ನ್ಯೂಸ್

ದ್ವಂದ್ವ ಮೀರಿದ ಸಾಮ್ಯದ ನೀತಿಯೇ ಮನುಜನಿಗೆ ಅಭಯಪಥ

 ಶುಭವಾವುದಶುಭವಾವುದು ಲೋಕದಲಿ ನೋಡೆ?|

ವಿಭಜಿಸಲ್ಕಾಗದನ್ಯೋನ್ಯ ಸಂಬಂಧ||

ಉಭಯವನು ಮೀರ್ದ ಸಾಮ್ಯದ ನೀತಿಯೊಂದಿಹುದು|

ಅಭಯಪಥವದು ನಿನಗೆ-ಮಂಕುತಿಮ್ಮ||804||

ಹಾಗೆ ನೋಡಿದರೆ ಲೋಕದಲ್ಲಿ ಶುಭ ಮತ್ತು ಅಶುಭ ಯಾವುದು? ಅವುಗಳ ನಡುವೆ ವಿಭಜಿಸಲು ಸಾಧ್ಯವಿಲ್ಲದ ಅನ್ಯೋನ್ಯ ಸಂಬಂಧವಿದೆ. ಈ ದ್ವಂದ್ವವನ್ನು ಮೀರಿದ ಸಾಮ್ಯದ ನೀತಿ ಒಂದಿದೆ. ಅದು ನಿನಗೆ ಅಭಯಪಥ ಎನ್ನುತ್ತದೆ ಈ ಕಗ್ಗ. ಲೌಕಿಕ ಬದುಕಿನಲ್ಲಿ ಒಂದನ್ನು ಇನ್ನೊಂದಕ್ಕೆ ಹೋಲಿಸುವ ಮತ್ತು ಎಲ್ಲವನ್ನೂ ಬೇರೆಬೇರೆಯಾಗಿ ಕಾಣುವ ನಿಲುವು ಸರ್ವೆಸಾಮಾನ್ಯ

ವಾಗಿದೆ. ಹಾಗಾಗಿಯೆ ವಿಭಜನೆ, ವಿಂಗಡಣೆಯು ಎಲ್ಲೆಡೆಯೂ ಕಂಡುಬರುತ್ತದೆ. ಸುಖ-ದುಃಖ, ಇರುಳು- ಹಗಲು, ಬಡವ-ಬಲ್ಲಿದ, ಹುಟ್ಟು-ಸಾವು ಹೀಗೆ ಸದಾ ಜೊತೆಯಾಗಿರುವ ವಿರುದ್ಧಾರ್ಥಕ ಜೋಡಿಪದಗಳು ಬದುಕಿನುದ್ದಕ್ಕೂ ಮತ್ತೆಮತ್ತೆ ಕಾಣಿಸಿಕೊಳ್ಳುತ್ತವೆ. ವಿಶೇಷವೆಂದರೆ ಒಂದು ಇನ್ನೊಂದರ ಅಸ್ತಿತ್ವಕ್ಕೆ ಕಾರಣವಾಗಿರುತ್ತದೆ. ದುಃಖವನ್ನು ಅನುಭವಿಸಿ ದುದರಿಂದಲೇ ಸುಖವು ಆಪ್ಯಾಯಮಾನ, ನಲಿವಿಗೆ ಅರಳಿದುದರಿಂದ ನೋವು ಅಸಹನೀಯ, ಸಿರಿತನದ ಎದುರು ಬಡತನ ಕನಿಷ್ಠ, ಹುಟ್ಟು ಎಂದರೆ ಹರುಷ, ಸಾವು ಎಂದರೆ ಕ್ಲೇಶ. ಒಂದೊಂದಕ್ಕೂ ಒಂದೊಂದು ಭಾವ.

ದೂರದೂರಿಗೆ ಅವಸರದ ಕಾರ್ಯನಿಮಿತ್ತ ಹೊರಟವನಿಗೆ, ತಾನು ಹೋಗಬೇಕಾದ ಬಸ್ಸು ಹೊರಟು ಹೋಯಿತೆಂದು ತಿಳಿದಾಗ ನಿರಾಶೆ, ಅದು ಅಶುಭ ಸೂಚಕ. ಅದೇ ಬಸ್ಸು ದಾರಿ ಮಧ್ಯೆ ಅಪಘಾತಕ್ಕೆ ಒಳಗಾಗಿ ಪ್ರಯಾಣಿಕರಿಗೆ ತೊಂದರೆಯಾಯಿತು ಎಂದು ತಿಳಿದಾಗ ವಿವರಿಸಲಾಗದ ಸಂತಸ, ಆಗ ಅಶುಭವೆಂದು ಪರಿಗಣಿಸಿದುದು ಶುಭವಾಗಿ ಬದಲಾಗುತ್ತದೆ. ಮನೆಯಲ್ಲಿ ಮಗುವೊಂದು ಹುಟ್ಟಿದರೆ

ಸಂಭ್ರಮ. ಮನೆಯ ಸದಸ್ಯನು ಅಸುನೀಗಿದರೆ ಸಂಕಟ. ಸುದೀರ್ಘಕಾಲ ಅನೇಕ ರೋಗಗಳಿಂದ ಜರ್ಜರಿತರಾಗಿ ಹಾಸಿಗೆ ಹಿಡಿದ ಜೀವವನ್ನು ಉಳಿಸಿಕೊಳ್ಳಲು ಕುಟುಂಬಸದಸ್ಯರು ಹರಸಾಹಸ ಪಡುತ್ತಿರುತ್ತಾರೆ. ಅವರಿಗೆ ಆ ಬಂಧುವಿನ ಅಗಲಿಕೆಯಿಂದ ನೋವಾಗಬಹುದು. ಆದರೆ ನರಳುತ್ತಾ ಪರಾವಲಂಬಿಯಾಗಿ ಬದುಕುವ ಆ ಜೀವಕ್ಕೆ ಸಾವೆನ್ನುವುದು ಬಿಡುಗಡೆ. ಶ್ರೀಮಂತಿಕೆ ಮತ್ತು ಬಡತನವನ್ನು ಒಳ್ಳೆ ಯದು, ಕೆಟ್ಟದ್ದು ಎಂದು ವಿಭಜಿಸುವುದು ಸಮಾಜದ ರೀತಿ. ಆದರೆ ಅವೆರಡನ್ನು ಮುಖಾಮುಖಿಯಾಗಿಸಿದಾಗ ಎರಡರಲ್ಲೂ ಒಳಿತು-ಕೆಡುಕುಗಳಿರುವುದು ಅರ್ಥವಾಗುತ್ತದೆ. ಒಂದರ್ಥದಲ್ಲಿ ಹೀಗೆ ಎರಡನ್ನು ವಿಭಜಿಸಿ ನೋಡುವುದೇ ದುಃಖಕ್ಕೆ ಕಾರಣ.

ಜೀವನದ ಪ್ರತಿ ಸಂದರ್ಭವನ್ನೂ ಹೀಗೆಯೇ ಎಂದು ಹೇಳಲು ಸಾಧ್ಯವಿಲ್ಲ. ಈ ಕ್ಷಣಕ್ಕೆ ಸರಿ ಎನ್ನಿಸಿದುದು ಕಾಲಕ್ರಮೇಣ ತಪ್ಪಾಗಿ ಕಾಣಬಹುದು ಈಗ ದೋಷವೆನ್ನಿಸಿದುದು ಮುಂದೆ ಸ್ವೀಕಾರಾರ್ಹ

ವಾಗಬಹುದು. ಹಾಗಾಗಿ ಶುಭ ಅಶುಭವೆಂಬ ವಿಭಜನೆಯಲ್ಲಿ ಅರ್ಥವಿಲ್ಲ. ಕತ್ತಲು ಇದ್ದುದರಿಂದಲೇ ಬೆಳಕಿಗೆ ಬೆಲೆ, ದುಃಖವಿದ್ದುದರಿಂದ ಸುಖಕ್ಕಾಗಿ ಪ್ರಯತ್ನ. ಇವೆರಡರ ನಡುವೆ ಅನ್ಯೋನ್ಯ ಸಂಬಂಧವಿದೆ. ಲೋಕದ ದೃಷ್ಟಿಗೆ ತಾಯಿ ಮತ್ತು ಮಗು ಬೇರೆಬೇರೆ ಜೀವಗಳು. ಆದರೆ ತಾಯಿಯಿಂದ ಮಗು ಬೇರ್ಪಟ್ಟಿದೆ ಎಂಬ ಕಾರಣಕ್ಕೆ ಅವಳ ದೇಹದ ಭಾಗವಲ್ಲ ಎನ್ನುವುದಕ್ಕುಂಟೆ? ಜೀವನದ ಈ ಸೂಕ್ಷ್ಮವನ್ನು, ರಹಸ್ಯವನ್ನು ಕಿಂಚಿತ್ ಅರ್ಥ ಮಾಡಿ ಕೊಂಡರೂ ವ್ಯಕ್ತಿಯು ತನ್ನ ನಿಜ ನೆಲೆಯನ್ನು ತಿಳಿಯುತ್ತಾನೆ. ಅವ್ಯಕ್ತ

ವಾಗಿರುವ ಶಕ್ತಿಯೊಂದರ ಜೊತೆಗೆ ತನಗೆ ಅನ್ಯೋನ್ಯ ಸಂಬಂಧವಿದೆ ಎನ್ನುವುದು ಅರ್ಥವಾಗುತ್ತದೆ. ಹುಟ್ಟು-ಸಾವು ಪ್ರಕೃತಿಯಲ್ಲಿರುವ ಆವರ್ತನಾ ಕ್ರಿಯೆ. ಇರುಳು ಹಗಲು, ಸೃಷ್ಟಿ-ಪ್ರಳಯಗಳು ನಿಸರ್ಗ ಸಹಜತೆ. ಪರಸ್ಪರ ವ್ಯತ್ಯಸ್ಥವಾಗಿರಬಹುದಾದರೂ ಶುಭ ಅಶುಭ ಎಂದು ವಿಭಜಿಸುವುದಕ್ಕಿಲ್ಲ. ಸಾವೆಂದರೆ ನಾಶವಲ್ಲ, ಆರಂಭ, ಮರು ಹುಟ್ಟು. ಹೀಗೆ ನಿಯಾಮಕ ಶಕ್ತಿಯು ಜಗತ್ತನ್ನು ಸಮನ್ವಯದಿಂದ ಪೊರೆಯುತ್ತಿದೆ. ಅಲ್ಲಿರುವ ಸಂಯೋಜನೆ, ಸಂದರ್ಭಗಳ ಹಿಂದೆ ಮನುಜ ಮತಿಗೆ ನಿಲುಕದ ಕಾರಣವಿರುತ್ತದೆ. ಹಾಗಾಗಿ ಆ ಅವ್ಯಕ್ತ ಶಕ್ತಿಯಲ್ಲಿ ದ್ವಂದ್ವಗಳಿಲ್ಲ. ಎಲ್ಲವೂ ಸಮಾನ. ಇದು ಅರ್ಥವಾದರೆ ವ್ಯಕ್ತಿಯೊಳಗೆ ಬಲವಾಗಿ ಬೆಳೆದಿರುವ ಬೇರೆತನದ ಭಾವವು ಅಳಿಸಿಹೋಗುತ್ತದೆ. ತಾಯಿಯಂತಿರುವ ದೇವರ ಮಕ್ಕಳು ನಾವು ಎಂಬ ಸತ್ಯವು ಮನನವಾಗುತ್ತದೆ. ಆಗ ತನ್ನನ್ನು ತಾನು ಅರಿಯಲು, ಆತ್ಮಜ್ಞಾನವನ್ನು ಹೊಂದಲು ಜೀವನವೇ ಅಭಯಪಥವಾಗುತ್ತದೆ. ಅಲೌಕಿಕ ಅನುಭವಕ್ಕೆ ಜೀವವು ಹಂಬಲಿಸುತ್ತದೆ.