ನ್ಯೂಸ್

ಕಾರ್ಮಿಕರನ್ನು ವಾಪಸ್ ಕರೆಸಿದ ‘ಕೀರ್ತಿ’ ತಮ್ಮದಾಗಿಸಿಕೊಳ್ಳಲು ರಾಜಕಾರಣಿಗಳ ನೂಕುನುಗ್ಗಲು

ಮಂಗಳೂರು: ಲಾಕ್‌ಡೌನ್‌ನಿಂದಾಗಿ ಲಕ್ಷದ್ವೀಪದಲ್ಲಿ ಸಿಲುಕಿದ್ದ ಮಂಗಳೂರಿನ 19 ಕಾರ್ಮಿಕರು ಇಂಡಿಯನ್ ಕೋಸ್ಟ್ ಗಾರ್ಡ್ ಸಹಕಾರದಲ್ಲಿ ಗುರುವಾರ ‘ಅಮಿನ್‌ದಿವಿ’ ಹಡಗಿನ ಮೂಲಕ ಹಳೇ ಬಂದರಿಗೆ ಬಂದಿಳಿದರು.

ಈ ಕಾರ್ಮಿಕರನ್ನು ಸ್ವಾಗತಿಸಲು ಕಾಂಗ್ರೆಸ್‌ನ 200ರಷ್ಟು ಕಾರ್ಯಕರ್ತರು ದೈಹಿಕ ಅಂತರವನ್ನೂ ಕಾಯ್ದುಕೊಳ್ಳದೆ ಅಲ್ಲಿ ಸೇರಿದ್ದರು. ಹಡಗು ಬರುತ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸಹಿತ ಹಲವು ಪ್ರಮುಖರು ಕಾರ್ಮಿಕರನ್ನು ಸ್ವಾಗತಿಸಿ, ಕಾರ್ಮಿಕರನ್ನು ಕರೆಸಿಕೊಂಡ ‘ಕ್ರೆಡಿಟ್’ ಪಡೆಯಲು ನೂಕುನುಗ್ಗಲು ನಡೆಸಿದರು. ಈ ವಿಷಯದಲ್ಲಿ ಬಿಜೆಪಿಯವರೂ ಹಿಂದೆ ಬೀಳಲಿಲ್ಲ.

ಶಾಸಕ ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ, ಮಾಜಿ ಮೇಯರ್ ಅಶ್ರಫ್, ಕಾರ್ಪೊರೇಟರ್ ಲತೀಫ್, ಕರೊನಾ ನಿಗ್ರಹ ದಳ ಅಧಿಕಾರಿಗಳು, ಕಾರ್ಮಿಕರ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಕಾರ್ಮಿಕರನ್ನು ಹೂ ನೀಡಿ ಬರಮಾಡಿಕೊಂಡರು.

ವ್ಯಾಪಾರ, ಟೈಲ್ಸ್ ಕೆಲಸ, ಗುಜರಿ ಸಂಗ್ರಹ ಇತ್ಯಾದಿ ಕೆಲಸಗಳಿಗೆಂದು ತೆರಳಿದ್ದ ಮೂವರು ಮಹಿಳೆಯರ ಸಹಿತ 19 ಮಂದಿ ಲಕ್ಷದ್ವೀಪದ ಕಿಲ್ತಾನ್, ಕವರತ್ತಿ, ಅಗಟ್ಟಿ ದ್ವೀಪದಲ್ಲಿ ಎರಡು ತಿಂಗಳಿನಿಂದ ಬಾಕಿಯಾಗಿದ್ದರು. ಕರ್ನಾಟಕ ಸರ್ಕಾರದ ಅನುಮತಿಯೊಂದಿಗೆ ಅಲ್ಲಿನ ಆಡಳಿತ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸಿ ಕಳುಹಿಸಿಕೊಟ್ಟಿದೆ. ಮಂಗಳೂರಿನಲ್ಲಿ ದಡಕ್ಕೆ ಆಗಮಿಸಿದ ಬಳಿಕ ಹಡಗಿನಲ್ಲೇ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಯಿತು.