊತೆಯಲ್ಲಿದ್ದ ಉಪವಿಭಾಗಾಧಿಕಾರಿ ಮಹಮದ್ ಹ್ಯಾರಿಸ್ ಸುಮೇರರಿಗೆ ಪೌತಿಖಾತೆ ಆಂದೋಲನ ಆಯೋಜಿಸುವ ಕುರಿತು ಗಮನಹರಿಸಿ ವರದಿ ನೀಡಿರೆಂದು ಸೂಚಿಸಿದರು. ನಂತರ ಶ್ರೀರಂಗಪಟ್ಟಣದಲ್ಲಿ ಕಾರ್ಯಕ್ರಮವಿದೆಯೆಂದು ತಿಳಿಸಿ ಅಲ್ಲಿಂದ ತೆರಳಿದರು.
ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಯದುಗಿರೀಶ್, ಮುಖಂಡರಾದ ಪುಟ್ಟರಾಜು, ರವಿ, ಶಿವಣ್ಣ ಹಾಗೂ ಸಾರ್ವಜನಿಕರು ಹಾಜರಿದ್ದರು.
ರಾಗಿಗೆ ಬರಪರಿಹಾರ ಧನ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ್ದರೂ, ಪ್ರಮುಖ ಬೆಳೆಯಾದ ರಾಗಿಯನ್ನು ಬರಪರಿಹಾರ ಬೆಳೆಯ ಪಟ್ಟಿಯಲ್ಲಿ ಸೇರಿಸಿಲ್ಲ. ಕೆಲವೊಂದು ತಾಂತ್ರಿಕ ಕಾರಣಗಳನ್ನು ಅಧಿಕಾರಿಗಳು ತಿಳಿಸುತ್ತಿದ್ದಾರೆ. ತಾಲೂಕಿನಾದ್ಯಂತ 20 ಸಾವಿರಕ್ಕೂ ಹೆಚ್ಚು ರೈತರು ಇದರಿಂದ ಅನ್ಯಾಯಕ್ಕೊಳಗಾಗಿದ್ದಾರೆ ಎಂದು ವಿಜಯವಾಣಿ ಪತ್ರಿಕೆ ಸಚಿವರನ್ನು ಪ್ರಶ್ನಿಸಿದಾಗ, ಈ ಕುರಿತು ಸಮಗ್ರ ವರದಿಯನ್ನು ತಮಗೆ ನೀಡಿರೆಂದು ಉಪವಿಭಾಗಾಧಿಕಾರಿಗೆ ಸಚಿವರು ಸೂಚಿಸಿ, ನಾನು ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬಗೆಹರಿಸುತ್ತೇನೆಂದು ಪತ್ರಿಕೆಗೆ ತಿಳಿಸಿದರು.