ತಿ.ನರಸೀಪುರ: ಎಂ.ಸೀಹಳ್ಳಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಆಧಾರಿತ ಕಲಿಕಾ ಹಬ್ಬವನ್ನು ತಾಲೂಕಿನ ಕಲಿಯೂರು ಶಾಲೆಯಲ್ಲಿ ಬುಧವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಾಲೂಕಿನ ಕಲಿಯೂರು ಗ್ರಾಮದಲ್ಲಿರುವ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್‌ಎಲ್‌ಎನ್ ಆಧಾರಿತ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಸಿಆರ್‌ಪಿ ಮೂಗೂರು ಮಹದೇವಸ್ವಾಮಿ ಮಾತನಾಡಿ, 2024-25ನೇ ಸಾಲಿನಲ್ಲಿ 1ನೇ ತರಗತಿಯಿಂದ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಲ್ಲಿ ಕಲಿಕೆಯನ್ನು ಗಟ್ಟಿಗೊಳಿಸುವ ಉದ್ದೇಶ ಸರ್ಕಾರದ್ದಾಗಿದೆ. ಮಕ್ಕಳಲ್ಲಿ ಕಲಿಕಾ ಬಲವರ್ಧನೆ ಹಾಗೂ ಸಂಖ್ಯಾ ಅಧ್ಯಯನ ಮಾಡುವುದು. ಅಲ್ಲದೆ ಮಕ್ಕಳಲ್ಲಿ ಕನಿಷ್ಠ ಜ್ಞಾನಾರ್ಜನೆಯನ್ನು ಬೆಳೆಸುವುದು. ಪದಗಳ ಜೋಡಣೆ ಮಾಡಿ ಓದುವುದು, ದಿನಪತ್ರಿಕೆಗಳನ್ನು ಓದುವುದು. ಗಣಿತ ವಿಷಯದಲ್ಲಿ ಕೂಡುವುದು ಕಳೆಯುವುದು, ಭಾಗಾಕಾರ, ಗುಣಾಕಾರ ಲೆಕ್ಕಾಚಾರ ಮಾಡುವುದನ್ನು ಮಕ್ಕಳಲ್ಲಿ ಕಲಿಸುವುದು ಎಂದು ತಿಳಿಸಿದರು.
ಕಲಿಕಾ ಹಬ್ಬದ ಚಟುವಟಿಕೆಯಲ್ಲಿ ಪಾಲಕರು ಮತ್ತು ಮಕ್ಕಳು ಭಾಗವಹಿಸುವುದು. ಯಾರು ಉತ್ತಮವಾಗಿ ಚಟುವಟಿಕೆಯಲ್ಲಿ ಭಾಗವಹಿಸಿ ವಿಜೇತರಾಗುತ್ತಾರೆ ಅವರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೈಲಜಾ ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲಿಯೂ ಅನೇಕ ಪ್ರತಿಭೆಗಳು ಅಡಗಿವೆ. ಅವರ ಪ್ರತಿಭೆಯನ್ನ ಗುರುತಿಸಿ, ಜ್ಞಾನದ ಸಾಮರ್ಥ್ಯವನ್ನು ತಿಳಿಯಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿವೆ. ಹಳ್ಳಿಗಾಡಿನ ಮಕ್ಕಳು ಪಟ್ಟಣದ ಮಕ್ಕಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲವೆಂದು ಇಂತಹ ವೇದಿಕೆಯಲ್ಲಿ ಆಗಾಗ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶಿಕ್ಷಕರಿಗೆ ಇರುವಷ್ಟು ಜವಾಬ್ದಾರಿ ಪಾಲಕರಿಗೂ ಇರಬೇಕು ಎಂದು ಸಲಹೆ ನೀಡಿದರು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ಗೋವಿಂದ, ರವಿಕುಮಾರ್, ಗ್ರಾಮ ಪಂಚಾಯಿತಿ ಸದಸ್ಯರಾದ ಶಿವಣ್ಣ, ರಾಜು, ಮಹದೇವ, ಶಿವಣ್ಣ, ಮಾದೇಶ, ಎಸ್‌ಡಿಎಂ ಸಿ ಸದಸ್ಯರಾದ ಸುಜಾತಾ, ಕಾಂತ, ಶಿಕ್ಷಕರಾದ ಸೋಮಶೇಖರ್, ರವಿಕುಮಾರ್, ಗುರುಸ್ವಾಮಿ, ಮಹೇಶ್ ಮೂರ್ತಿ, ಮಮತಾ ಸೇರಿದಂತೆ ಪಾಲಕರು, ಮಕ್ಕಳು ಇದ್ದರು. ಮುಖ್ಯಶಿಕ್ಷಕ ಬಸವರಾಜು ಸ್ವಾಗತಿಸಿದರು.