ಬೆಂಗಳೂರು: ಯಾವ ಅಧಿಕಾರಿಯೂ ಸಹ ಡಾ.ಅಂಬೇಡ್ಕರ್ ಕುರಿತು ತಿಳಿದುಕೊಳ್ಳದೇ ಶೋಷಿತರ ಪರವಾಗಿ ಕೆಲಸ ಮಾಡಲಾರ(The progress of the oppressed is impossible without knowing Ambedkar's wishes). ಆದ್ದರಿಂದ ಅವರ ಆಶಯಗಳ ಬಗ್ಗೆ ಹೆಚ್ಚು ಜ್ಞಾನ ಹೊಂದುವ ಅನಿವಾರ್ಯತೆಯಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ (HC Mahadevappa) ಅಭಿಪ್ರಾಯಪಟ್ಟರು.
ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳ ಸಮಾಜ ಕಲ್ಯಾಣ ಇಲಾಖೆಯ ಯೋಜನೆ/ಕಾರ್ಯಕ್ರಮ ಹಾಗೂ ಇಲಾಖೆಯ ಅಡಿ ಬರುವ ನಿಗಮ-ಮಂಡಳಿಗಳ ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ಎಂದರೆ, ಸಮಾನತೆ, ಸ್ವಾತಂತ್ರ್ಯ, ನ್ಯಾಯದ ವಿಷಯಗಳನ್ನು ಜನ ಜನಿತವಾಗಿಸುವ ಜವಾಬ್ದಾರಿಯನ್ನು ಹೊಂದಿರುವ ಇಲಾಖೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ನಿಷ್ಠೆಯಿಂದ ದುಡಿಯಬೇಕು ಎಂದು ಸಲಹೆ ನೀಡಿದರು.
ಬೆಳಗಾವಿ ಮತ್ತು ಕಲ್ಬುರ್ಗಿಯ ಕಂದಾಯ ವಿಭಾಗದ ಜನರ ಬದುಕನ್ನು ಸುಧಾರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು. ಪರಿಶಿಷ್ಟ ಸಮುದಾಯದ ವಸತಿ ಶಾಲೆ ವಿದ್ಯಾರ್ಥಿಗಳ ಸುರಕ್ಷತೆಯ ಕುರಿತಂತೆ ಅಗತ್ಯ ಕ್ರಮ ವಹಿಸಲು ಶಾಲೆಯ ಸಿಬ್ಬಂದಿಗೆ ಅಗತ್ಯ ನಿರ್ದೇಶನ ನೀಡುವಂತೆ ಸೂಚಿಸಿದರು.
ಹಾಸ್ಟೆಲ್ ಗಳಲ್ಲಿ ಆಹಾರ ಮತ್ತು ಸ್ವಚ್ಛತಾ ನಿರ್ವಹಣೆಯ ಕುರಿತು ಗಮನ ಹರಿಸಬೇಕು ಮತ್ತು ಮಕ್ಕಳ ಪರಿಣಾಮಕಾರಿ ಶಿಕ್ಷಣಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಅಧಿಕಾರಿಗಳು ಪರಿಶೀಲನೆಗಾಗಿ ಪರಿಶೀಲನೆ ಮಾಡದೇ ಫಲಿತಾಂಶ ಕೇಂದ್ರಿತ ಕೆಲಸವನ್ನು ಮಾಡಬೇಕು. ಕಾನೂನಿನ ವ್ಯಾಪ್ತಿಯಲ್ಲೇ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೆಲವು ಜಿಲ್ಲೆಗಳಲ್ಲಿ ಮಕ್ಕಳ ಹಾಜರಾತಿ ಪ್ರಮಾಣ ಕಡಿಮೆ ಆಗಿದ್ದು ಶೋಷಿತ ವರ್ಗಗಳ ಮಕ್ಕಳು ಶಿಕ್ಷಣ ಪಡೆದು ಮುನ್ನಡೆಯಬೇಕೆಂಬ ಆಶಯಕ್ಕೆ ಧಕ್ಕೆ ಆಗಲಿದೆ. ಈ ನಿಟ್ಟಿನಲ್ಲಿ ಮಕ್ಕಳ ಶಾಲಾ ದಾಖಲಾತಿಯ ಪ್ರಮಾಣವು ಹೆಚ್ಚಳ ಆಗುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಗ್ರಾಮೀಣ ಮಕ್ಕಳಿಗೆ ನಗರಕ್ಕೆ ಬಂದು ಶಿಕ್ಷಣ ಪಡೆಯುವ ಉದ್ದೇಶದಿಂದ ಹಾಸ್ಟೆಲ್ಗಳನ್ನು ಒದಗಿಸಲಾಗಿದೆ. ಹಾಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರ ನೀಡುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ತಲುಪಲು ನೆರವಾಗಬೇಕು ಎಂದು ಹೇಳಿದರು.
ಯಾವ ಸಮುದಾಯಗಳು ಶೋಷಿತರ ಮೇಲೆ ದೌರ್ಜನ್ಯ ಮಾಡುತ್ತವೆಯೋ ಅಂತಹ ಕಡೆಗಳಲ್ಲಿ ಹೋಗಿ ದೌರ್ಜನ್ಯಗಳ ವಿರುದ್ಧ ಅರಿವು ಮೂಡಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೇ ವಿನಃ, ಸಮಾನ ಮನಸ್ಕರೊಡನೆ ಮಾತ್ರವೇ ಮಾಡುವ ಅರಿವಿನ ಕಾರ್ಯಕ್ರಮಗಳು ಅಷ್ಟಾಗಿ ಪರಿಣಾಮ ಬೀರದು. ಜತೆಗೆ ದೌರ್ಜನ್ಯಗಳ ವಿರುದ್ಧ ಅರಿವು ಮೂಡಿಸಲು ಯುವ ಸಮೂಹವನ್ನು ಬಳಸಿಕೊಳ್ಳಬೇಕು ಎಂದು ಮಹದೇವಪ್ಪ ಸಲಹೆ ನೀಡಿದರು.