ಕೆ.ಶ್ರೀನಿವಾಸಗೌಡ 
ನ್ಯೂಸ್

ಕಾಂಗ್ರೆಸ್​ ಸೋಲಿಗೆ ಸ್ವಪಕ್ಷದವರೇ ಕಾರಣ

ಕೋಲಾರ: ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ, ಆದರೆ ಕೋಲಾರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸೋಲಿಗೆ ಸ್ವ ಪಕ್ಷದವರೇ ಕಾರಣ ಎಂದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಅವರೇ ಉತ್ತರ ಕೊಡಲಿ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಹೇಳಿದರು.

ನಗರದ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್​ ಟಿಕೆಟ್​ಗಾಗಿ ಪೈಪೋಟಿ ನಡೆದಿತ್ತು. ಕೋಲಾರದಲ್ಲಿ ಬಣ ನಾಯಕರು ಸೂಚಿಸಿದ್ದ ಇಬ್ಬರೂ ಬೇಡ ಎಂದು ಹೈಕಮಾಂಡ್​ ಗೌತಮ್​ ಅವರನ್ನು ಅಭ್ಯರ್ಥಿಯನ್ನಾಗಿಸಿತು. ಅಂತೆಯೇ, ಎಲ್ಲರೂ ಗೆಲ್ಲಿಸಿಕೊಳ್ಳುವ ಭರವಸೆ ನೀಡಿದ್ದರು, ಆದರೂ ಏಕೆ ಗೆಲ್ಲಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಶ್ರೀನಿವಾಸಪುರ ಕ್ಷೇತ್ರದಲ್ಲಿ ರಮೇಶ್​ಕುಮಾರ್​ ರಾಜಕೀಯವಾಗಿ ಬೆಳೆಯಲು ಒಕ್ಕಲಿಗರು ಪ್ರಮುಖ ಪಾತ್ರವಹಿಸಿದ್ದಾರೆ. ಸಾಂಪ್ರದಾಯಿಕವಾಗಿ ಒಂದು ಅವಧಿಗೆ ರಮೇಶ್​ಕುಮಾರ್​, ಮತ್ತೊಂದು ಅವಧಿಗೆ ವೆಂಕಟಶಿವಾರೆಡ್ಡಿ ಅವರನ್ನು ಗೆಲ್ಲಿಸಿಕೊಳ್ಳುತ್ತಿದ್ದರು. ಸೋಲಾದ ಮಾತ್ರಕ್ಕೆ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಕೆಲ ಚುನಾವಣೆಗಳಲ್ಲಿ ನಾನು ಸೋತಿದ್ದೇನೆ, ಯಾರನ್ನೂ ದೂಷಿಸಿಲ್ಲ ಎಂದು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನವರು ನನ್ನನ್ನು ಪ್ರಚಾರಕ್ಕೆ ಕರೆಯಲಿಲ್ಲ. ಹಾಗಾಗಿ ನಾನು ಅವರ ಜತೆ ಹೋಗಲಾಗದಿದ್ದರೂ ನನ್ನ ಸೂಚನೆ ಮೇರೆಗೆ ನಮ್ಮ ಬೆಂಬಲಿಗರು ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಾರದಿದ್ದಾಗ ನನಗೆ ಅವಕಾಶ ಮಾಡಿಕೊಡಬೇಕಿತ್ತು. ಆದರೆ ರಮೇಶ್​ ಕುಮಾರ್​ ಸೇರಿ ಜಿಲ್ಲೆಯ ಹಲವು ಮುಖಂಡರು ಒಳಗೊಳಗೆ ಮಾತುಕತೆ ನಡೆಸಿ ಕೊತ್ತೂರು ಮಂಜುನಾಥ್​ನನ್ನು ಸ್ಪರ್ಧೆಗಿಳಿಸಿದರು. ಈ ಬಗ್ಗೆ ನನ್ನ ಗಮನಕ್ಕೆ ತರಲಿಲ್ಲ. ಅವರು ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಡಿ.ಸಿ.ಸಿ. ಬ್ಯಾಂಕ್​ ನಿರ್ದೇಶಕ ದಯಾನಂದ್​, ಹೋಟೆಲ್​ ರಾಮಣ್ಣ, ರಮೇಶ್​ ಮತಿತರರಿದ್ದರು.