ಶಿವಮೊಗ್ಗ: ಪೊಲೀಸರು ಎಂದರೆ ಮೊದಲಿನಿಂದಲೂ ಸಮಾಜದಲ್ಲಿ ಒಂದು ರೀತಿಯ ಭಯ ಮತ್ತು ಅಸಡ್ಡೆ ಇದೆಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.
ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಗುರುವಾರ ಕರ್ನಾಟಕ ರಾಜ್ಯ ಪೊಲೀಸ್, ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮನೆ-ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರು ಜನರ ಮೇಲೆ ನಿಯಂತ್ರಣ ಸಾಧಿಸಲು ಅನುಸರಿಸುತ್ತಿದ್ದ ಕ್ರಮ ಅದಕ್ಕೆ ಕಾರಣ. ಈ ಬ್ರಿಟಿಷ್ ಲೆಗೆಸಿ ಭಯ ಈಗಲೂ ಇದೆ. ಇದನ್ನು ಹೋಗಲಾಡಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ ಎಂದರು.
ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಒಡನಾಟ ಇರುವವರಲ್ಲಿ ಈ ವ್ಯವಸ್ಥೆ ಬಗ್ಗೆ ಶೇ.90ರಷ್ಟು ಉತ್ತಮ ಪ್ರತಿಕ್ರಿಯೆ ಇದೆ. ಅದೇ ಈ ರೀತಿ ಸಿನೆಮಾ ಮತ್ತು ಸೀರಿಯಲ್‌ನಲ್ಲಿನ ಪೊಲೀಸ್ ವ್ಯವಸ್ಥೆ ನೋಡಿದವರಲ್ಲಿ ಇಲಾಖೆ ಬಗ್ಗೆ ಕೆಟ್ಟ ಅಭಿಪ್ರಾಯವೂ ಸಾಕಷ್ಟಿದೆ ಎಂದರು.
ಜನರು ಮತ್ತು ಪೊಲೀಸರು ಸ್ಥಳೀಯವಾಗಿ ನಡೆಯುವ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಅರಿವು ಮೂಡುತ್ತದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷತಾ ಭಾವ ಸೃಷ್ಟಿಯಾಗುತ್ತದೆ. ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ ವೇಳೆ ಏನೇ ಸಮಸ್ಯೆ ಇದ್ದರೂ ಮುಕ್ತವಾಗಿ ತಿಳಿಸಬೇಕು. ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದ ಅವರು, ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಒಳ್ಳೆಯ ಸಂಬಂಧ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು.