ನ್ಯೂಸ್

ಬಿಜೆಪಿ-ಜೆಡಿಎಸ್‌ ಫ್ಯೂಡಲ್ ತಲೆಯೊಳಗೆ ದ್ವೇಷ, ಅಸಹನೆ ಎಂಬ ಕೀವು; ಸಿದ್ದರಾಮಯ್ಯ

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮ ನಡೆದಿಲ್ಲ. ಬಿಜೆಪಿ ಜೆಡಿಎಸ್‌ಗಳೆರಡೂ ಸೇರಿಕೊಂಡು ನನ್ನ ಜೀವಮಾನದಲ್ಲೆ ಕಾಣದಷ್ಟು ಕೆಟ್ಟ ರಾಜಕಾರಣ ಮಾಡುತ್ತಿವೆ. ವಿಚಾರವೇ ಇಲ್ಲದೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನನ್ನ ರಾಜಕೀಯ ಜೀವನ ತೆರೆದ ಪುಸ್ತಕ, ಪ್ರತಿ ಪುಟಗಳು ಪಾರದರ್ಶಕ ಮತ್ತು ಪ್ರಾಮಾಣಿಕ. ಸಣ್ಣದೊಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯದ ಪಾವಿತ್ರ್ಯತೆ ಕಾಪಾಡಿಕೊಂಡಿದ್ದೇನೆ. ವಿಧಾನ ಮಂಡಲ ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿ ಚರ್ಚಿಸಿದರು. ವಿರೋಧ ಪಕ್ಷದವರು ನೆಪಕ್ಕೂ ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ ಎಂದು ಟೀಕಿಸಿದರು.

ಬಿಜೆಪಿ, ಜೆಡಿಎಸ್‌ನವರು ಹತಾಶರಾಗಿದ್ದಾರೆ. ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಎರಡನೇ ಬಾರಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ನಮಗೆ ಕಳೆದ ಲೋಕಸಭಾ ಚುನಾವಣೆಗಿಂತ ಶೇ13 ರಷ್ಟು ಮತಗಳನ್ನು ಈ ಚುನಾವಣೆಯಲ್ಲಿ ಹೆಚ್ಚು ಗಳಿಸಿದೆವು. ಇದರಿಂದ ಹತಾಶರಾಗಿ ಮತ್ತೆ ಜನರ ವಿಶ್ವಾಸ ಗಳಿಸಲು ತಪ್ಪು ದಾರಿಯಲ್ಲಿ ವಾಮ ಮಾರ್ಗ ಹಿಡಿದಿದ್ದಾರೆ ಎಂದು ಕುಟುಕಿದರು.

ಕರ್ನಾಟಕದಲ್ಲಿ ಕುಸಿದು ಹೋಗುತ್ತಿರುವ ಜನಪ್ರಿಯತೆಯನ್ನು ಮರುಸ್ಥಾಪಿಸಿಕೊಳ್ಳಲು ಸಾವಿರ ಸಲ ಸುಳ್ಳು ಹೇಳಿದರೆ ನಿಜವೂ ಸುಳ್ಳಿನಂತೆ ಆಗುತ್ತದೆ ಎಂಬ ಹಿಟ್ಲರ್‌ವಾದಿ ಹಾಗೂ ಭಾರತದ ಸಂದರ್ಭದಲ್ಲಿ ಪೇಶ್ವೆವಾದಿ ಮನಸ್ಥಿತಿಯನ್ನು ಬಿಜೆಪಿಯವರು ಹೊಂದಿದ್ದಾರೆ. ಅದನ್ನು ನಮ್ಮ ರಾಜ್ಯದಲ್ಲಿ ಪ್ರತಿಪಾದಿಸುತ್ತಿದ್ದಾರೆ ಎಂದು ಟೀಕಿಸಿದರು.

ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ನಯಾಪೈಸೆಯಷ್ಟು ಇರುವುದಿಲ್ಲವೆಂದು ಬಿಡಿಸಿ ಹೇಳಿದರೂ, ದಾಖಲೆಗಳನ್ನು ಕೊಟ್ಟರೂ ನಂಬಲು ತಯಾರಿಲ್ಲ. ಮೈಸೂರು ಮುಡಾದ ವಿಚಾರದಲ್ಲಿಯೂ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದರು.

ಸದನದಲ್ಲಿ ಗಲಾಟೆ ಮಾಡಿದ್ದು, ಅಸಂಸದೀಯವಾಗಿ ನಡೆದುಕೊಂಡಿದ್ದು, ಸಾರ್ವಜನಿಕರ ಹಣ ಪೋಲು ಮಾಡಿದ್ದು ಬಿಟ್ಟರೆ ಒಂದೇ ಒಂದು ದಾಖಲೆ ನೀಡಲಿಲ್ಲ. ದಾಖಲೆ ನೀಡದೆ, ಏನಾದರೂ ದಾಖಲೆಗಳಿದ್ದರೆ ಅವುಗಳನ್ನು ಬಿಡುಗಡೆ ಮಾಡದೆ ಬರೀ ಜಕ್ಕರಾಯನಕೆರೆ ಭಾಷಣ ಮಾಡುವುದು, ಅವರು ಭಾಷಣ ಮಾಡುವುದನ್ನು ನೀವು ವರದಿ ಮಾಡುವುದನ್ನು ಬಿಟ್ಟರೆ ಬೇರೆ ಏನಾದರೂ ನಡೆಯಿತಾ? ಎಂದು ಪ್ರಶ್ನಿಸಿದರು.

ನಾನೂ ಕೂಡ ವಿರೋಧ ಪಕ್ಷದ ನಾಯಕನಾಗಿ ಸುದೀರ್ಘ ಅವಧಿ ಕೆಲಸ ಮಾಡಿದ್ದೇನೆ. ದಾಖಲೆಗಳಿಲ್ಲದೆ ಒಂದೇ ಒಂದು ಮಾತನ್ನು ನಾನು ಆಡಿಲ್ಲ. ಆದರೆ ಬಿಜೆಪಿ ಜೆಡಿಎಸ್‌ನವರು ಯಾವುದೇ ದಾಖಲೆಗಳಿಲ್ಲದೆ ಎರಡು ವಾರಗಳ ಕಾಲ ಸದನವನ್ನು ದಿಕ್ಕುತಪ್ಪಿಸಿದರು. ಸಂಸದೀಯ ಪ್ರಜಾಪ್ರಭುತ್ವವು ಯಾವುದಕ್ಕೆ ಮಾದರಿಯಾಗಬಾರದೊ ಅದಕ್ಕೆ ಬಿಜೆಪಿಯವರು ಮಾದರಿಯಾದರು. ಇಂಥ ಬೇಜವಾಬ್ಧಾರಿ ಮತ್ತು ಚೈಲ್ಡಿಷ್ ವರ್ತನೆಯ ವಿರೋಧ ಪಕ್ಷವನ್ನು ನಾನು ನೋಡಿಯೇ ಇಲ್ಲ ಎಂದು ಕುಟುಕಿದರು.

ಜನ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮನುವಾದವನ್ನು ತಿರಸ್ಕರಿಸಲು ಪ್ರಾರಂಭಿಸಿದ್ದಾರೆ. ಇದು ನಿಮಗೂ ಅರ್ಥವಾಗುತ್ತಿದೆ. ದಿನದಿಂದ ದಿನಕ್ಕೆ ಇವರ ಮತಗಳಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿಯೆ ಮುಖ್ಯಮಂತ್ರಿಯವರನ್ನು ಕೇಂದ್ರದಲ್ಲಿಟ್ಟುಕೊಂಡು ವೈಯಕ್ತಿಕ ದಾಳಿ ಪ್ರಾರಂಭಿಸಿದ್ದಾರೆ. ಒಳ್ಳೆಯದೆ ಯಾವುದೂ ಗಾಯದ ರೂಪದಲ್ಲೆ ಉಳಿಯಬಾರದು. ಗಾಯದ ಒಳಗಿರುವ ಕೆಟ್ಟ ರಕ್ತ ಒಡೆದು ಹೊರ ಬರಬೇಕು. ಆಗಲೇ ಮನುಷ್ಯ ಆರೋಗ್ಯವಂತನಾಗುವುದು. ಹಾಗೆಯೆ ಬಿಜೆಪಿ-ಜೆಡಿಎಸ್‌ನವರ ಕೋಮುವಾದಿ-ಫ್ಯೂಡಲ್ ತಲೆಯೊಳಗೂ ದ್ವೇಷ, ಅಸಹನೆ ಎಂಬ ಕೀವು-ಕೆಟ್ಟ ರಕ್ತ ತುಂಬಿದೆ. ಅದು ಒಡೆದು ಹೊರ ಬರಬೇಕು ಎಂದಿದ್ದಾರೆ.

ಈಗಾಗಲೆ ಸರ್ಕಾರವು 2024ರ ಜುಲೈ 14ರಂದು ನಿವೃತ್ತ ನ್ಯಾಯಾಧೀಶ ಪಿ.ಬಿ ದೇಸಾಯಿಯವರ ವಿಚಾರಣಾ ಆಯೋಗ ರಚಿಸಲಾಗಿದೆ. ಆಯೋಗವು ತನ್ನ ಕೆಲಸವನ್ನು ಪ್ರಾರಂಭಿಸಿದೆ ಎಂದು ವಿವರಿಸಿದ್ದಾರೆ.