ನ್ಯೂಸ್

25 ಲಕ್ಷ ರೂ. ಮೌಲ್ಯದ ಒಡವೆ ಹಿಂದಿರುಗಿಸಿದ ಪೊಲೀಸ್

ಹೊಸನಗರ/ಆಯನೂರು: ಇದು ಇಡೀ ಪೊಲೀಸ್ ಇಲಾಖೆಯೇ ಹೆಮ್ಮೆ ಪಡುವ ವಿಚಾರ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆಗೆ ಈ ಘಟನೆ ಒಂದು ಗರಿ ಮೂಡಿಸಿದೆ.

ಮೇ 23ರಂದು ಕುಂಸಿ ಠಾಣೆ ವ್ಯಾಪ್ತಿಯ ಚೋರಡಿ ಬಳಿ ಲಾರಿ ಮತ್ತು ಕಾರಿನ ನಡುವೆ ಅಪಘಾತವಾಗಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಕಡೂರು ನಿವಾಸಿ, ಮೆಸ್ಕಾಂ ನೌಕರ ಸುಬ್ಬಯ್ಯ ಮತ್ತು ಪತ್ನಿ ಭಾರತಿ ಚೋರಡಿ ಬಳಿ ತುಪ್ಪೂರಿನಿಂದ ಕಡೂರಿಗೆ ತೆರಳುವಾಗ ದುರ್ಘಟನೆ ನಡೆದಿತ್ತು.

ಪತ್ನಿಯನ್ನು ಕಳೆದುಕೊಂಡ ಸುಬ್ಬಯ್ಯ ಅವರ ಮನೆಯಲ್ಲಿ ಸೂತಕ ನಿರ್ಮಾಣವಾಗಿತ್ತು. ಸೋಮವಾರ ಮೂರನೇ ದಿನ ಕಾರ್ಯ. ಈ ಸಮಯದಲ್ಲಿ ಕುಂಸಿ ಠಾಣೆಯಿಂದ ಅವರಿಗೆ ಫೋನ್ ಬಂತು. ‘‘ಠಾಣೆಗೆ ಬಂದು ಹೋಗಿ’’ ಎಂದು ವಿನಂತಿಸಿಕೊಂಡಿದ್ದಾರೆ. ಏನಿರಬಹುದು ಎಂದು ಸುಬ್ಬಯ್ಯ ಅವರ ಮನೆ ಕಡೆಯಿಂದ ಐವರು ಠಾಣೆಗೆ ಧಾವಿಸಿದ್ದಾರೆ. ಪಿಎಸ್‌ಐ ನವೀನ್ ಮಠಪತಿ ಅಂದಾಜು 20 ರಿಂದ 25 ಲಕ್ಷ ರೂ. ಬೆಲೆಬಾಳುವ ವಿವಿಧ ಬಂಗಾರದ ಆಭರಣವನ್ನು ಕೈಗಿತ್ತು ‘‘ಇದು ನಿಮಗೆ ಸೇರಿದ್ದು’’ ಎಂದು ಹೇಳಿದ್ದಾರೆ.

ನಿಜಕ್ಕೂ ಆಗಿದ್ದೇನೆಂದರೆ, ಕುಂಸಿ ಪಿಎಸ್‌ಐ ಮಠಪತಿ ಊಟಕ್ಕಾಗಿ ಆಯನೂರಿಗೆ ತೆರಳುತ್ತಿದ್ದ ವೇಳೆ ಆದಾಗಲೇ ಅಪಘಾತಕ್ಕೀಡಾಗಿದ್ದ ಕಾರನ್ನು ಪರಿಶೀಲಿಸಿದ್ದಾರೆ. ಆಸ್ಪತ್ರೆಗೆ ತೆರಳಿದ ಕಾರಣ ಕುಟುಂಬದವರು ಯಾರೂ ಇರಲಿಲ್ಲ. ಜನರು ಮಾತ್ರ ನೋಡಿ ಹೋಗುತ್ತಿದ್ದರು. ಕಾರನ್ನು ಪರಿಶೀಲಿಸುವಾಗ ಕಾರಿನಲ್ಲಿ ಒಂದು ಬ್ಯಾಗ್ ಇರುವುದು ಕಂಡು ಬಂದಿದೆ. ಅವರು ಆ ಬ್ಯಾಗನ್ನು ಸ್ಟೇಷನ್‌ಗೆ ಕೊಂಡೊಯ್ದು ಪರಿಶೀಲಿಸಿದಾಗ ಬಂಗಾರದ ಆಭರಣಗಳು ಅದರಲ್ಲಿದ್ದವು.

ಭಾರತಿ ತಮ್ಮೊಂದಿಗೆ ಚಿನ್ನಾಭರಣ ತಂದ ವಿಷಯವನ್ನು ಪತಿಗೆ ತಿಳಿಸಿರಲಿಲ್ಲ. ಅದರಲ್ಲಿ ಡೈಮಂಡ್ ನೆಕ್ಲೇಸ್, ಚಿನ್ನದ ಸರಗಳು ಹಾಗೂ 8 ಉಂಗುರ ಇದ್ದವು. ಮನೆಯಿಂದ ಬಂಗಾರ ನಾಪತ್ತೆಯಾದ ಬಗ್ಗೆ ಸುಬ್ಬಯ್ಯ ದೂರನ್ನು ನೀಡಿರಲಿಲ್ಲ. ಆದರೂ ಪಿಎಸ್‌ಐ ಮಠಪತಿ ಅವರು ಆ ಆಭರಣಗಳನ್ನು ಮನೆಯವರಿಗೆ ತಲುಪಿಸಿ ಭೇಷ್ ಎನ್ನಿಸಿಕೊಂಡಿದ್ದಾರೆ.