ಶೃಂಗೇರಿಯಲ್ಲಿ ರಿಯಲ್‌ಎಸ್ಟೇಟ್ ಅಸೋಸಿಯೇಷನ್ ಅನ್ನು ಉದ್ಯಮಿ ಎಚ್.ಎಸ್.ನಟೇಶ್ ಉದ್ಘಾಟಿಸಿದರು. ಇಂಜಿತ್, ಜಿ.ಎಂ.ಸತೀಶ್, ಸುರೇಶ್,ಮಾಗಲು ಪ್ರಸನ್ನ ಇದ್ದರು. 
ನ್ಯೂಸ್

ಅಭಿವೃದ್ಧಿಗೆ ರಿಯಲ್ ಎಸ್ಟೇಟ್ ಉದ್ಯಮದ ಕೊಡುಗೆ ದೊಡ್ಡದು

ಶೃಂಗೇರಿ: ತಾಲೂಕಿನ ಬೆಳವಣಿಗೆಗೆ ರಿಯಲ್ ಎಸ್ಟೇಟ್ ಉದ್ಯಮ ದೊಡ್ಡ ಕೊಡುಗೆ ನೀಡುತ್ತಿದೆ ಎಂದು ರಿಯಲ್ ಎಸ್ಟೇಟ್ ಅಸೋಸಿಯೇಷನ್ ನಿರ್ದೇಶಕ ಇಂಜಿತ್ ಕುಮಾರ್ ಹೇಳಿದರು.
ಭಾನುವಾರ ರಿಯಲ್ ಎಸ್ಟೇಟ್ ಅಸೋಸಿಯೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಒಂದು ಪಟ್ಟಣ ಅಥವಾ ನಗರ ಯೋಜನಾ ಬದ್ಧವಾಗಿ ಬೆಳೆಯುವುದರಿಂದ ಉತ್ತಮ ನಗರ ನಿರ್ಮಾಣ ಸಾಧ್ಯ. ನಿವೇಶನ ನಿರ್ಮಾಣದ ಹಂತದಲ್ಲಿ ಸಮರ್ಪಕ ರಸ್ತೆ, ಒಳ ಚರಂಡಿ ವ್ಯವಸ್ಥೆ, ಉದ್ಯಾನವನ ಸರ್ಕಾರ ನಿಗದಿಪಡಿಸಿದ ಮಾನದಂಡಗಳನ್ನು ಹೊಂದಿರಬೇಕು ಎಂದರು.
ತಾಲೂಕಿನಲ್ಲಿ ಕಳೆದ ಒಂದುವರೆ ದಶಕದಿಂದ ಸರ್ಕಾರದ ನಿವೇಶನ ಹಂಚಲು ಸಾಧ್ಯವಾಗಿಲ್ಲ. ರಿಯಲ್ ಎಸ್ಟೇಟ್ ಉದ್ಯಮದ ಮೂಲಕ ಅಗತ್ಯವಿರುವವರಿಗೆ ನಿವೇಶನ ಕಲ್ಪಿಸಲಾಗುತ್ತಿದೆ. ಇದರಿಂದ ಪರೋಕ್ಷವಾಗಿ ನೂರಾರು ಜನರಿಗೆ ಉದ್ಯೋಗ ನೀಡಿದೆ. ಇ ಸ್ವತ್ತು ನೀಡುವುದರಿಂದ ಗ್ರಾಪಂಗೆ ಹೆಚ್ಚು ಆದಾಯವಿದ್ದು, ಗ್ರಾಮದ ಬೆಳವಣಿಗೆಗೂ ಸಹಕಾರಿಯಾಗಿದೆ ಎಂದರು.
ಅಸೋಸಿಯೇಷನ್ ಅಧ್ಯಕ್ಷ ಮಾಗಲು ಪ್ರಸನ್ನ, ಶಾರದಾ ಪೀಠ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿಗೆ ಬರುವ ಭಕ್ತಾದಿಗಳು ಅನೇಕರು ತಮ್ಮ ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗುತ್ತಿದ್ದಾರೆ. ಅಲ್ಲದೇ ಶೃಂಗೇರಿಯವರು ಬೇರೆಡೆ ಉದ್ಯೋಗ ದಲ್ಲಿರುವವರು ತನ್ನೂರಿನಲ್ಲಿ ಸ್ವಂತ ಮನೆ ನಿರ್ಮಾಣದ ಕನಸನ್ನು ಹೊತ್ತಿರುತ್ತಾರೆ. ಅಗತ್ಯವಿರುವವರಿಗೆ ಸಮರ್ಪಕ ನಿವೇಶನ ನೀಡುವಲ್ಲಿ ಉದ್ಯಮ ಸಹಕಾರಿಯಾಗಿದೆ ಎಂದರು. ಉದ್ಯಮಿ ಮಾಗಲು ಪ್ರಸನ್ನ, ವಕೀಲ ಜಿ.ಎಂ.ಸತೀಶ್, ವಿಜಯ ಕುಮಾರ್, ಶೆಟ್ಟಿಹಳ್ಳಿ ಅನೂಪ. ಸುರೇಶ್ ಉಪಸ್ಥಿತರಿದ್ದರು.