ನ್ಯೂಸ್

ತಪಿತಸ್ಥ ನೌಕರನಿಗೆ ನೀಡುವ ಶಿಕ್ಷೆ ಅಪರಾಧಕ್ಕೆ ತಕ್ಕಂತಿರಲಿ : ಹೈಕೋರ್ಟ್ ಅಭಿಪ್ರಾಯ

ಬೆಂಗಳೂರು: ನೌಕರ ತಪ್ಪು ಎಸಗಿದಲ್ಲಿ ಆತನಿಗೆ ನೀಡುವ ಶಿಕ್ಷೆಯು ಆತ ಎಸಗಿದ ಅಪರಾಧಕ್ಕೆ ಅನುಗುಣವಾಗಿರಬೇಕು ಮತ್ತು ಆ ವೇಳೆ ಆತ ಸುದೀರ್ಘವಾಗಿ ಕಳಂಕರಹಿತರಾಗಿ ಸೇವೆ ಸಲ್ಲಿಸಿದ ಅವಧಿ, ಆತ ಪಡೆದಿರುವ ಬಡ್ತಿ, ನಿವೃತ್ತಿಗೆ ಇರುವ ಸಮಯ ಮತ್ತಿತರ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

ಸಿಂಡಿಕೇಟ್ ಬ್ಯಾಂಕ್‌ನ ಮಾಜಿ ಉದ್ಯೊಗಿ, ಬೆಂಗಳೂರಿನ ನಾಗರಭಾವಿಯ ವಾಸಿ ಎಂ.ಆರ್.ನಾಗರಾಜನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ವಾದ -ಪ್ರತಿವಾದ ಆಲಿಸಿದ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರರು ಈಗಾಗಲೇ ಸೇವಾ ಅವಧಿ ಪೂರೈಸಿದ್ದು ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಈ ಹಂತದಲ್ಲಿ ವಜಾ ಆದೇಶ ರದ್ದುಗೊಳಿಸುವುದು ಮತ್ತು ಪುನಃ ಕೆಲಸಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಲಾಗದು ಎಂದು ಪೀಠ ಹೇಳಿದೆ.

ಆದರೆ, ದಾಖಲೆಗಳನ್ನು ಒದಗಿಸದಿರುವ ಬ್ಯಾಂಕ್ ಕ್ರಮಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ವಿಚಾರಗಳಲ್ಲಿ ಬ್ಯಾಂಕ್ ಆರೋಪಗಳ ಕುರಿತು ವರದಿಗಳನ್ನು ಮೇಲ್ಮನವಿದಾರರಿಗೆ ಒದಗಿಸಬೇಕಿತ್ತು. ಕನಿಷ್ಠ ತನಿಖಾ ದಾಖಲೆಗಳನ್ನು ಏಕಸದಸ್ಯಪೀಠದ ಮುಂದಾದರೂ ಸಲ್ಲಿಸಬಹುದಿತ್ತಾದರೂ, ಈ ಪ್ರಕರಣದಲಿ ್ಲಆದೂ ನಡೆದಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.

ಅರ್ಜಿದಾರರ ಮೇಲೆ ನಿಷ್ಠರಲ್ಲದ ಸಾಲಗಾರರಿಗೆ ಮನದಬಂದಂತೆ ಸಾಲ ಮಂಜೂರಾತಿ ಮಾಡಿರುವುದು ಮತ್ತು ಮರು ಪಾವತಿಗೆ ಪಡೆಯಬೇಕಿದ್ದ ಭದ್ರತೆಗಳಲ್ಲಿ ರಾಜಿ ಸಂಧಾನ ಮಾಡಿಕೊಂಡಿರುವ ಆರೋಪವಿದೆ. ಅದೇ ಕಾರಣಕ್ಕೆ ಬ್ಯಾಂಕ್ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿತ್ತು.

ಕಡ್ಡಾಯ ನಿವೃತ್ತಿ ಶಿಕ್ಷೆ ನೀಡಬೇಕು:

ಮೇಲ್ಮನವಿದಾರರು 1979ರಲ್ಲಿ ಬ್ಯಾಂಕ್ ನಲ್ಲಿ ಗುಮಾಸ್ತರಾಗಿ ಆಗಿ ಸೇವೆಗೆ ಸೇರ್ಪಡೆಗೊಂಡರು. ಆನಂತರ 1996ರಲ್ಲಿ ಮೊದಲ ಬಡ್ತಿ ಪಡೆದು ಅಧಿಕಾರಿಯಾಗಿದ್ದಾರೆ. ಆದಾದ 3 ವರ್ಷದ ಬಳಿಕ ಮ್ಯಾನೇಜರ್ ಆಗಿ ಬಡ್ತಿ ಹೊಂದಿದ್ದಾರೆ ಮತ್ತು ಸ್ಟಾರ್ ಫರ್ಮಾಮರ್ ಪ್ರಶಸ್ತಿ ಪಡೆದಿದ್ದಾರೆ. 400 ಕೋಟಿ ರೂ. ಸಾಲ ವಸೂಲು ಮಾಡಿ ಉತ್ತಮ ಉದ್ಯೊಗಿ ಎಂದು ಪ್ರಮಾಣಪತ್ರ ಪಡೆದಿದ್ದಾರೆ. ಹಾಗಾಗಿ ಈ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಆದರೆ, ಸಂಪೂರ್ಣ ಕ್ಲೀನ್‌ಚಿಟ್ ನೀಡಲಾಗದು. ಹೊರತಾಗಿ ಬ್ಯಾಂಕ್ ಸೇವೆಯಿಂದ ವಜಾಗೊಳಿಸುವ ಬದಲು ಕಡ್ಡಾಯ ನಿವೃತ್ತಿ ಶಿಕ್ಷೆಯನ್ನು ನೀಡಬೇಕು ಎಂದು ಪೀಠವು ಆದೇಶಿಸಿದೆ.