- ಅನೇಕ ವೈದ್ಯಕೀಯ ತಜ್ಞರು ಸಕ್ಕರೆ ಅಂಶದಿಂದ ಮಧುಮೇಹ ಬರುವುದಿಲ್ಲ ಎನ್ನುತ್ತಾರೆ
- ಹಾಗಿದ್ರೆ, ಡಯಬಿಟಿಕ್ ರೋಗಿಗಳ ನಿಜವಾದ ಶತ್ರು ಯಾರು?
Diabetes: ಅಧಿಕ ಪ್ರಮಾಣದಲ್ಲಿ ಸಕ್ಕರೆ ತಿನ್ನುವುದರಿಂದ ಅಥವಾ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಡಯಬಿಟಿಸ್ ಬರಬಹುದು ಎಂಬುದು ಅನೇಕ ಜನರು ನೀಡುವ ತೀರ ಸಾಮಾನ್ಯ ಎಚ್ಚರಿಕೆ. ಆದರೆ, ಅನೇಕ ವೈದ್ಯಕೀಯ ತಜ್ಞರು ಸಕ್ಕರೆ ಅಂಶದಿಂದ ಮಧುಮೇಹ ಬರುವುದಿಲ್ಲ ಎನ್ನುತ್ತಾರೆ. ಹಾಗಿದ್ರೆ, ಡಯಬಿಟಿಕ್ ರೋಗಿಗಳ ನಿಜವಾದ ಶತ್ರು ಯಾರು? ಎಂಬುದಕ್ಕೆ ಉತ್ತರ ಹೀಗಿದೆ ಗಮನಿಸಿ.
ಮಧುಮೇಹವು ವಯಸ್ಕರಲ್ಲಿ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿಯೂ ಸಾಮಾನ್ಯ ಸಮಸ್ಯೆಯಾಗಿ ಪರಿಣಮಿಸಿದೆ. ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಹಿರಿಯರ ಜತೆ ಅನೇಕ ಮಕ್ಕಳು ಈ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ ಮತ್ತು ಸದ್ದಿಲ್ಲದೇ ಬಳಲುತ್ತಿದ್ದಾರೆ. ಮಧುಮೇಹ ಅಥವಾ ಡಯಬಿಟಿಸ್ ಎಂಬ ಪದ ಕೇಳಿದೊಡನೆ ಮೊದಲಿಗೆ ಮನಸ್ಸಿಗೆ ಬರುವುದು ಸಕ್ಕರೆ! ಆದರೆ, ಅಸಲಿಗೆ ಅನೇಕ ವೈದ್ಯಕೀಯ ತಜ್ಞರು ಈ ರೋಗವು ಸಿಹಿತಿಂಡಿಗಳನ್ನು ತಿನ್ನುವುದರಿಂದ ಮಾತ್ರ ಬರುವುದಿಲ್ಲ ಎಂದು ಹೇಳುತ್ತಾರೆ.
ಇಂದಿನ ಮಕ್ಕಳು ಹೆಚ್ಚಿನ ಸಮಯ ಗ್ಯಾಜೆಟ್‌ಗಳೊಂದಿಗೆ ಕಳೆಯುತ್ತಾರೆ. ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಹೆಚ್ಚಾಗಿ ಅಧಿಕ ಕ್ಯಾಲೋರಿ, ಕಡಿಮೆ ಪೌಷ್ಟಿಕಾಂಶದ ಆಹಾರವನ್ನು ತಿನ್ನುತ್ತಾರೆ. ಈ ಪ್ರಕ್ರಿಯೆಯಲ್ಲಿ, ದೇಹವು ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸದಿದ್ದಾಗ, ಇನ್ಸುಲಿನ್ ಪ್ರತಿರೋಧದ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಪೋಷಕರು ಮಕ್ಕಳಲ್ಲಿ ಮಧುಮೇಹದ ಎಚ್ಚರಿಕೆ ಸೂಚನೆಗಳನ್ನು ಅರ್ಥಮಾಡಿಕೊಳ್ಳಬೇಕು.
ಸಕ್ಕರೆ ಅಥವಾ ಸಿಹಿ ತಿಂಡಿಗಳನ್ನು ತಿನ್ನುವುದರಿಂದಲೇ ಮಧುಮೇಹ ಕಾಡುತ್ತದೆ ಅನೇಕರು ನಂಬುತ್ತಾರೆ. ವಾಸ್ತವವಾಗಿ, ರೋಗನಿರೋಧಕ ವ್ಯವಸ್ಥೆಯು ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಕೋಶಗಳ ಮೇಲೆ ದಾಳಿ ಮಾಡಿದಾಗ ಟೈಪ್ 1 ಡಯಬಿಟಿಸ್ ಸಂಭವಿಸುತ್ತದೆ. ಸಕ್ಕರೆ ಸೇವನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ತಳಿಶಾಸ್ತ್ರ ಮತ್ತು ಕುಟುಂಬದ ಇತಿಹಾಸದಂತಹ ಇತರ ಅಂಶಗಳು ಸಹ ಈ ಕಾಯಿಲೆಗೆ ಕಾರಣವಾಗಬಹುದು ಎನ್ನುತ್ತಾರೆ.
ಒಂದು ಕಾಲದಲ್ಲಿ ವಯಸ್ಕರಲ್ಲಿ ಮಾತ್ರ ಕಂಡುಬರುತ್ತಿದ್ದ ಟೈಪ್ 2 ಮಧುಮೇಹವು ಈಗ ಕಳಪೆ ಆಹಾರ, ವ್ಯಾಯಾಮದ ಕೊರತೆ ಮತ್ತು ಬೊಜ್ಜು ಕಾರಣದಿಂದಾಗಿ ಮಕ್ಕಳಲ್ಲಿಯೂ ಹೆಚ್ಚುತ್ತಿದೆ. ದೀರ್ಘಾವಧಿಯ ಸ್ಕ್ರೀನ್ ಟೈಮ್, ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆ ಮತ್ತು ಸಕ್ಕರೆ ಪಾನೀಯಗಳು ಮಕ್ಕಳಲ್ಲಿ ಈ ಸಮಸ್ಯೆಯನ್ನು ದ್ವಿಗುಣಗೊಳಿಸುತ್ತದೆ ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.