ಬೆಂಗಳೂರು: ಚತುರ್ಭಾಷಾ ತಾರೆಯಾಗಿ 200 ಚಿತ್ರಗಳಲ್ಲಿ ನಟಿಸಿದ ಬಿ.ಸರೋಜಾದೇವಿ ಅವರು ಮನೋಜ್ಞ ಅಭಿನಯದಿಂದಲೇ ಪ್ರೇಕ್ಷಕರ ಮನಗೆದ್ದವರು. ನಾಲ್ಕು ಭಾಷೆಗಳಲ್ಲೂ ಸೂಪರ್ಸ್ಟಾರ್ ನಟರೊಂದಿಗೆ ಅಭಿನಯಿಸಿ, ಪ್ರತಿಭೆಯ ಮೂಲಕ ಗಮನ ಸೆಳೆದವರು. ಐತಿಹಾಸಿಕ, ಪೌರಾಣಿಕ ಪಾತ್ರಗಳಿಗೆ ಅವರು ಜೀವ ತುಂಬಿದ ಪರಿಯಂತೂ ಅಸಾಧಾರಣ. ಕನ್ನಡ ಚಿತ್ರರಂಗದ ಹೆಮ್ಮೆಯ ಈ ಸಾಧಕಿ ಬೆಳ್ಳಿತೆರೆಯನ್ನು ಬೆಳಗಿದರು. ಸ್ಯಾಂಡಲ್ವುಡ್ನ ಹಲವು ನಟ-ನಟಿಯರಿಗೆ ಮಾರ್ಗದರ್ಶನ ಮಾಡಿದರು. ಭೌತಿಕ ಲೋಕ ತೊರೆದರೂ ಸರೋಜಾದೇವಿಯವರ ಸಿನಿಮಾ ಪ್ರಪಂಚ ಪ್ರೇಕ್ಷಕರಿಗೆ ಎಂದೆಂದಿಗೂ ಅನುಭವದ ಪಾಠಗಳನ್ನು ಕಲಿಸುತ್ತದೆ.
ಸಾಮಾನ್ಯ ಹಳ್ಳಿಯಿಂದ ಬಂದ ಬಿ.ಸರೋಜಾದೇವಿ ಚಿತ್ರರಂಗದಲ್ಲಿ ‘ಲೇಡಿ ಸೂಪರ್ಸ್ಟಾರ್’, ‘ಅಭಿನಯ ಸರಸ್ವತಿ’, ‘ಕನ್ನಡತು ಪೈಂಗಿಲಿ’ (ಕನ್ನಡದ ಗಿಳಿ) ಎಂದೇ ಪ್ರಸಿದ್ಧರಾದರು. 1955ರಿಂದ ಕಲಾ ಬದುಕು ಆರಂಭಿಸಿ 2019ರವರೆಗೆ ಏಳು ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಹೆಜ್ಜೆ ಮೂಡಿಸಿದ್ದಾರೆ. ಸುಂದರ ವದನ, ವೈಯಾರ ಹಾಗೂ ಭಾವತೀವ್ರವಾದ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.
ಆರಂಭಿಕ ಜೀವನ: ಸರೋಜಾದೇವಿ 1938ರ ಜನವರಿ 7ರಂದು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದಲ್ಲಿ ಒಕ್ಕಲಿಗ ಕುಟುಂಬದಲ್ಲಿ ಜನಿಸಿದರು. ತಂದೆ ಭೈರಪ್ಪ ಪೊಲೀಸ್ ಅಧಿಕಾರಿ. ತಾಯಿ ರುದ್ರಮ್ಮ. ಇವರು ಈ ದಂಪತಿಯ ನಾಲ್ಕನೇ ಮಗಳು. ಚಿಕ್ಕಂದಿನಿಂದಲೂ ಸರೋಜಾದೇವಿ ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದ್ದರು. ಅವರ ಕಲಾಪ್ರೀತಿಗೆ ಕುಟುಂಬದಿಂದ ಪ್ರೋತ್ಸಾಹ ಇತ್ತು. ಸರೋಜಾದೇವಿ ನೃತ್ಯ ಕಲಿಯುವುದು ತಂದೆ ಭೈರಪ್ಪ ಅವರ ಒತ್ತಾಸೆಯೂ ಆಗಿತ್ತು. ಜತೆಗೆ, ನಟನೆಯನ್ನು ವೃತ್ತಿಯಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ಈಜುಡುಗೆಗಳು ಮತ್ತು ತೋಳಿಲ್ಲದ ಬ್ಲೌಸ್ ತೊಡುವಂತಿಲ್ಲ ಎಂಬಿತ್ಯಾದಿ ಕಟ್ಟುನಿಟ್ಟಿನ ಡ್ರೆಸ್ಕೋಡ್ನ್ನು ತಾಯಿ ವಿಧಿಸಿದರು. ಇದನ್ನೇ ಅವರು ತಮ್ಮ ವೃತ್ತಿಜೀವನದ ಉಳಿದ ಅವಧಿಗೆ ಅನುಸರಿಸಿದರು. 13ನೇ ವಯಸ್ಸಿನಲ್ಲಿ ಒಂದು ಸಮಾರಂಭದಲ್ಲಿ ಸರೋಜಾದೇವಿ ಹಾಡುತ್ತಿದ್ದಾಗ, ಅದನ್ನು ಕಂಡು ಬಿ.ಆರ್. ಕೃಷ್ಣಮೂರ್ತಿಯವರು ಚಿತ್ರದ ಪ್ರಸ್ತಾಪ ಮಾಡಿದಾಗ, ಅದನ್ನು ನಿರಾಕರಿಸಿದ್ದರು.
1960ರ ದಶಕ ಸರೋಜಾದೇವಿ ಅವರ ಯಶಸ್ಸಿನ ಉತ್ತುಂಗದ ಕಾಲ. ಆಗ ಅವರು ಬಹುಬೇಡಿಕೆಯ ನಟಿಯಾಗಿದ್ದರು. ಆ ಸಮಯದಲ್ಲೇ, 1967ರ ಮಾರ್ಚ್ 1ರಂದು ಶ್ರೀಹರ್ಷ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದರೂ ಸರೋಜಾ ದೇವಿ ಚಿತ್ರರಂಗದಿಂದ ದೂರವಾಗಲಿಲ್ಲ. ಅವರ ನಟನೆಯ ವೃತ್ತಿಗೆ ಪತಿ ಬೆಂಬಲವಾಗಿದ್ದರು. ಆದರೆ, 1986ರಲ್ಲಿ ಶ್ರೀಹರ್ಷ ಅಕಾಲಿಕವಾಗಿ ಮರಣ ಹೊಂದಿದರು. ಪತಿಯ ನಿಧನದಿಂದಾಗಿ ಖಿನ್ನರಾಗಿದ್ದ ಸರೋಜಾದೇವಿ ಒಂದು ವರ್ಷ ಯಾವುದೇ ಚಿತ್ರಗಳಲ್ಲಿ ನಟಿಸಲಿಲ್ಲ. ಬಳಿಕ ಹಂತ ಹಂತವಾಗಿ ಮತ್ತೆ ಚಿತ್ರರಂಗಕ್ಕೆ ಮರಳಿದರು.
ಸರೋಜಾದೇವಿಯವರ ಕಲಾಸೇವೆಯನ್ನು ಪರಿಗಣಿಸಿ ಅವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಪದ್ಮಶ್ರೀ (1969), ಪದ್ಮಭೂಷಣ (1992), ಜೀವಮಾನ ಸಾಧನೆ ರಾಷ್ಟ್ರಪ್ರಶಸ್ತಿ (2008), ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ (2009), ಕರ್ನಾಟಕ ಸರ್ಕಾರದಿಂದ ಡಾ. ರಾಜಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ (2009), ಆಂಧ್ರಪ್ರದೇಶ ಸರ್ಕಾರದಿಂದ ರಾಷ್ಟ್ರೀಯ ಎನ್ಟಿಆರ್ ಪ್ರಶಸ್ತಿ (2001, 2009), ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ (1993), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1988), ಕಾಂಚನಮಾಲಾ ಪ್ರಶಸ್ತಿ (1980), ಅಭಿ ನಯ ಸರಸ್ವತಿ ಗೌರವ (1965) ಹಾಗೂ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ (2006) ಸೇರಿ ಹಲವಾರು ಪ್ರಶಸ್ತಿ, ಗೌರವಗಳು ಸಂದಿವೆ.
ಸರೋಜಾದೇವಿ ಕನ್ನಡಕ್ಕಿಂತ ಹೆಚ್ಚು ಮಿಂಚಿದ್ದು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ. ಇನ್ನೂರರ ಪೈಕಿ ನೂರಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿದ್ದರು. 1956ರಲ್ಲಿ ತೆರೆಕಂಡ ಎ. ಭೀಮ್ ಸಿಂಗ್ ನಿರ್ದೇಶನದ ‘ತಿರುವನಂ’ ಮೂಲಕ ತಮಿಳು ಚಿತ್ರರಂಗಕ್ಕೂ ಡೆಬ್ಯೂ ಮಾಡಿದರು. ಬಳಿಕ ಬಿ.ಆರ್. ಪಂತುಲು ನಿರ್ದೇಶನದ ತಂಗಮಲೈ ರಾಗಾಸಿಯಂ (1957), ಶಭಾಶ್ ಮೀನಾ (1958), ಸೆಂಗೊಟೈ ಸಿಂಗಂ (25ನೇ ಚಿತ್ರ- 1958), ಕಲ್ಯಾಣ ಪರಿಸು (1959), ಇರುವರ್ ಉಲ್ಲಂ (50ನೇ ಸಿನಿಮಾ), ತಯುಮ್ ಮಗಳುಮ್ (75ನೇ ಸಿನಿಮಾ-1965), ಪೆನ್ ಎಂಡ್ರಲ್ ಪೆನ್ (100ನೇ ಸಿನಿಮಾ- 1967), ತಂಗಮಾಲರ್ (125ನೇ ಚಿತ್ರ-1969), ಧರ್ಮ ದೇವನ್ (150ನೇ ಚಿತ್ರ- 1989), ಪರಾಂಬರಿಯಮ್ (150ನೇ ಚಿತ್ರ-1993) ಸೇರಿ ಹಲವು ತಮಿಳು ಚಿತ್ರಗಳಲ್ಲಿ ಅವರು ಮನೋಜ್ಞವಾಗಿ ನಟಿಸಿದರು. ಕಾಲಿವುಡ್ ಅಲ್ಲದೆ, ಟಾಲಿವುಡ್ ಹಾಗೂ ಬಾಲಿವುಡ್ನಲ್ಲೂ ಅವರು ತಮ್ಮ ಅಭಿನಯದ ಛಾಪು ಮೂಡಿಸಿದ್ದಾರೆ. ತೆಲುಗಿನ ಪಾಂಡುರಂಗ ಮಹಾತ್ಮೆ, ಪೆಲ್ಲಿ ಸಂದಾಡಿ, ಜಗದೇಕ ವೀರುನಿ ಕಥಾ, ಶ್ರೀ ಸೀತಾ ರಾಮಂ ಕಲ್ಯಾಣ, ದಾನವೀರ ಶೂರ ಕರ್ಣ ಹಾಗೂ ಹಿಂದಿಯ ಪೈಗಾಂ, ಸಸುರಾಲ್, ಒಪೆರಾ ಹೌಸ್, ಹರಿ ದರ್ಶನ ಸೇರಿ ಹಲವು ಚಿತ್ರಗಳಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಹುಭಾಷೆಗಳಲ್ಲಿ ಅಭಿನಯಿಸಿದ ಮೊದಲ ಕನ್ನಡ ನಟಿ ಎಂಬ ಹೆಗ್ಗಳಿಕೆ ಇವರದು.
ಸರೋಜಾದೇವಿ ತಮ್ಮ ಏಳು ದಶಕಗಳ ಕಲಾ ಬದುಕಿನಲ್ಲಿ ಕನ್ನಡ, ತೆಲುಗು, ತಮಿಳು, ಹಿಂದಿಯ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡರು. ಕನ್ನಡದಲ್ಲಿ ಡಾ. ರಾಜಕುಮಾರ್ ಜತೆ ಶ್ರೀನಿವಾಸ ಕಲ್ಯಾಣ, ಭಾಗ್ಯವಂತರು, ಯಾರಿವನು, ಭೂಕೈಲಾಸ, ನ್ಯಾಯವೇ ದೇವರು ಸೇರಿ ಹಲವು ಸಿನಿಮಾಗಳಲ್ಲಿ ಜೋಡಿಯಾಗಿದ್ದರು. ಇನ್ನು ಕಲ್ಯಾಣಕುಮಾರ್ ಹಾಗೂ ಉದಯಕುಮಾರ್ ಜತೆಯೂ ನಟಿಸಿರುವುದು ವಿಶೇಷ. ತೆಲುಗಿನ ಎ. ನಾಗೇಶ್ವರರಾವ್, ಎನ್.ಟಿ. ರಾಮರಾವ್ ಹಾಗೂ ತಮಿಳಿನ ಜೆಮಿನಿ ಗಣೇಶನ್, ಶಿವಾಜಿ ಗಣೇಶನ್, ಎಂ.ಜಿ. ರಾಮಚಂದ್ರನ್ ಅವರಿಗೆ ನಾಯಕಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದರು. ಶಿವಾಜಿ ಗಣೇಶನ್ ಅವರ 22 ಹಾಗೂ ಎಂ.ಜಿ. ರಾಮಚಂದ್ರನ್ ಅವರ 26 ಹಿಟ್ ಚಿತ್ರಗಳಲ್ಲಿ ಸರೋಜಾದೇವಿ ಅವರೇ ನಾಯಕಿ ಎಂಬುದು ವಿಶೇಷ. ಹಿಂದಿಯ ದಿಲೀಪ್ಕುಮಾರ್, ರಾಜೇಂದ್ರಕುಮಾರ್, ಶಮ್ಮೀ ಕಪೂರ್, ಸುನಿಲ್ ದತ್ ಅವರ ಸಿನಿಮಾಗಳಲ್ಲೂ ಸರೋಜಾದೇವಿ ನಟಿಸಿದರು.
ಚಿಕ್ಕಂದಿನಿಂದಲೂ ನೃತ್ಯ, ಗಾಯನದ ಮೂಲಕ ಗುರುತಿಸಿಕೊಂಡಿದ್ದ ಸರೋಜಾದೇವಿ 1955ರಲ್ಲಿ ತೆರೆಕಂಡ ‘ಮಹಾಕವಿ ಕಾಳಿದಾಸ’ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಅದರಲ್ಲಿ ವಿದ್ಯಾಧರೆ ಪಾತ್ರದಲ್ಲಿ ಕಾಣಿಸಿಕೊಂಡರು. ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ವಿಭಾಗದಲ್ಲಿ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿದ್ದು ವಿಶೇಷ. ಇನ್ನು ಅದೇ ವರ್ಷ ‘ಅಷಾಢಭೂತಿ’, ‘ಶ್ರೀರಾಮ ಪೂಜೆ’ ಸಿನಿಮಾಗಳು ಬಿಡುಗಡೆ ಆಗಿ, ಚಿತ್ರರಂಗಕ್ಕೆ ಬಂದ ಮೊದಲ ವರ್ಷವೇ ಮೂರು ಚಿತ್ರಗಳಲ್ಲಿ ಸರೋಜಾದೇವಿ ನಟಿಸಿದ್ದರು. ಬಳಿಕ ಅವರು ಹಿಂತಿರುಗಿ ನೋಡಿದವರೇ ಅಲ್ಲ. ಕನ್ನಡದ ಹೆಸರಾಂತ ನಟರ ಚಿತ್ರಗಳಲ್ಲಿ ನಟಿಸಿದರು. ಅಣ್ಣ ತಂಗಿ, ಭೂ ಕೈಲಾಸ (1958), ಜಗಜ್ಯೋತಿ ಬಸವೇಶ್ವರ (1959), ಕಿತ್ತೂರು ಚನ್ನಮ್ಮ (1961), ಅಮರಶಿಲ್ಪಿ ಜಕಣಾಚಾರಿ (1964), ಬೆರೆತ ಜೀವ (1965), ಮಲ್ಲಮ್ಮನ ಪವಾಡ (1969), ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (1971), ಭಾಗ್ಯಜ್ಯೋತಿ (1975), ಕಥಾ ಸಂಗಮ (1976), ಬಬ್ರುವಾಹನ, ಭಾಗ್ಯವಂತರು (1977), ಮಹಾಶಕ್ತಿ ಮಾಯೆ (1994) ಸೇರಿ ಕನ್ನಡದ 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದರು. 2019ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ ‘ನಟಸೌರ್ವಭಾಮ’ ಅವರ ಅಭಿನಯದ ಕೊನೆಯ ಚಿತ್ರ.
ಸರೋಜಾದೇವಿ ಸಾವಿನ ಬಳಿಕ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡುವ ಮೂಲಕ ಕುಟುಂಬದವರು ಮಾನವೀಯತೆ ಮೆರೆದಿದ್ದಾರೆ. ನಾರಾಯಣ ನೇತ್ರಾಲಯದ ವೈದ್ಯರು ಪರೀಕ್ಷಿಸಿ ಕಣ್ಣುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಸರೋಜಾದೇವಿ ಬದುಕಿರುವಾಗಲೂ ಹಲವು ಸಾಮಾಜಿಕ ಸೇವೆಗಳ ಮೂಲಕ ಗುರುತಿಸಿಕೊಂಡಿದ್ದರು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕಾಗಿ ಹಲವಾರು ಕೊಡುಗೆ ನೀಡಿದ್ದಾರೆ.
ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲೂ ಸರೋಜಾದೇವಿ ಬಹುಬೇಡಿಕೆಯ ನಟಿಯಾಗಿದ್ದರು. ಅವರು 1955ರಿಂದ 1984ರವರೆಗೆ 29 ವರ್ಷಗಳಲ್ಲಿ ಸತತವಾಗಿ 161 ಚಿತ್ರಗಳಿಗೆ ನಾಯಕಿಯಾಗಿ ನಟಿಸುವ ಮೂಲಕ ವೃತ್ತಿ ಬದುಕಿನಲ್ಲಿ ಸಾರ್ವಕಾಲಿಕ ದಾಖಲೆ ನಿರ್ವಿುಸಿದರು. 1958ರಲ್ಲಿ 10, 1959ರಲ್ಲಿ 9, 1960ರಲ್ಲಿ 8, 1966ರಲ್ಲಿ 11, 1962ರಲ್ಲಿ 10, 1963ರಲ್ಲಿ 11, 1964ರಲ್ಲಿ 14 ಚಿತ್ರಗಳಲ್ಲಿ ನಟಿಸಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.
ಸರೋಜಾದೇವಿ ಗಟ್ಟಿ ಮಹಿಳಾ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ. ಪಾರ್ವತಿದೇವಿ (ಭೂ ಕೈಲಾಸ), ಕಿತ್ತೂರು ಚನ್ನಮ್ಮ, ಮಂಜರಿ (ಅಮರಶಿಲ್ಪಿ ಜಕಣಾಚಾರಿ), ಚಿತ್ರಾಂಗದಾ (ಬಬ್ರುವಾಹನ) ಸೇರಿ ಹಲವು ಮಹಿಳಾ ಪ್ರಧಾನ ಪಾತ್ರಗಳಲ್ಲಿ ಅವರು ನಟಿಸಿದ್ದಾರೆ. ಹಾಗಾಗಿ, ಸರೋಜಾದೇವಿ 70ರ ದಶಕದಲ್ಲಿ 'ಲೇಡಿ ಸೂಪರ್ಸ್ಟಾರ್' ಎಂಬ ಬಿರುದು ಪಡೆದರು.
ಸರೋಜಮ್ಮ ಸಾಧನೆ ಇಡೀ ಪ್ರಪಂಚಕ್ಕೆ ಗೊತ್ತು. ಅಂದಿನ ಕಾಲದಲ್ಲೇ ಅವರು ಪಂಚ ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಅವರ ಕಲಾಸೇವೆಗೆ ಹಲವಾರು ಪ್ರಶಸ್ತಿ, ಗೌರವಗಳು ಬಂದಿವೆ. ಹೀಗಾಗಿ, ಅವರು ಹೆಮ್ಮೆಯ ಕನ್ನಡತಿಯಾಗಿ ಗುರುತಿಸಿ ಕೊಂಡಿದ್ದಾರೆ. ನನ್ನ, ಅವರ ಒಡನಾಟ ತಾಯಿ-ಮಗಳ ಸಂಬಂಧದಂತೆ ಇತ್ತು. | ತಾರಾ ಅನುರಾಧಾ ನಟಿ
ಅಭಿನಯ ಸರಸ್ವತಿ, ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಬಿ.ಸರೋಜಾದೇವಿ ನಿಧನ ದುಃಖವನ್ನುಂಟು ಮಾಡಿದೆ. 70ರ ದಶಕದಲ್ಲಿ ಕನ್ನಡ ಚಲನಚಿತ್ರ ಕ್ಷೇತ್ರಕ್ಕೆ ಮಹಿಳೆಯರು ಬರುವುದು ದುರ್ಲಭವಾಗಿದ್ದ ಸಂದರ್ಭದಲ್ಲಿ ಸರೋಜಾ ದೇವಿ ಅವರು ಆ ಕೊರತೆ ನೀಗಿಸಿ ಭರವಸೆಯ ಹೆಜ್ಜೆಗಳನ್ನು ಇಟ್ಟು ಕನ್ನಡ ಚಲನಚಿತ್ರ ರಂಗವನ್ನು ಶ್ರೀಮಂತಗೊಳಿಸಿದರು. ಅಭಿನಯಕ್ಕೆ ಹೊಸ ವ್ಯಾಖ್ಯಾನ ಬರೆದರು. ಸಾಮಾಜಿಕ, ಚಾರಿತ್ರಿಕ, ಧಾರ್ವಿುಕ ನೆಲೆಯ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ಜೀವ ತುಂಬಿದರು.
| ಡಾ.ಪ್ರಭಾಕರ ಕೋರೆ ಕೆಎಲ್ಇ ಕಾರ್ಯಾಧ್ಯಕ್ಷ
ಖ್ಯಾತ ಚಿತ್ರನಟಿ ಬಿ. ಸರೋಜಾ ದೇವಿ ನಿಧನದಿಂದ ದುಃಖಿತನಾಗಿದ್ದೇನೆ. ಅವರು ಭಾರತೀಯ ಸಿನಿಮಾ, ಸಂಸ್ಕೃತಿಯ ಐಕಾನ್ ಆಗಿದ್ದರು. ಬಹುಮುಖ ಪ್ರತಿಭೆಯಿಂದ ಅವರು ಮುಂದಿನ ತಲೆಮಾರುಗಳಿಗೆ ಅಳಿಸಲಾಗದ ಅಚ್ಚೊತ್ತಿದ್ದಾರೆ. ಅವರ ಕುಟುಂಬ, ಅಭಿಮಾನಿಗಳಿಗೆ ನನ್ನ ಸಂತಾಪಗಳು.
| ನರೇಂದ್ರ ಮೋದಿ ಪ್ರಧಾನಿ
ಕನ್ನಡದ ಅಪ್ರತಿಮ ನಟಿ ಬಿ. ಸರೋಜಾ ದೇವಿ ನಿಧನದಿಂದ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಕನ್ನಡ ಸೇರಿ ತಮಿಳು, ತೆಲುಗು, ಹಿಂದಿಯ 200 ಚಿತ್ರಗಳಲ್ಲಿ ನಟಿಸಿ, ‘ಅಭಿನಯ ಸರಸ್ವತಿ’ ಎಂದು ಖ್ಯಾತರಾಗಿದ್ದರು. ‘ಕಿತ್ತೂರು ಚನ್ನಮ್ಮ’, ‘ಅಣ್ಣ ತಂಗಿ’, ‘ಬಬ್ರುವಾಹನ’ ಚಿತ್ರಗಳಲ್ಲಿ ಅವರ ಮನೋಜ್ಞ ಅಭಿನಯ ಕಣ್ಣ ಮುಂದೆ ಬರುತ್ತದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುವೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಡಾ. ರಾಜಕುಮಾರ್ ಸೇರಿ ದಕ್ಷಿಣ ಭಾರತದ ಖ್ಯಾತ ನಟರ ಜತೆ ಅಭಿನಯಿಸುವ ಮೂಲಕ ಕನ್ನಡಕ್ಕೆ ಗೌರವ ತಂದಿದ್ದ ನಟಿ ಸರೋಜಾದೇವಿ. ನಾನು ಅವರ ಕುಟುಂಬದ ಜತೆಗೆ ಆಪ್ತತೆ ಹೊಂದಿದ್ದೆ. ಅವರೂ ನಮ್ಮ ಸರ್ಕಾರದ ಹಲವಾರು ಕಾರ್ಯಗಳಲ್ಲಿ ಪಾಲ್ಗೊಂಡು, ಸಲಹೆ ನೀಡುತ್ತಿದ್ದರು. ಈ ಮಧ್ಯೆ, ಅವರ ಅನಾರೋಗ್ಯದ ಬಗ್ಗೆ ನನಗೆ ಮಾಹಿತಿ ಇತ್ತು. ಅವರ ಆತ್ಮಕ್ಕೆ ಶಾಂತಿ ಕೋರುವೆ.
| ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ
ದಕ್ಷಿಣ ಭಾರತದ ಪ್ರಖ್ಯಾತ ಹಿರಿಯ ಅಭಿನೇತ್ರಿ, ಕನ್ನಡತಿ ಬಿ.ಸರೋಜಾದೇವಿ ಭೌತಿಕವಾಗಿ ಇನ್ನಿಲ್ಲವಾದದ್ದು ದುಃಖದ ವಿಷಯ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದ ಹಿರಿಮೆ ಗರಿಮೆಯನ್ನು ಹೆಚ್ಚಿಸುವಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ. ಶ್ರೀಮಠದ ಭಕ್ತೆಯಾಗಿದ್ದರು. ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗುರುತಿಸಿ ಅವರಿಗೆ 2009ನೇ ಸಾಲಿನ ‘ಚುಂಚಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ.
| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ
‘ಎ’ ಚಿತ್ರ ಸೆನ್ಸಾರ್ ಸಮಸ್ಯೆಯಾಗಿ ಮತ್ತೊಮ್ಮೆ ಸೆನ್ಸಾರ್ ಬೋರ್ಡ್ಗೆ ಹೋಗಿತ್ತು. ಆಗ ಪರಿಷ್ಕೃತ ಸೆನ್ಸಾರ್ ಬೋರ್ಡ್ನ ಅಧ್ಯಕ್ಷರಾಗಿದ್ದವರು ಸರೋಜಾದೇವಿ. ಆಗ ಅವರು ಸಿನಿಮಾ ನೋಡಿ, ಮಂಡಳಿಯ ಜತೆ ಚರ್ಚಿಸಿ, ನಮ್ಮ ಚಿತ್ರಕ್ಕೆ ಸೆನ್ಸಾರ್ ಮಾಡಿಕೊಟ್ಟರು. ಆ ಸಹಾಯವನ್ನು ನಾನು ಎಂದಿಗೂ ಮರೆಯುವುದಿಲ್ಲ.
| ಉಪೇಂದ್ರ, ನಟ
ಕಳೆದ 25 ವರ್ಷಗಳಲ್ಲಿ ಹಲವಾರು ಬಾರಿ ಸಿನಿಮಾ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇವೆ. ಪ್ರತಿ ಬಾರಿ ಭೇಟಿಯಾದಾಗಲೂ ನಾವು ಹೊಸ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಗ್ರಾಮೀಣ ಭಾಗದಿಂದ ಬಂದು ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಸಾಧಿಸಿದ್ದರು. ಅವರು ಶಿವನ ಭಕ್ತೆಯಾಗಿದ್ದರು.
| ಜಗ್ಗೇಶ್ ನಟ
ಹಲವು ಭಾಷೆಗಳಲ್ಲಿ ಪ್ರೌಢಿಮೆ ಹೊಂದಿದ್ದ ಸರೋಜಾದೇವಿ ಅನೇಕ ದಿಗ್ಗಜರೊಂದಿಗೆ ನಟಿಸಿ ತಾವೇ ಪಾತ್ರವಾಗಿ ಬೆಳ್ಳಿತೆರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಪಾರಿಜಾತ ಪುಷ್ಪವೊಂದು ತನ್ನ ಪರಿಮಳದೊಂದಿಗೆ ತುಂಬು ಜೀವನ ನಡೆಸಿ ನಮ್ಮನ್ನು ಅಗಲಿ ಹೊರಟಿದೆ.
| ಸುದೀಪ್ ನಟ
ಸರೋಜಾದೇವಿ ನನಗೆ ತಾಯಿ ಸಮಾನರಾಗಿದ್ದರು. ಮೊದಲಿನಿಂದಲೂ ನಮ್ಮನ್ನು ಮಕ್ಕಳಂತೆ ನೋಡಿ ಕೊಂಡಿದ್ದಾರೆ. ನಮ್ಮೆಲ್ಲ ಸಂಭ್ರಮದಲ್ಲಿ ಅವರು ಜತೆಯಾಗುತ್ತಿದ್ದರು. ಎಲ್ಲ ಹಂತಗಳಲ್ಲಿ ಗಟ್ಟಿಯಾಗಿ ನಮ್ಮೊಂದಿಗೆ ನಿಲ್ಲುತ್ತಿದ್ದರು. ವ್ಯಕ್ತಿತ್ವದಿಂದ ಅವರು ಎಂದಿಗೂ ನಮ್ಮ ಜತೆ ಇರುತ್ತಾರೆ.
| ಶಿವರಾಜಕುಮಾರ್ ನಟ