ನ್ಯೂಸ್

ಇಲ್ಲಿ ಇಂದಿನ ಸಿನಿಮಾ ಸ್ಟಾರ್​ಗಳೇ ಮುಂದಿನ ಮುಖ್ಯಮಂತ್ರಿಗಳು?!

ಚೆನ್ನೈ: 'ಇಂದಿನ ಮಕ್ಕಳೇ ಮುಂದಿನ ಪೀಳಿಗೆ' ಎಂಬ ನಾಣ್ಣುಡಿ ಇದೆ. ಆದರೆ ಇಲ್ಲಿ 'ಇಂದಿನ ಸಿನಿಮಾ ಸ್ಟಾರ್​ಗಳೇ ಮುಂದಿನ ಮುಖ್ಯಮಂತ್ರಿಗಳು' ಎಂದರೂ ತಪ್ಪೇನಲ್ಲ. ಮಾತ್ರವಲ್ಲ, ಕಳೆದ ಐದು ದಶಕಗಳ ಇಲ್ಲಿನ ರಾಜಕೀಯ ಕೂಡ ಈ ಮಾತಿಗೆ ಪುಷ್ಠಿ ನೀಡುವಂತೆಯೇ ಇದೆ. ಇದೀಗ ಇಲ್ಲಿನ ರಾಜಕೀಯ ಬೆಳವಣಿಗೆ ಕೂಡ ಇದಕ್ಕೆ ಪೂರಕವಾಗಿಯೇ ಕಾಣಿಸುತ್ತಿದೆ.

ಹೌದು.. ಇಂಥದ್ದೊಂದು ವಿದ್ಯಮಾನಕ್ಕೆ ಸಾಕ್ಷಿಯಾಗಿರುವುದು ತಮಿಳುನಾಡು. ಸೂಪರ್​ಸ್ಟಾರ್ ರಜನಿಕಾಂತ್​ ಚುನಾವಣಾ ರಾಜಕೀಯಕ್ಕೆ ಧುಮುಕುತ್ತಿರುವ ಬಗ್ಗೆ ಹೆಚ್ಚು ಕಾರ್ಯಪ್ರವೃತ್ತರಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳ ನಡುವಿನ ನಂಟಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ರಾಜಕೀಯ ಕ್ಷೇತ್ರದಲ್ಲಿ ಸದ್ಯದಲ್ಲೇ ಸಕ್ರಿಯವಾಗಿ ತೊಡಗಿಕೊಳ್ಳುವ ಬಗ್ಗೆ ರಜನಿಕಾಂತ್ ಗುರುವಾರ ಘೋಷಿಸಿಕೊಂಡಿದ್ದಾರೆ. ಮುಂದಿನ ರಾಜಕೀಯ ಬೆಳವಣಿಗೆಗಳಲ್ಲಿ ಪವಾಡ ಸಂಭವಿಸಲಿದೆ ಎಂದಿರುವ ಅವರು ರಾಜಕೀಯ ಬೆಳವಣಿಗೆಯಲ್ಲಿ ನಾನೊಂದು ಸಣ್ಣ ಸಾಧನ. ಆದರೆ ನನ್ನ ಗೆಲುವು ಜನರ ಗೆಲುವು ಎಂದು ಅವರು ಹೇಳಿಕೊಂಡಿದ್ದಾರೆ.

ತಮಿಳುನಾಡಿನ ಕಳೆದ ಐದು ದಶಕಗಳ ರಾಜಕೀಯವನ್ನು ಗಮನಿಸಿದರೆ ಐವರು ಮುಖ್ಯಮಂತ್ರಿಗಳು ಸಿನಿಮಾ ಕ್ಷೇತ್ರದವರೇ ಆಗಿದ್ದಾರೆ. ಮುಖ್ಯಮಂತ್ರಿಗಳಾಗಿದ್ದ ಸಿ.ಎನ್​. ಅಣ್ಣಾದೊರೈ, ಎಂ. ಕರುಣಾನಿಧಿ, ಎಂ.ಜಿ.ರಾಮಚಂದ್ರನ್​, ಜಾನಕಿ ರಾಮಚಂದ್ರನ್​, ಜೆ.ಜಯಲಲಿತಾ ಅವರು ಸಿನಿಮಾ ಕಲಾವಿದರೇ ಆಗಿದ್ದರು. ಇವರಷ್ಟೇ ಅಲ್ಲದೆ ಸಿನಿಮಾ ಕಲಾವಿದರಾದ ಶಿವಾಜಿ ಗಣೇಶನ್​, ಟಿ.ರಾಜೇಂದರ್​, ಎಂ. ಕಾರ್ತಿಕ್​, ಶರತ್​ಕುಮಾರ್, ಆರ್.ರಾಮರಾಜನ್​, ವಗೈ ಚಂದ್ರಶೇಖರ್, ನೆಪೋಲಿಯನ್​, ಖುಷ್​ಬೂ, ಸಿ.ಆರ್.ಸರಸ್ವತಿ, ಅನಂತರಾಜ್​, ರಾಧಾರವಿ ಮುಂತಾದವರೂ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಇಲ್ಲಿ ಸಿನಿಮಾ ಕಲಾವಿದರು ಮಾಸ್​ ರಾಜಕಾರಣಿಗಳಾಗಿ ಗುರುತಿಸಿಕೊಳ್ಳುವ ಟ್ರೆಂಡ್​ ಎಂಜಿಆರ್ ಕಾಲದಲ್ಲಾಗಿತ್ತು. ಡಿಎಂಕೆ ಪಕ್ಷದಿಂದ ಬೇರ್ಪಟ್ಟ ಎಂಜಿಆರ್ ಎಐಎಡಿಎಂಕೆ ಪಕ್ಷ ಹುಟ್ಟುಹಾಕಿ ಮುಖ್ಯಮಂತ್ರಿಯೂ ಆದರು. ಸದ್ಯ ಮುಂದಿನ ಚುನಾವಣೆಯನ್ನು ಸೂಪರ್ ಸ್ಟಾರ್ ರಜನಿಕಾಂತ್, ಕಮಲಹಾಸನ್​ ಹಾಗೂ ಎ.ವಿಜಯಕಾಂತ್ ಅವರು ಗಂಭೀರವಾಗಿ ಪರಿಗಣಿಸಿದ್ದು, ಇವರಲ್ಲಿ ಯಾರಾದರೂ ಮುಖ್ಯಮಂತ್ರಿಯಾದರೂ ಅಚ್ಚರಿಯೇನಲ್ಲ ಎಂಬ ಮಾತುಗಳು ತಮಿಳುನಾಡಿನಲ್ಲಿ ಕೇಳಿಬರುತ್ತಿವೆ. (ಏಜೆನ್ಸೀಸ್​)