ನ್ಯೂಸ್

ಕೆಟ್ಟವರ ಸಂಗದಿಂದಾದ ನೋವು

ಮಧ್ಯಮ ವರ್ಗದ ಕುಟುಂಬದ 25 ವರ್ಷದ ಸುಮಾಳಿಗೆ ಚಿಕ್ಕಂದಿನಿಂದಲೂ ಪೊಲೀಸ್ ಅಧಿಕಾರಿಣಿಯಾಗಬೇಕು ಎಂಬ ಬಯಕೆಯಿತ್ತು. ಜಿಲ್ಲಾ ಕೇಂದ್ರವೊಂದರ ನಿವಾಸಿಯಾಗಿದ್ದ ಆಕೆ ಪದವಿ ಪರೀಕ್ಷೆ ಕಲಿಯುತ್ತಿರುವಾಗಲೇ ಪಿಎಸ್​ಐ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸತೊಡಗಿದ್ದಳು. ಅವಳ ಮನೆಯ ಬಳಿ ರವಿ ಎನ್ನುವ ಶ್ರೀಮಂತ ಕುಟುಂಬದ ಯುವಕನಿದ್ದು ಆತನೂ ಸುಮಾಳ ಕಾಲೇಜಿನಲ್ಲಿಯೇ ಕಲಿಯುತ್ತಿದ್ದ. ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿರದ ಆತ ಮೋಜುಮಸ್ತಿಯಲ್ಲಿಯೇ ಕಾಲಕಳೆಯುತ್ತಿದ್ದ. ಸಿನಿಮಾ ಹೀರೋಗಳ ಅನುಕರಣೆ ಮಾಡುತ್ತ ಯುವತಿಯರನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದ. ಸುಮಾ ಅವನತ್ತ ಆಕರ್ಷಣೆಗೊಂಡಳು. ಕಾಲಕ್ರಮೇಣ ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತು.

ಪದವಿಯ ನಂತರ ಸುಮಾ ಪಿಎಸ್​ಐ ನೇಮಕಾತಿಯ ಅಧಿಸೂಚನೆಗಾಗಿ ಕಾಯತೊಡಗಿದಳು. ಇತ್ತ ರವಿ ಪರೀಕ್ಷೆಯಲ್ಲಿ ಫೇಲ್ ಆಗಿ ವಿದ್ಯಾಭ್ಯಾಸಕ್ಕೆ ಇತಿಶ್ರೀ ಹಾಡಿದ. ತನ್ನ ತಂದೆಯ ಕಾಂಟ್ರಾಕ್ಟ್ ಕೆಲಸದಲ್ಲಿ ಕೈಜೋಡಿಸಿದ. ಅದರ ಜತೆಜತೆಗೇ ಇತರರ ವ್ಯಾಜ್ಯಗಳನ್ನು ಪರಿಹರಿಸುವುದು, ಬಾಡಿಗೆ ಕೊಡದಿರುವವರನ್ನು ಅವರ ಮನೆಗಳಿಂದ ಖಾಲಿ ಮಾಡಿಸುವುದು, ಖಾಲಿ ಸೈಟುಗಳನ್ನು ಅಕ್ರಮವಾಗಿ ಒತ್ತುವರಿ ಮಾಡುವುದು ಮುಂತಾದ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ. ತನ್ನ ಈ ಚಟುವಟಿಕೆಗಳನ್ನು ರವಿ ಸುಮಾಳಿಂದ ಗುಟ್ಟಾಗಿಯೇ ಇಟ್ಟ.

ಆರು ತಿಂಗಳು ಕಾದರೂ ಪಿಎಸ್​ಐ ಸ್ಪರ್ಧಾತ್ಮಕ ಪರೀಕ್ಷೆಗಳ ಅಧಿಸೂಚನೆಯೇ ಬರಲಿಲ್ಲ. ಏತನ್ಮಧ್ಯೆ ಅವಳಿದ್ದ ಜಿಲ್ಲೆಯಲ್ಲಿಯೇ ಕಾನ್ಸ್​ಟೇಬಲ್​ಗಳ ನೇಮಕಾತಿಗಾಗಿ ಅರ್ಜಿಗಳನ್ನು ಕರೆದರು. ಸುಮಾ, ಆ ನೌಕರಿಗೆ ಅರ್ಜಿ ಹಾಕಿದಳು. ದೈಹಿಕ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಲಿಖಿತ ಪರೀಕ್ಷೆಯಲ್ಲಿಯೂ ಹೆಚ್ಚಿನ ಅಂಕಗಳಿಸಿದಳು. ಇದರ ಫಲವಾಗಿ ಆಕೆ ಹುದ್ದೆಗೆ ಆಯ್ಕೆಯಾದಳು. ಈ ಸಂತಸವನ್ನು ಆಕೆ ರವಿಯೊಂದಿಗೆ ಹಂಚಿಕೊಂಡಾಗ ಆತ ಆ ಬಗ್ಗೆ ಹೆಚ್ಚಿನ ಉತ್ಸಾಹ ತೋರಿಸಲಿಲ್ಲ. ಮುಂದೆ ಸುಮಾಳನ್ನು ವೃತ್ತಿ ತರಬೇತಿಗಾಗಿ ಮೈಸೂರಿನ ಮಹಿಳಾ ಕಾನ್ಸ್​ಟೇಬಲ್ ತರಬೇತಿ ಶಾಲೆಗೆ ಕಳಿಸಲಾಯಿತು. 9 ತಿಂಗಳ ತರಬೇತಿಯನ್ನು ಸುಮಾ ಯಶಸ್ವಿಯಾಗಿ ಪೂರೈಸಿ ತನ್ನ ಜಿಲ್ಲೆಗೆ ಮರಳಿದಳು. ಆನಂತರ ಅವಳನ್ನು ಮುಂದಿನ ತರಬೇತಿಗಾಗಿ ಜಿಲ್ಲೆಯ ಪೊಲೀಸ್ ಠಾಣೆಯೊಂದಕ್ಕೆ ನೇಮಿಸಲಾಯಿತು. ಅಲ್ಲಿಯೂ ಆಕೆ ಉತ್ತಮವಾಗಿ ಕಲಿತು ಎಲ್ಲರ ಮೆಚ್ಚುಗೆ ಗಳಿಸಿದಳು. ಈ ತರಬೇತಿ ಮುಗಿದ ನಂತರ ಅವಳನ್ನು ಉಪವಿಭಾಗ ಕೇಂದ್ರವೊಂದರ ಪೊಲೀಸ್ ಠಾಣೆಗೆ ನೇಮಿಸಿದರು. ಆ ಸ್ಥಳವು ಸುಮಾಳ ಮನೆಯಿಂದ ಸುಮಾರು 30 ಕಿ.ಮೀ. ದೂರದಲ್ಲಿದ್ದ ಕಾರಣ ಆಕೆ ಅದೇ ಊರಿನಲ್ಲಿಯೇ ಒಂದು ಕೋಣೆ ಹಿಡಿದು ಅಲ್ಲಿ ವಾಸಿಸತೊಡಗಿದಳು. ರಜೆ ಬಂದಾಗ ತನ್ನೂರಿಗೆ ಹೋಗಿ ತನ್ನ ತಂದೆ-ತಾಯಿ ಮತ್ತು ರವಿಯನ್ನೂ ಭೇಟಿಯಾಗಿ ಬರುತ್ತಿದ್ದಳು. ಠಾಣೆಯಲ್ಲಿ ಸುಮಾಳಿಗೆ ಕಡತಗಳನ್ನು ನಿರ್ವಹಿಸುವ ರೈಟರ್​ನ ಸಹಾಯಕಿಯಾಗಿ ನೇಮಿಸಲಾಯಿತು.

ಇಷ್ಟರಲ್ಲಿ ಒಂದು ದಿನ ಹಿರಿಯ ಅಧಿಕಾರಿಯೊಬ್ಬರು ತಾವು ಸುಮಾಳಿದ್ದ ಠಾಣೆಗೆ ತಪಾಸಣೆ ಮಾಡಲು ಬರುತ್ತಿರುವುದಾಗಿ ಸಂದೇಶ ಕಳುಹಿಸಿದರು. ಆಗ ಅವಳ ಠಾಣಾಧಿಕಾರಿ ಸುಮಾಳಿಗೆ ಠಾಣೆಯಲ್ಲಿನ ಕಡತಗಳನ್ನು ನವೀಕರಿಸಲು ಆದೇಶಿಸಿದರು. ಅದರಂತೆ ಆಕೆ ತನ್ನ ಠಾಣೆಯ ರೌಡಿ ರಿಜಿಸ್ಟರ್ ನವೀಕರಣ ಮಾಡತೊಡಗಿದಾಗ ಅದರಲ್ಲಿದ್ದ ಒಂದು ಪುಟವನ್ನು ನೋಡಿ ದಂಗುಬಡಿದಳು. ಆ ಪುಟದಲ್ಲಿ ಅವಳ ಪ್ರಿಯಕರನಾಗಿದ್ದ ರವಿಯ ಫೋಟೋಗಳನ್ನು ಮೂರು ಭಂಗಿಗಳಲ್ಲಿ ತೆಗೆದು ಅಂಟಿಸಲಾಗಿತ್ತು. ಕಡತದಲ್ಲಿ ಏನು ಬರೆದಿದೆ ಎಂದು ಸುಮಾ ಓದತೊಡಗಿದಳು. ಅದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳಲ್ಲಿ ರವಿಯ ವಿರುದ್ಧ ದೂರುಗಳು ದಾಖಲಾಗಿದ್ದವು. ಅಮಾಯಕರಿಗೆ ಹೊಡೆಯುವುದು, ಹೆದರಿಸುವುದು ಮತ್ತು ಸುಲಿಗೆ ಮಾಡುವುದು ಮುಂತಾದ ಆರೋಪವನ್ನು ಆತ ಹೊತ್ತಿದ್ದ. ಆತನಿಗೆ ಪೊಲೀಸರು ಠಾಣೆಗೆ ಕರೆಸಿ ಎಚ್ಚರಿಕೆ ಕೊಟ್ಟಿದ್ದರು. ಆತನ ಮೇಲೆ ಎರಡು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು ಅವು ನ್ಯಾಯಾಲಯದಲ್ಲಿ ಖುಲಾಸೆಯಾಗಿದ್ದವು.

ಆಕೆ ತನ್ನ ಠಾಣೆಯ ಸಹೋದ್ಯೋಗಿಗಳನ್ನು ರವಿಯ ಬಗ್ಗೆ ವಿಚಾರಿಸಿದಾಗ ಎಲ್ಲರೂ ಅವನ ವಿರುದ್ಧವೇ ಮಾತನಾಡಿದರು. ಹಿರಿಯ ಅಧಿಕಾರಿಯ ತಪಾಸಣೆಯಾದ ಮಾರನೆಯ ದಿನವೇ ಸುಮಾ ತನ್ನ ಊರಿಗೆ ಹೋಗಿ ರವಿಯನ್ನು ಭೇಟಿಯಾಗಿ, ಅವನನ್ನು ತರಾಟೆಗೆ ತೆಗೆದುಕೊಂಡಳು. ತಾನು ರೌಡಿಯಾಗಿರುವುದು ನಿಜ ಎಂದು ಆತ ಒಪ್ಪಿಕೊಂಡ. ‘ಹಾಗಾದರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನಾನು ನಿನ್ನನ್ನು ಮದುವೆಯಾಗಲು ಸಾಧ್ಯವೇ ಇಲ್ಲ’ ಎಂದು ಖಡಾಖಂಡಿತವಾಗಿ ಅವನಿಗೆ ತಿಳಿಸಿದ ಸುಮಾ, ‘ನನ್ನ-ನಿನ್ನ ಸಂಬಂಧ ಇಂದಿನಿಂದಲೇ ಮುರಿದಿದೆ’ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದಳು. ‘ನೀನೇನಾದರೂ ಈ ಸಂಬಂಧವನ್ನು ಮುರಿದರೆ ಮುಂದೆ ನಿನಗೆ ಮದುವೆಯೇ ಆಗದಂತೆ ನೋಡಿಕೊಳ್ಳುವೆ ಹುಷಾರ್’, ಎಂದು ರವಿ ಬೆದರಿಕೆ ಹಾಕಿದ. ಸುಮಾ ಅದನ್ನು ಗಮನಕ್ಕೇ ತೆಗೆದುಕೊಳ್ಳಲಿಲ್ಲ.

ಹಲವಾರು ವರ್ಷಗಳಿಂದ ತಾನು ಪ್ರೇಮಿಸುತ್ತಿದ್ದ ಯುವತಿ ತನ್ನನ್ನು ದೂರಮಾಡಿದ್ದು ರವಿಯನ್ನು ರೊಚ್ಚಿಗೆಬ್ಬಿಸಿತ್ತು. ಆತ ಪ್ರತೀಕಾರಕ್ಕಾಗಿ ಕಾಯುತ್ತಿದ್ದ. ಕೆಲವು ತಿಂಗಳ ನಂತರ ಸುಮಾಳ ತಂದೆ-ತಾಯಿ ಅವಳ ನಿಶ್ಚಿತಾರ್ಥವನ್ನು ತಮ್ಮ ಸಂಬಂಧಿಕನೇ ಆಗಿದ್ದ ಶಶಿಧರ ಎಂಬ ಶಾಲಾಶಿಕ್ಷಕನ ಜೊತೆ ಮಾಡಿದರು. ಈ ಮಾಹಿತಿ ರವಿಗೆ ತಲುಪಿತು. ಆತ ಸುಮಾಳನ್ನು ಸಂರ್ಪಸಿ, ‘ಬೇರೊಬ್ಬನ ಜತೆ ವಿವಾಹವಾದರೆ ನಿನ್ನ ಮಾನವನ್ನು ಹರಾಜಿಗೆ ಹಾಕುವೆ’ ಎಂದು ಬೆದರಿಸಿದ. ಸುಮಾ ಈ ಬೆದರಿಕೆಗೆ ಜಗ್ಗಲಿಲ್ಲ.

ರೌಡಿ ಆಗಿದ್ದ ರವಿಗೆ ಪೊಲೀಸ್ ಇಲಾಖೆಯಲ್ಲಿ ಕೆಳಹಂತದ ಹಲವಾರು ಸಿಬ್ಬಂದಿಗಳ ಸಂಪರ್ಕವಿತ್ತು. ತನ್ನ ಈ ಸಂಪರ್ಕ ಜಾಲವನ್ನುಪಯೋಗಿಸಿದ ಆತ ಪೊಲೀಸ್ ಕಾನ್ಸ್​ಟೇಬಲ್ ಪ್ರಕಾಶ್​ನನ್ನು ಸಂರ್ಪಸಿ ಹೇಗಾದರೂ ಮಾಡಿ ಸುಮಾಳ ನಿಶ್ಚಿತಾರ್ಥ ಮುರಿಯಲು ಸಹಾಯ ಮಾಡಲು ಕೋರಿದ. ಆತ ರವಿಗೆ ಜಿಲ್ಲಾ ಕ್ರೈಮ್ ತಂಡದ್ದಲ್ಲಿದ್ದ ಕಾನ್ಸ್​ಟೇಬಲ್ ಕುಮಾರ್ ಎನ್ನುವವನನ್ನು ಪರಿಚಯಮಾಡಿಸಿದ. ಮೂರೂ ಜನರು ಬಾರೊಂದರಲ್ಲಿ ಕುಳಿತು ಸುಮಾಳ ಭಾವಿ ಗಂಡ ಅವಳಿಂದ ದೂರ ಸರಿಯಲು ಏನು ಮಾಡಬೇಕೆನ್ನುವುದನ್ನು ಪ್ಲಾನ್ ಮಾಡಿದರು.

‘ನಿನ್ನ ಮತ್ತು ಸುಮಾಳ ಖಾಸಗಿ ಕ್ಷಣಗಳ ಫೋಟೋ ಇದ್ದರೆ ಅವನ್ನು ಅವಳ ಭಾವಿ ಪತಿಗೆ ಕಳಿಸು’ ಎಂದ ಕುಮಾರ್. ‘ಇಲ್ಲ ನಾವಿಬ್ಬರೂ ಫೋಟೋ ತೆಗೆಸಿಕೊಳ್ಳಲು ಸುಮಾ ಒಪ್ಪಲೇ ಇಲ್ಲ’ ಎಂದ ರವಿ. ‘ಹಾಗಾದರೆ, ನಾನೊಂದು ಬೇರೆ ಉಪಾಯ ಮಾಡುತ್ತೇನೆ’ ಎಂದ ಕುಮಾರ್ ರವಿಯಿಂದ ಐದು ಸಾವಿರ ರೂ. ಮುಂಗಡ ಹಣವಲ್ಲದೆ ಸುಮಾಳ ಫೋನ್ ನಂಬರ್ ಪಡೆದ.

ತನ್ನ ಕ್ರೈಮ್ ತಂಡವು ತನಿಖೆ ಮಾಡುತ್ತಿದ್ದ ಪ್ರಕರಣವೊಂದರಲ್ಲಿ ಶಂಕಿತ ಆರೋಪಿಯೊಬ್ಬನ ಟೆಲಿಫೋನ್ ವಿವರಗಳನ್ನು ಪಡೆಯಲು ಸಂಬಂಧಪಟ್ಟವರಿಗೆ ಪತ್ರ ಬರೆಯಬೇಕೆಂದು ಆತನ ಮೇಲಾಧಿಕಾರಿ ಕುಮಾರ್​ಗೆ ಸೂಚಿಸಿದ್ದರು. ಆ ಅವಕಾಶವನ್ನು ಬಳಸಿದ ಕುಮಾರ್, ಸದರಿ ಪತ್ರದಲ್ಲಿ ಶಂಕಿತನ ಫೋನ್ ನಂಬರ್​ಗಳ ಜತೆಗೆ ಸುಮಾಳ ಫೋನ್ ನಂಬರ್ ಅನ್ನೂ ಸೇರಿಸಿದ. ಪತ್ರಕ್ಕೆ ಮೇಲಧಿಕಾರಿಯ ಸಹಿ ಪಡೆದು ಅದನ್ನು ಟೆಲಿಫೋನ್ ಸಂಸ್ಥೆಯ ಅಧಿಕಾರಿಗಳಿಗೆ ಕಳಿಸಿದ. ಒಂದು ವಾರದ ನಂತರ ಎಲ್ಲ ನಂಬರ್​ಗಳ ಸಿ.ಡಿ.ಅರ್ ವಿವರಗಳು ಬಂದವು. ಅದರಲ್ಲಿದ್ದ ಸುಮಾಳ ಫೋನ್ ವಿವರಗಳನ್ನು ತೆಗೆದುಕೊಂಡ ಕುಮಾರ್ ಅದನ್ನು ರವಿಗೆ ಮುಟ್ಟಿಸಿ ಮುಂದೇನು ಮಾಡುವುದೆಂದು ಹೇಳಿಕೊಟ್ಟ. ಸಿ.ಡಿ.ಆರ್. ನಲ್ಲಿ ರವಿ ಮತ್ತು ಸುಮಾ ಯಾವ ಯಾವ ದಿನಗಳಂದು ಎಷ್ಟು ನಿಮಿಷಗಳ ಕಾಲ ಫೋನ್ ಸಂಪರ್ಕದಲ್ಲಿ ಇದ್ದರೆಂಬುದು ದಾಖಲಾಗಿತ್ತು.

ಇದರ ಜೆರಾಕ್ಸ್ ಮಾಡಿಸಿದ ರವಿ ಅದನ್ನು ಶಶಿಧರನಿಗೆ ಕಳಿಸಿದ. ‘ನೀನು ಮದುವೆಯಾಗಬೇಕಿಂದಿರುವ ಸುಮಾ ಮತ್ತು ನಾನು ಆರು ವರ್ಷಗಳಿಂದ ಪ್ರೇಮಿಸುತ್ತಿದ್ದೇವೆ. ನಮ್ಮಿಬ್ಬರ ನಡುವೆ ದೈಹಿಕ ಸಂಬಂಧವೂ ಉಂಟಾಗಿದೆ. ಹೀಗಾಗಿ ನೀನು ಅವಳನ್ನು ಮರೆಯುವುದು ಒಳಿತು’ ಎಂದು ಬರೆದ. ಇದನ್ನೋದಿದ ಶಶಿಧರ ತಾನು ಸುಮಾಳನ್ನು ವಿವಾಹವಾಗುವುದಿಲ್ಲವೆಂದು ತನ್ನ ಮನೆಯಲ್ಲಿ ತಿಳಿಸಿದ. ಅವನ ತಂದೆ ಅದರಂತೆ ಸುಮಾಳ ತಂದೆಗೆ ಪತ್ರ ಬರೆದು ಸಂಬಂಧ ಮುರಿದರು. ಯಾವ ಕಾರಣಕ್ಕಾಗಿ ಮದುವೆ ಒಪ್ಪಂದವು ಮುರಿಯಿತು ಎನ್ನುವುದನ್ನು ಅರಿಯಲು ಸುಮಾ ಶಶಿಧರನ ಮನೆಗೆ ಹೋಗಿ ವಿಚಾರಿಸಿದಳು. ಆತ ತನಗೆ ಬಂದಿದ್ದ ಸಿ.ಡಿ.ಆರ್ ಪ್ರತಿ ಮತ್ತು ರವಿಯ ಪತ್ರವನ್ನು ಅವಳಿಗೆ ತೋರಿಸಿದ. ಇದನ್ನು ಕಂಡು ಸುಮಾ ಗಾಬರಿಯಾದಳು. ತನ್ನ ಫೋನಿನ ಸಿ.ಡಿ.ಆರ್ ರವಿಗೆ ಹೇಗೆ ಸಿಕ್ಕಿತು ಎಂದು ಅರಿಯಲು ಆಕೆ ಟೆಲಿಫೋನ್ ಕಂಪನಿಗೇ ಹೋದಳು. ಅಲ್ಲಿನ ಅಧಿಕಾರಿಗಳು ಅವಳಿಗೆ ಇಲಾಖೆಯಿಂದ ಬಂದಿದ್ದ ಪತ್ರವನ್ನು ತೋರಿಸಿದರು.

ಕೂಡಲೇ ಸುಮಾ ತನ್ನ ಜಿಲ್ಲೆಯ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ತನ್ನ ಫೋನನ್ನು ಶಂಕಿತ ಆರೋಪಿಯ ಫೋನ್ ಜತೆಯಲ್ಲಿ ಸೇರಿಸಿದ ಬಗ್ಗೆ ದೂರಿತ್ತಳು. ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆಗಾಗಿ ಅಧೀಕ್ಷಕರು ಆದೇಶಿಸಿದರು. ತನಿಖೆಯಲ್ಲಿ ಪಿ.ಸಿ ಕುಮಾರ್​ನ ದುಷ್ಕೃತ್ಯ ಸಾಬೀತಾಯಿತು. ಅವನ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಿ ಸುಮಾಳ ದೂರಿನ ಮೇರೆಗೆ ರವಿಯ ವಿರುದ್ಧ ದಂಡ ಸಂಹಿತೆಯ ಕಲಂ 506ರ ಅನ್ವಯ ಪ್ರಕರಣ ದಾಖಲು ಮಾಡಲಾಯಿತು. ಆ ಅಪರಾಧಕ್ಕೆ ಕುಮ್ಮಕ್ಕು ನೀಡಿದನೆಂದು ಕುಮಾರ್ ಮೇಲೆಯೂ ಆರೋಪ ಹೊರಿಸಿ ಅವನನ್ನು ಮತ್ತು ರವಿಯನ್ನು ಬಂಧಿಸಲಾಯಿತು. ಇಲಾಖಾ ವಿಚಾರಣೆಯ ನಂತರ ಕುಮಾರ್​ನನ್ನು ಸೇವೆಯಿಂದ ವಜಾ ಮಾಡಲಾಯಿತು. ಕ್ರಿಮಿನಲ್ ಪ್ರಕರಣವು ನಡೆಯುತ್ತಿದೆ. ‘ಅಟ್ಟಡವಿಯ ಮಳೆಯು ದುಷ್ಟರ ಸಂಗಾತ ಕಷ್ಟವಾದವರ ತಲೆಬೇನೆ ಇವು ಮೂರು ಕೆಟ್ಟರೆ ಲೇಸು ಸರ್ವಜ್ಞ’ ಎಂಬಂತೆ ರವಿಯಂತಹವರ ಕೆಟ್ಟವರ ಸಂಗದಿಂದ ಸುಮಾಳಿಗೆ ಕಷ್ಟ ಎದುರಾಯಿತು.

| ಲೇಖಕರು, ನಿವೃತ್ತ ಪೊಲೀಸ್ ಅಧಿಕಾರಿ