ಬೆಂಗಳೂರು: ಭೂ ಕಬಳಿಕೆ ಹಾಗೂ ಜಾತಿ ನಿಂದನೆ ಆರೋಪದಡಿ ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ.ಸುಧಾಕರ್ ಅವರ ವಿರುದ್ಧ ನಗರದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದ್ದು, ಪ್ರಕರಣದ ಸಂಬಂಧ ಯಲಹಂಕ ಠಾಣೆ ಪೊಲೀಸರು ಸಚಿವ ಡಿ.ಸುಧಾಕರ್ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಸಿದ್ದತೆ ನಡೆಸಿದ್ದಾರೆ. ಮತ್ತೊಂದೆಡೆ ಪೊಲೀಸರು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದ್ದಾರೆ.
ಸಚಿವ ಡಿ.ಸುಧಾಕರ್ ವಿರುದ್ಧ ಎ್ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಸುಬ್ಬಮ್ಮ ಎಂಬುವರು ನೀಡಿದ ದೂರು ಆಧರಿಸಿ ಸಚಿವ ಸುಧಾಕರ್, ಶ್ರೀನಿವಾಸ್ ಮತ್ತು ಭಾಗ್ಯಮ್ಮ ಎಂಬುವವರ ವಿರುದ್ಧ ದಲಿತರ ಮೇಲೆ ದೌರ್ಜನ್ಯ, ವಂಚನೆ, ಹಲ್ಲೆ ಹಾಗೂ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಸುಧಾಕರ್ ಅವರು ಪ್ರಕರಣದಲ್ಲಿ ಎರಡನೇ ಆರೋಪಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ಸೆವೆನ್ ಹಿಲ್ಸ್ ಡೆವಲಪರ್ಸ್ ಮತ್ತು ಟ್ರೇಡರ್ಸ್ ಕಂಪನಿಯ ಪಾಲುದಾರರಾದ ಸಚಿವ ಸುಧಾಕರ್ ಅವರು ಮೋಸದಿಂದ ಯಲಹಂಕ ಗ್ರಾಮದ ಸರ್ವೆ ನಂಬರ್ ೧೦೮/೧ರ ಜಮೀನು ಕಬಳಿಸಿದ್ದಾರೆ. ಈ ಜಮೀನಿನ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಸೆ.೯ ರ ಮಧ್ಯಾಹ್ನ ೨ ಗಂಟೆಯ ಸಮಯದಲ್ಲಿ ಸಚಿವರು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿದ್ದ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕುಟುಂಬದ ಮಹಿಳೆಯರನ್ನು ಹೊರಗೆ ಎಳೆದೊಯ್ದು ಜೆಸಿಬಿ ಮೂಲಕ ಮನೆ ಕೆಡವಿಸಿದ್ದಾರೆ ಎಂದು ಸುಬ್ಬಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಸಹಚರರಿಂದ ದೌರ್ಜನ್ಯ:
ಸಚಿವ ಡಿ.ಸುಧಾಕರ್ ಅವರು, ಜಿ. ಶ್ರೀನಿವಾಸ ಮತ್ತು ಭಾಗ್ಯಮ್ಮ ಎಂಬುವವರ ಜತೆ ನಮ್ಮ ಮನೆಯಲ್ಲಿ ಯಾರು ಇಲ್ಲದ ವೇಳೆ ೩೫ ರಿಂದ ೪೦ ಸಹಚರರೊಂದಿಗೆ ಆಗಮಿಸಿದ್ದರು. ಇದರಲ್ಲಿ ೧೫ ಜನ ಹೆಂಗಸರು ಇದ್ದರು. ಜೆಸಿಬಿ ಸಮೇತ ಆಗಮಿಸಿದ್ದ ಸಚಿವರು, ಜೆಸಿಬಿ ಯಂತ್ರದಿಂದ ನಮ್ಮ ಕಟ್ಟಡಗಳನ್ನು, ಶೀಟಿನ ಶೆಡ್ ಮತ್ತು ಕಾಂಪೌಂಡ್ ಗೋಡೆಗಳನ್ನು ಕೆಡವಿದ್ದರು. ವಿಷಯ ತಿಳಿದು ನಾವು ಸ್ಥಳಕ್ಕೆ ಹೋದಾಗ ೩೫ ಜನ ನಮ್ಮ ಮೇಲೆ ದೌರ್ಜನ್ಯ ಮಾಡಿ, ನನ್ನ ಮಗಳಾದ ಆಶಾ ಮೇಲೆ ಹಲ್ಲೆ ಮಾಡಿದ್ದಾರೆ. ಏಕೆ ರೀತಿಯಾಗಿ ಮಾಡುತ್ತಿದ್ದೀರಿ ಎಂದು ಕೇಳಿದ್ದಾಗ ನಮ್ಮ ಜಾತಿ ನಿಂದನೆ ಮಾಡಿದ್ದರು ಎಂದು ಸುಬ್ಬಮ್ಮ ಆರೋಪಿಸಿದ್ದಾರೆ.