ನ್ಯೂಸ್

ಸ್ಥಳ ಮಹಜರು ನಡೆಸಿದ ಪೊಲೀಸರು : ಅವಹೇಳನಕಾರಿ ಪೋಸ್ಟರ್ ಅಂಟಿಸಿದ ಪ್ರಕರಣ

ಬೆಂಗಳೂರು: ಜೆಡಿಎಸ್ ಕಚೇರಿಯ ತಡೆಗೋಡೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುರಿತು ಅವಹೇಳನಕಾರಿ ಪೋಸ್ಟ್ ಅಂಟಿಸಿದ ಪ್ರಕರಣ ಸಂಬಂಧ ಗುರುವಾರ ಶ್ರೀರಾಮಪುರ ಠಾಣೆ ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ.
ಶೇಷಾದ್ರಿಪುರದ ಜೆ.ಪಿ.ಭವನಕ್ಕೆ ಭೇಟಿ ನೀಡಿದ್ದ ಪೊಲೀಸರು, ಘಟನಾ ಸ್ಥಳ ಪರಿಶೀಲಿಸಿದರು. ಅಂದು ರಾತ್ರಿ ಪಾಳಿ ಕರ್ತವ್ಯದಲ್ಲಿ ಭದ್ರತಾ ಸಿಬ್ಬಂದಿ ಮಹಾದೇವ ರುವಾನಿ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದರು. ಹಲ್ಲೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಆತನಿಂದ ಹಲ್ಲೆ ಬಗ್ಗೆಯೂ ಹೇಳಿಕೆ ದಾಖಲಿಸಿದ್ದಾರೆ.
ಈ ಅವಹೇಳನಕಾರಿ ಪೋಸ್ಟ್ ಅಂಟಿಸಿರುವುದು ಹಾಗೂ ಜೆ.ಪಿ.ಭವನದ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ರಮೇಶ್‌ಗೌಡ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಸ್ಥಳ ಮಹಜರು ನಡೆಸಿದ್ದಾರೆ.
ಹಲ್ಲೆ ನಡೆಸಿದ್ದ ಕಿಡಿಗೇಡಿಗಳು:
ನ.೧೪ರ ರಾತ್ರಿ ೧೦ ಗಂಟೆ ಸುಮಾರಿಗೆ ನಾಲ್ವರು ಅಪರಿಚಿತರು ಶೇಷಾದ್ರಿಪುರದ ಜೆ.ಪಿ.ಭವನದ ಬಳಿ ಬಂದು ಕರೆಂಟ್ ಕಳ್ಳ ಕುಮಾರಸ್ವಾಮಿ ಇತ್ಯಾದಿ ಅವಹೇಳನಕಾರಿ ಪೋಸ್ಟರ್‌ಗಳನ್ನು ತಡೆಗೋಡೆಗೆ ಅಂಟಿಸಿದ್ದಾರೆ. ಅಂತೆಯೆ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಮಹಾದೇವ ರುವಾನಿಗೆ ಕೀ ಬಂಚ್‌ನಿಂದ ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದಾರೆ. ಈ ಕೃತ್ಯದ ಹಿಂದೆ ಬಿಂದು ಮತ್ತು ನವೀನ್‌ಗೌಡ ಎಂಬುವವರ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.