ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಜಿ.ಆರ್. ಫಾರ್ಮ್‌ಹೌಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದ ತೆಲುಗು ನಟಿ ಸೇರಿ 86 ಮಂದಿ ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ. ತೆಲುಗು ನಟಿ ಹೇಮಾ ಸೇರಿ ಹಲವರಿಗೆ ಸಿಸಿಬಿ ತನಿಖೆ ಬಿಸಿ ಮುಟ್ಟಲಿದೆ.
ಫಾರ್ಮ್‌ಹೌಸ್‌ನಲ್ಲಿ ಭಾನುವಾರ ರಾತ್ರಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ಫಾರ್ಮ್ ಹೌಸ್ ಮೇಲೆ ದಿಢೀರ್ ದಾಳಿ ನಡೆಸಿದ್ದರು. ಇಬ್ಬರು ನಟಿಯರು ಸೇರಿ 103 ಮಂದಿಯನ್ನು ಸಿಸಿಬಿ ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ವೈದ್ಯಕೀಯ ವರದಿ ಅಧಿಕಾರಿಗಳ ಕೈಸೇರಿದೆ.
ಪೊಲೀಸರಿಗೆ ದಾರಿತಪ್ಪಿಸಿ ‘ಪಾರ್ಟಿಯಲ್ಲಿ ನಾನು ಇಲ್ಲ’ ಎಂದು ಫಾರ್ಮ್ ಹೌಸ್‌ನಲ್ಲೇ ವಿಡಿಯೋ ಚಿತ್ರೀಕರಿಸಿಕೊಂಡು ನಟಿ ಹೇಮಾ ಹೇಳಿಕೆ ನೀಡಿದ್ದರು. ಅದರೀಗ ಈ ನಟಿಯ ಅಸಲಿತನ ಬಯಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಎಲ್ಲರಿಗೂ ಸಿಸಿಬಿ ಪೊಲೀಸರು ಶೀಘ್ರದಲ್ಲಿಯೇ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಪಾರ್ಟಿಯಲ್ಲಿದ್ದ 68 ಪುರುಷರು ಹಾಗೂ 30 ಯುವತಿಯರಿಗೆ ಫಾರ್ಮ್‌ಹೌಸ್‌ನಲ್ಲೇ ಡ್ರಗ್ಸ್ ಸೇವನೆ ಸಂಬಂಧ ಪೊಲೀಸರು ವೈದ್ಯಕೀಯ ತಪಾಸಣೆ ನಡೆಸಿದ್ದಾರೆ. ಪುಲಿಕೇಶಿನಗರದ ಸಂತೋಷ್ ಆಸ್ಪತ್ರೆಯ ಲ್ಯಾಬ್ ಟೆಕ್ನಿಶಿಯನ್ ತಂಡವು ವೈದ್ಯಕೀಯ ತಪಾಸಣೆ ನಡೆಸಿತ್ತು. ಫಾರ್ಮ್ ಹೌಸ್ ಮಾಲಿಕ ಸೇರಿದಂತೆ 103 ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆಂಧ್ರಪ್ರದೇಶದ ವಿಜಯವಾಡದ ವಾಸು ಎ1 ಆರೋಪಿಯಾಗಿದ್ದರೆ, ಆತನ ಸ್ನೇಹಿತರಾದ ಕೋರಮಂಗಲದ ಅರುಣ್ ಕುಮಾರ್, ವಿಜಯವಾಡದ ನಾಗಬಾಬು, ರಣಧೀರ್ ಬಾಬು, ಮೊಹಮ್ಮದ್ ಅಬೂಬಕರ್ ನಂತರದ ಆರೋಪಿಗಳು. ಅಲ್ಲದೆ, ಪಾರ್ಟಿ ಆಯೋಜನೆಗೆ ಅನುಮತಿ ನೀಡಿದ್ದ ಗೋಪಾಲ ರೆಡ್ಡಿ 6ನೇ ಆರೋಪಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.