ಅಜರ್ಬೈಜಾನ್ ಮತ್ತು ಟರ್ಕಿ ದೇಶಗಳನ್ನು ಸರ್ವರೀತಿಯಲ್ಲೂ ಬಹಿಷ್ಕರಿಸಬೇಕೆಂದು ನಾಲ್ಕೈದು ದಿನಗಳಿಂದ ಭಾರತೀಯರು ನಡೆಸುತ್ತಿದ್ದ ಅಭಿಯಾನ ಈಗ ವೇಗ ಪಡೆದುಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ಇತ್ತೀಚೆಗೆ ‘ಆಪರೇಷನ್ ಸಿಂಧೂರ’ ನಡೆಸಿದಾಗ ಈ ರಾಷ್ಟ್ರಗಳು ಪಾಕಿಸ್ತಾನದ ಪರ ನಿಲುವು ತಳೆದಿದ್ದವು.
ಭಾರತದ ಕಾರ್ಯಾಚರಣೆಯನ್ನು ‘ಅಪ್ರಚೋದಿತ ದಾಳಿ, ಪಾಕ್ ಸಾರ್ವಭೌಮತೆಗೆ ಧಕ್ಕೆ, ಅಮಾಯಕರ ನಾಗರಿಕರ ಬಲಿ’ ಎಂದೆಲ್ಲ ಬಣ್ಣಿಸಿದ್ದವು. ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ 26 ಅಮಾಯಕರನ್ನು ಪಾಕ್ ಪ್ರಾಯೋಜಿತ ಭಯೋತ್ಪಾದಕರು ಭೀಕರವಾಗಿ ಹತ್ಯೆಗೈದಿದ್ದು ಈ ಎರಡು ದೇಶಗಳ ಕಣ್ಣಿಗೆ ‘ಪ್ರಚೋದನೆ’ ಎನಿಸಿರಲಿಲ್ಲ. ಆ ಉಗ್ರದಾಳಿಯನ್ನು ಇವು ಖಂಡಿಸಿರಲಿಲ್ಲ. ಅಷ್ಟೇ ಅಲ್ಲ, ಭಾರತ-ಪಾಕ್ ಯುದ್ಧದ ಸಂದರ್ಭದಲ್ಲಿ ಇವು ಪಾಕಿಸ್ತಾನಕ್ಕೆ ನೆರವು ನೀಡಿದ್ದು ಕೂಡ ಬಹಿರಂಗವಾಯಿತು. ಉದ್ವಿಗ್ನತೆ ಉಲ್ಬಣವಾದಾಗ ಭಾರತದ ಗಡಿ ಪ್ರದೇಶಗಳಿಗೆ ಪಾಕಿಸ್ತಾನವು ಟರ್ಕಿ ನಿರ್ವಿುತ 300-400 ಡ್ರೋನ್ಗಳನ್ನು ಕಳಿಸಿದ್ದನ್ನು ಭಾರತೀಯ ಸೇನೆಯೇ ಬಯಲು ಮಾಡಿತ್ತು.
ಈಗ ಭಾರತ-ಪಾಕ್ ಗಡಿ ಶಾಂತವಾಗಿದೆ. ಆದರೆ ಭಾರತೀಯರ ಸಿಟ್ಟು ತಣ್ಣಗಾಗಿಲ್ಲ. ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ ಟರ್ಕಿ ಮತ್ತು ಅಜರ್ಬೈಜಾನ್ ಮೇಲೆ ಈ ಸಿಟ್ಟು ತಿರುಗಿದೆ. ಆ ರಾಷ್ಟ್ರಗಳಿಗೆ ಪ್ರವಾಸ ಹೊರಟಿದ್ದ ಭಾರತೀಯರು ತಮ್ಮ ಪ್ರವಾಸವನ್ನು ರದ್ದುಪಡಿಸಿದ್ದಾರೆ. ಈ ಪ್ರವಾಸವನ್ನು ಸಂಘಟಿಸಿದ್ದ ಟ್ರಾವೆಲ್ ಕಂಪನಿಗಳು ಕೂಡ ಈ ಬಹಿಷ್ಕಾರಕ್ಕೆ ಕೈಜೋಡಿಸಿ, ತಾವೇ ಖುದ್ದಾಗಿ ಆ ಎರಡು ರಾಷ್ಟ್ರಗಳ ಬುಕಿಂಗ್ ಸ್ಥಗಿತಗೊಳಿಸಿವೆಯಲ್ಲದೆ ಭಾರತೀಯರ ಭಾವನೆಗಳಿಗೆ ಪೂರಕವಾಗಿ ಸ್ಪಂದಿಸುತ್ತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್ ಟರ್ಕಿ, ಬಾಯ್ಕಾಟ್ ಅಜರ್ಬೈಜಾನ್ ಎಂಬ ಹ್ಯಾಷ್ಟ್ಯಾಗ್ಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದು ಸಾಲದೆಂಬಂತೆ, ಆ ರಾಷ್ಟ್ರಗಳಲ್ಲಿ ತಯಾರಾದ ವಸ್ತುಗಳನ್ನು ಭಾರತೀಯರ್ಯಾರೂ ಖರೀದಿಸಬಾರದು ಎಂಬ ಅಭಿಯಾನವೂ ಆರಂಭವಾಗಿದೆ. ರಾಜಕಾರಣಿಗಳೂ ಇದಕ್ಕೆ ಮುಕ್ತ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದ ಈ ರಾಷ್ಟ್ರಗಳ ಮೇಲೆ ಆಗುವ ಪರಿಣಾಮ ಅಷ್ಟಿಷ್ಟಲ್ಲ. ಟರ್ಕಿಗೆ ಪ್ರವಾಸ ಕೈಗೊಂಡ ಭಾರತೀಯರ ಸಂಖ್ಯೆ 2014ರಲ್ಲಿ 1.19 ಲಕ್ಷ ಇದ್ದದ್ದು 2024ರಲ್ಲಿ 3.30 ಲಕ್ಷಕ್ಕೆ ಏರಿದೆ. ಪರಿಣಾಮವಾಗಿ ಅದರ ಪ್ರವಾಸೋದ್ಯಮ ಆದಾಯ ಕಳೆದ ವರ್ಷ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ, 61.1 ಶತಕೋಟಿ ಡಾಲರ್ಗೆ ಏರಿದೆ.
ಅಜರ್ಬೈಜಾನ್ಗೆ ಪ್ರವಾಸ ಕೈಗೊಂಡ ಭಾರತೀಯರ ಸಂಖ್ಯೆ 2014ರಲ್ಲಿ ಕೇವಲ 4,853 ಇದ್ದದ್ದು 2023ರಲ್ಲಿ 1.17 ಲಕ್ಷಕ್ಕೆ, 2024ರಲ್ಲಿ 2.43 ಲಕ್ಷಕ್ಕೆ ಏರಿದೆ. ಒಂದು ಅಂದಾಜಿನ ಪ್ರಕಾರ, ಈ ಎಲ್ಲದರಿಂದ ಆ ರಾಷ್ಟ್ರಗಳಿಗೆ ಆಗುವ ನಷ್ಟ ಸುಮಾರು 4 ಸಾವಿರ ಕೋಟಿ ರೂ. ಎಂದು ಹೇಳಲಾಗುತ್ತಿದೆ. ಕೇವಲ ಒಂದು ವರ್ಷದ ಹಿಂದೆ ಮಾಲ್ದೀವ್ಸ್ ನ ಕೆಲವು ಕಿರಿಯ ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಆಡಿದ ಅವಹೇಳನಕಾರಿ ಮಾತುಗಳು ಆ ರಾಷ್ಟ್ರಕ್ಕೆ ಎಷ್ಟು ‘ದುಬಾರಿ’ಯಾಗಿ ಪರಿಣಿಮಿಸಿತು ಎಂಬ ಉದಾಹರಣೆ ಕಣ್ಣ ಮುಂದೆಯೇ ಇದೆ. ಆಗಲೂ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ಬಹಿಷ್ಕಾರದ ಕೂಗು ಎಬ್ಬಿಸಿ, ಕೊನೆಗೆ ಅದು ಇಡೀ ದೇಶದಲ್ಲಿ ಒಂದು ಅಭಿಯಾನವಾಗಿ ರೂಪುಗೊಂಡಿತ್ತು. ಕೊನೆಗೆ ತಮ್ಮ ದೇಶಕ್ಕಾದ ನಷ್ಟವನ್ನು ಮನಗಂಡು, ಮಾಲ್ದೀವ್ಸ್ನ ಹಿರಿಯ ರಾಜಕಾರಣಿಗಳೆಲ್ಲ ಕ್ಷಮೆ ಯಾಚಿಸಿ, ಭಾರತದ ಮುಂದೆ ಮಂಡಿಯೂರಬೇಕಾಯಿತು. ಅಂತಹುದೇ ಪರಿಸ್ಥಿತಿ ಟರ್ಕಿ ಮತ್ತು ಅಜರ್ಬೈಜಾನ್ಗೆ ಎದುರಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.