ಶಿವಮೊಗ್ಗ: ಹೊಸ ವರ್ಷ 2025 ಅನ್ನು ಜಿಲ್ಲೆಯ ಜನರು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಮಂಗಳವಾರ ತಡರಾತ್ರಿವರೆಗೂ ಮಲೆನಾಡಿನ ಹಲವೆಡೆ ಸಂಭ್ರಮ ಮುಗಿಲು ಮುಟ್ಟಿತ್ತು. ಬಹಳಷ್ಟು ಕಡೆ ಜನರು ಸಾಮೂಹಿಕವಾಗಿ ಪಾಲ್ಗೊಂಡು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ನೂತನ ಸಂವತ್ಸರವನ್ನು ಬರಮಾಡಿಕೊಂಡರು.
ಮಂಗಳವಾರ ಸಂಜೆಯಿಂದಲೇ ಜಿಲ್ಲೆಯ ಎಲ್ಲ ಕೇಕ್ ಕಫೆ, ಬೇಕರಿಗಳ ಮುಂದೆ ಜನರು ಸಾಲುಗಟ್ಟಿ ನಿಂತು ಬಗೆ ಬಗೆಯ ಕೇಕ್‌ಗಳನ್ನು ಕೊಂಡೊಯ್ದರು. ರಾತ್ರಿ 12 ಗಂಟೆ ಆಗುತ್ತಿದ್ದಂತೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಹೋಟೆಲ್, ರೆಸ್ಟೋರೆಂಟ್, ರೇಸಾರ್ಟ್, ಕ್ಲಬ್‌ಗಳಲ್ಲಿ ತಂಡೋಪತಂಡವಾಗಿ ಕೇಕೆ ಹಾಕಿ, ಕುಣಿದು ಕುಪ್ಪಳಿಸಿದರು. ಆಕಾಶದಲ್ಲಿ ಪಟಾಕಿಗಳ ಚಿತ್ತಾರ ಕಣ್ಮನ ಸೆಳೆಯಿತು.
ಪೊಲೀಸ್ ಇಲಾಖೆ ರಾತ್ರಿ 12ರಿಂದ 1ರವರೆಗೆ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಿತ್ತು. ಬಹಳಷ್ಟು ಕಡೆಗಳಲ್ಲಿ ಬೆಳಗಿನಜಾವದವರೆಗೆ ಸಂಭ್ರಮಾಚರಣೆ ನಡೆಸಿದರು. ಗಲ್ಲಿಗಳು ಮತ್ತು ಬಡಾವಣೆಗಳ ಜನರು ಸ್ವಯಂಪ್ರೇರಿತವಾಗಿ ಒಟ್ಟಾಗಿ ಹೊಸ ವರ್ಷವನ್ನು ನಾನಾ ಮಾದರಿಯಲ್ಲಿ ಸ್ವಾಗತಿಸಿದರು. ಕ್ಲಬ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಡಿಜೆ ಹಾಡಿಗೆ ಜನರು ಹೆಜ್ಜೆ ಹಾಕಿ ಖುಷಿಪಟ್ಟರು. ವಿಶೇಷವಾಗಿ ಯುವ ಸಮೂಹ ಕುಣಿದು ಕುಪ್ಪಳಿಸಿತು.