ಬೆಂಗಳೂರು: ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡಕ್ಕೆ ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ನಡೆಸುವ ಸಂಬಂಧ ಭದ್ರತಾ ವಿಭಾಗ ಡಿಸಿಪಿ ಬರೆದಿದ್ದ ಎಚ್ಚರಿಕೆ ಅಂಶಗಳನ್ನೊಳಗೊಂಡ ಪತ್ರ ವೈರಲ್ ಆಗಿದೆ.
ತಂಡದ ಆಟಗಾರರಿಗೆ ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡಲು ಅನುಮತಿ ಕೇಳಿ ಕೆಎಸ್‌ಸಿಎ ಪತ್ರ ಬರೆದ ಬಳಿಕ, ಭದ್ರತಾ ವಿಚಾರವಾಗಿ ಅಭಿಪ್ರಾಯ ನೀಡುವಂತೆ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಎಂ.ಎನ್. ಕರಿಬಸವನಗೌಡಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಸತ್ಯವತಿ ಪತ್ರ ಬರೆದಿದ್ದರು.
ಪತ್ರಕ್ಕೆ ಜೂನ್ 4ರಂದು ಉತ್ತರಿಸಿದ್ದ ಕರಿಬಸವನಗೌಡ, ಆರ್‌ಸಿಬಿ ತಂಡಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸನ್ಮಾನ ಕಾರ್ಯಕ್ರಮವನ್ನು ಆತುರದಲ್ಲಿ ಆಯೋಜನೆ ಮಾಡುವುದು ಬೇಡ. ಬಂದೋಬಸ್ತ್ ಕರ್ತವ್ಯಕ್ಕೆ ತೊಂದರೆ ಆಗುವ ಸಾಧ್ಯತೆಯಿದೆ. ನಿಯಮಗಳ ಅನುಸಾರ ಕಾರ್ಯಕ್ರಮ ನಡೆಸಲು ಸಮಯಾವಕಾಶದ ಅಗತ್ಯವಿದೆ. ಆದರೂ ಸರ್ಕಾರದ ನಿರ್ಣಯದಂತೆ ನಡೆದುಕೊಳ್ಳಲಾಗುವುದು ಎಂದು ಕಾರ್ಯದರ್ಶಿಗೆ ಪತ್ರ ಮುಖೇನ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಮನವರಿಕೆ ಮಾಡಿಕೊಟ್ಟಿದ್ದರು. ಪೊಲೀಸರ ಎಚ್ಚರಿಕೆಗಳನ್ನು ಗಾಳಿಗೆ ತೂರಿ ರಾಜ್ಯ ಸರ್ಕಾರ ವಿಧಾನಸೌಧ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಅಂದು ಆರ್‌ಸಿಬಿ ತಂಡಕ್ಕೆ ಸನ್ಮಾನ ಮಾಡುವ ಸಮಯಕ್ಕೆ ಮಳೆ ಬಾರದೆ ಇದ್ದರೆ ಅಥವಾ ಕಾರ್ಯಕ್ರಮ 10 ನಿಮಿಷ ಮುಂದುವರಿದಿದ್ದರೆ ವಿಧಾನಸೌಧಕ್ಕೂ ಅಭಿಮಾನಿಗಳು ನುಗ್ಗುವ ಲಕ್ಷಣ ಇದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಲ್ಲೇಖಿಸಿರುವ ಅಂಶಗಳು:
ಆರ್‌ಸಿಬಿ ತಂಡಕ್ಕೆ ದೇಶಾದ್ಯಂತ ಅಭಿಮಾನಿ ಬಳಗವಿದೆ. ಆತುರದಲ್ಲಿ ಕಾರ್ಯಕ್ರಮ ಆಯೋಜಿಸಿದರೆ ಲಕ್ಷಾಂತರ ಅಭಿಮಾನಿಗಳು ಆಗಮಿಸಬಹುದು. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ/ಸಿಬ್ಬಂದಿ ಕೊರತೆ ಇರುವುದರಿಂದ ಬಂದೋಬಸ್ತ್ ತೊಂದರೆಯಾಗುವ ಸಾಧ್ಯತೆ ಇದೆ.
ಕಾರ್ಯಕ್ರಮ ಆಯೋಜನೆ ದಿನ ವಿಧಾನಸೌಧದ ಪ್ರವೇಶಕ್ಕೆ ಸಾರ್ವಜನಿಕರಿಗೆ ನೀಡುವ ಪಾಸ್ ನಿರ್ಬಂಧಿಸಬೇಕು. ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿ ಕುಟುಂಬಸ್ಥರನ್ನು ಕರೆತರುವ ಸಾಧ್ಯತೆಯಿದ್ದು, ಕುಟುಂಬ ವರ್ಗದವರನ್ನು ಕರೆತರದಂತೆ ಮಧ್ಯಾಹ್ನದ ನಂತರ ಸಿಬ್ಬಂದಿಗೆ ರಜೆ ನೀಡಬೇಕು. ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ರಮದ ಸ್ಥಳಕ್ಕೆ ಬರದಂತೆ ಸೂಚನೆ ನೀಡಬೇಕು. ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸುವ ಅವಶ್ಯಕತೆ ಇದೆ. ವೇದಿಕೆ ಮೇಲೆ ಆಟಗಾರರು ಮತ್ತು ಮುಖ್ಯಮಂತ್ರಿ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಲೋಕೋಪಯೋಗಿ ಇಲಾಖೆಯಿಂದ ಮುಂಚಿತವಾಗಿಯೇ ವೇದಿಕೆ ಪರೀಕ್ಷಿಸಬೇಕು. ಕನಿಷ್ಠ 2 ಗಂಟೆ ಮೊದಲೇ ವೇದಿಕೆ ಪರಿವೀಕ್ಷಣೆಗೆ ಬಿಟ್ಟುಕೊಡುವಂತೆ ಆಯೋಜಕರಿಗೆ ತಿಳಿಸಬೇಕು. ವಿದ್ಯುತ್ ಉಪಕರಣಗಳನ್ನು ಉಪಯೋಗಿಸುತ್ತಿದ್ದು, ವಿದ್ಯುತ್ ವಿಭಾಗದ ಅಭಿಯಂತರರಿಂದ ಫಿಟ್ನೆಸ್ ಸರ್ಟಿಫಿಕೆಟ್ ಪಡೆದುಕೊಳ್ಳಬೇಕು. ಆಯೋಜನೆ ಮಾಡುತ್ತಿರುವ ಸಂಸ್ಥೆಯವರು ಕಾರ್ಯಕ್ರಮ ಜರುಗುವ 2 ಗಂಟೆ ಮೊದಲು ವೇದಿಕೆಯನ್ನು ಆ್ಯಂಟಿ ಸಬೊಟೇಜ್ ಚೆಕ್ ಸಂಬಂಧ ಬಿಟ್ಟುಕೊಡುವಂತೆ ಆಯೋಜಕರಿಗೆ ಸೂಚಿಸಬೇಕು. ಬಂದೋಬಸ್ತ್ಗೆ ಅಧಿಕಾರಿಗಳು, ಸಿಬ್ಬಂದಿ ತೆಗೆದುಕೊಳ್ಳಬೇಕು. ಇದಕ್ಕೆ ಸಮಯಾವಕಾಶದ ಅವಶ್ಯಕತೆ ಇದೆ ಎಂದು ಡಿಸಿಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಈ ರೀತಿಯ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳು ಮತ್ತು ಸಂಚಾರ ಅಧಿಕಾರಿಗಳ ಜೊತೆ ಸಮನ್ವಯತೆ ಅವಶ್ಯಕತೆಯಿದ್ದು, ಸಮಯಾವಕಾಶದ ಕೊರತೆಯಿದೆ ಎನಿಸುತ್ತಿದೆ. ಹೊರಗಿನಿಂದ ಡ್ರೋನ್ ಬಳಸುವ ಸಾಧ್ಯತೆ ಇರುವ ಕಾರಣ ಆ್ಯಂಟಿ ಡ್ರೋನ್ ಸಿಸ್ಟಂ ಅಳವಡಿಸುವ ಅವಶ್ಯಕತೆಯಿದೆ. ವಿಧಾನಸೌಧ ಕಟ್ಟಡವು ಪಾರಂಪರಿಕ ಕಟ್ಟಡ ಆಗಿರುವುದರಿಂದ ಭದ್ರತೆಗೆ ಧಕ್ಕೆಯಾಗದಂತೆ ಕಾರ್ಯಕ್ರಮ ನಡೆಸಲು ಸಮಯದ ಅವಶ್ಯಕತೆ ಇರುತ್ತದೆ. ಅದಾಗ್ಯೂ ಸರ್ಕಾರ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳಲಾಗುವುದು ಎಂದು ಪತ್ರದಲ್ಲಿ ಪೊಲೀಸ್ ಇಲಾಖೆ ಉಲ್ಲೇಖಿಸಿದೆ.
ಕೆಎಸ್‌ಸಿಎ ಬರೆದಿದ್ದ ಪತ್ರದಲ್ಲಿ ಏನಿತ್ತು?
ಆರ್‌ಸಿಬಿ ತಂಡ ಗೆಲುವು ಸಾಧಿಸುವ ಮುನ್ನವೇ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆ ಕೆಎಸ್‌ಸಿಎ ಪತ್ರ ಬರೆದಿತ್ತು ಎಂದು ವರದಿಯಾಗಿದೆ. ಜೂನ್ 3ರಂದು ಪತ್ರ ರವಾನಿಸಿದ್ದ ಕೆಎಸ್‌ಸಿಎ ಕಾರ್ಯನಿರ್ವಾಹಕ ಅಧಿಕಾರಿ ಶುಭೇಂದು ಘೋಷ್, ಆರ್‌ಸಿಬಿ ತಂಡ ಗೆದ್ದರೆ ಆಟಗಾರರಿಗೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು.
ಡಿಎನ್‌ಎ ಎಂಟರ್ಟೈನ್ಮೆಂಟ್ ನೆಟ್‌ವಕ್ ಪ್ರೈ.ಲಿ ಹೊಂದಿದೆ. ಆರ್‌ಸಿಬಿ ಆಟಗಾರರನ್ನು ಸಿಎಂ, ಡಿಸಿಎಂ ಸತ್ಕರಿಸಲಿದ್ದಾರೆ. ಕಾರ್ಯಕ್ರಮ ಆಯೋಜಿಸಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲು ಡಿಎನ್‌ಎ ಸಂಸ್ಥೆಗೆ ಅನುಮತಿ ನೀಡಬೇಕೆಂದು ಕೆಎಸ್‌ಸಿಎ ಪತ್ರದಲ್ಲಿ ಮನವಿ ಮಾಡಿತ್ತು.