ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಬಳಿ ಚೀನಾ ಸೈನಿಕರ ಜೊತೆಗಿನ ಘರ್ಷಣೆ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳು ಪಟ್ಟುಹಿಡಿದಿರುವುದರಿಂದ ಗುರುವಾರ ಸಂಸತ್ ಕಲಾಪದ ಬಹುಪಾಲು ಸಮಯ ವ್ಯರ್ಥವಾಯಿತು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸಭಾತ್ಯಾಗ ಮುಂದುವರಿದರೆ, ಲೋಕಸಭೆಯಲ್ಲಿ ಗದ್ದಲದ ಕಾರಣ ಕಲಾಪವನ್ನು ಐದು ಬಾರಿ ಮುಂದೂಡಬೇಕಾಯಿತು.
ರಾಜ್ಯಸಭೆ ಸಮಾವೇಶ ಗೊಳ್ಳುತ್ತಿದಂತೆ ಗಡಿ ಘರ್ಷಣೆ ಕುರಿತ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಒಕ್ಕೊರಲಿಂದ ಒತ್ತಾಯಿಸಿದವು. ಈ ಹಂತದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ವಾಕ್ಸಮರ ನಡೆಯಿತು. ಆಗ ಸಭಾಧ್ಯಕ್ಷ ಉಪರಾಷ್ಟ್ರಪತಿ ಜಗದೀಪ್ ಧನಕರ್, ಸಮಾಧಾನ ಪಡಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ನಿಯಮ 267ರ ಅಡಿಯಲ್ಲಿ ಚರ್ಚೆ ನಡೆಸುವಂತೆ ಸಲ್ಲಿಕೆಯಾದ 12 ಮನವಿಯನ್ನು ಸಭಾಧ್ಯಕ್ಷರು ತಿರಸ್ಕರಿಸಿದ್ದಾರೆಂದು ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗುತ್ತ ಸದನದಿಂದ ಹೊರನಡೆದರು. ನಂತರ ಪ್ರಶ್ನೋತ್ತರ ಅವಧಿಯ ವೇಳೆಗೆ ಆಪ್, ಟಿಎಂಸಿ ಮತ್ತು ಎಡಪಕ್ಷಗಳ ಸದಸ್ಯರು ಮಾತ್ರ ಹಾಜರಾದರು.
ಸಂಸತ್ಗೆ ಸರ್ಕಾರದ ಉತ್ತರ
ಜನ ವಿಶ್ವಾಸ ತಿದ್ದುಪಡಿ ಮಂಡನೆ
ಸಣ್ಣಪುಟ್ಟ ಉಲ್ಲಂಘನೆಯನ್ನು ಕ್ರಿಮಿನಲ್ ಸ್ವರೂಪದ ಪ್ರಕರಣದಿಂದ ಕೈಬಿಡುವ ಪ್ರಸ್ತಾವನೆ ಒಳಗೊಂಡ ಜನ ವಿಶ್ವಾಸ ತಿದ್ದುಪಡಿ ಮಸೂದೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಲೋಕಸಭೆಯಲ್ಲಿ ಮಂಡಿಸಿದರು. ಇದರಿಂದ ವ್ಯಾಪಾರ-ವಹಿವಾಟು ಸುಗಮಗೊಳ್ಳಲಿದೆ ಜತೆಗೆ ಅಪರಾಧಕ್ಕೆ ವಿಧಿಸುವ ದಂಡವನ್ನು ತರ್ಕಬದ್ಧಗೊಳಿಸುವಿಕೆ ಅಂಶವನ್ನು ಈ ಮಸೂದೆ ಒಳಗೊಂಡಿದೆ ಎಂದರು. ಈ ಮಸೂದೆಗೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಅದನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಯಿತು.
ವಿರೋಧ ಪಕ್ಷಗಳ ವಿರುದ್ಧ ಜೋಶಿ ಕಿಡಿ
ಗಡಿ ಘರ್ಷಣೆ ಕುರಿತಂತೆ ಚರ್ಚೆಗೆ ಆಗ್ರಹಿಸಿ ಚಳಿಗಾಲದ ಅಧಿವೇಶನವನ್ನು ವಿರೋಧ ಪಕ್ಷಗಳು ಹಾಳು ಮಾಡುತ್ತಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು. ಸಂಸತ್ ಹೊರಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಚೀನಾಕ್ಕೆ ದೇಶದ ಭೂಮಿಯನ್ನು ಬಳುವಳಿಯಾಗಿ ನೀಡಿದ ಪಕ್ಷದವರು ಈಗ ರಾಜ್ಯಸಭಾ ಅಧ್ಯಕ್ಷರಿಗೆ ಅಸಹಕಾರ ತೋರುತ್ತಿದ್ದಾರೆ. ಬಿಕ್ಕಟ್ಟನ್ನು ಪರಿಹರಿಸಲು ಉಪರಾಷ್ಟ್ರಪತಿ ಧನಕರ್ ಅವರು ತಮ್ಮ ಕಚೇರಿಗೆ ಬರುವಂತೆ ಕೈಮುಗಿದು ಕರೆದರೂ ವಿರೋಧ ಪಕ್ಷಗಳ ನಾಯಕರು ಬರುವುದಿಲ್ಲೆಂದು ಮೊಂಡು ಹಟ ಹಿಡಿದಿದ್ದಾರೆ. ಇದು ವಿರೋಧ ಪಕ್ಷಗಳ ಧೋರಣೆ ಎಂದು ಟೀಕಿಸಿದರು.