ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪದ ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ ಆರೋಪದಡಿ ತೆಲುಗು ನಟಿ ಹೇಮಾ ಸೇರಿ 8 ಮಂದಿಗೆ ಸಿಸಿಬಿ 2ನೇ ಬಾರಿಗೆ ನೋಟಿಸ್ ಜಾರಿ ಮಾಡಿ ಜೂನ್ 1ರ ಒಳಗಾಗಿ ಹಾಜರಾಗುವಂತೆ ತಾಕೀತು ಮಾಡಿದೆ.
ಈ ಹಿಂದೆ ಮೇ 27ರಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ವಿಚಾರಣೆಗೆ ಗೈರಾಗಿದ್ದ ನಟಿ ಹೇಮಾ 7 ದಿನಗಳ ಕಾಲಾವಕಾಶ ಕೇಳಿದ್ದರು. ಇದೀಗ ಜೂ.1ರಂದು ವಿಚಾರಣೆಗೆ ಹಾಜರಾಗುವಂತೆ 2ನೇ ಬಾರಿ ನೋಟಿಸ್ ನೀಡಿದೆ. ಹುಸ್ಕೂರು ಸಮೀಪದ ಗೋಪಾಲ್ ರೆಡ್ಡಿ ಮಾಲೀಕತ್ವದ ಜಿ.ಆರ್.ಫಾರ್ಮ್ ಹೌಸ್‌ನಲ್ಲಿ ಮೇ 19ರಂದು ಸನ್ ರೈಸ್ ಟು ಸನ್ ಸೆಟ್ ಹೆಸರಿನ ರೇವ್ ಪಾರ್ಟಿ ಆಯೋಜಿಸಲಾಗಿತ್ತು.
ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 103 ಮಂದಿಯನ್ನು ವಶಕ್ಕೆ ಪಡೆದಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ನಟಿ ಹೇಮಾ, ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಉದ್ಯಮಿಗಳು ಸೇರಿ 86 ಮಂದಿ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವಿಸಿರುವುದು ದೃಢಪಟ್ಟಿತ್ತು.