Kamal Haasan: ಸರ್ವಾಧಿಕಾರ ಮತ್ತು ಸನಾತನ ಸರಪಳಿಯನ್ನು ಮುರಿಯುವ ಏಕೈಕ ಅಸ್ತ್ರ ಎಂದರೆ ಅದು ಶಿಕ್ಷಣ ಮಾತ್ರ ಎಂದು ನಟ ಮತ್ತು ರಾಜ್ಯಸಭಾ ಸದಸ್ಯ ಕಮಲ್ ಹಾಸನ್ ಹೇಳಿದ್ದಾರೆ.
ಚೆನ್ನೈನಲ್ಲಿ ಅಗರಂ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕಮಲ್, ಬೇರೆ ಯಾವುದನ್ನೂ ನಿಮ್ಮ ಕೈಯಲ್ಲಿ ತೆಗೆದುಕೊಳ್ಳಬೇಡಿ, ಕೇವಲ ಶಿಕ್ಷಣವನ್ನು ಮಾತ್ರ ತಗೆದುಕೊಳ್ಳಿ, ಶಿಕ್ಷಣ ಇಲ್ಲದೆ ನಾವು ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ಬಹುಸಂಖ್ಯಾತ ಜನರು ನಿಮ್ಮನ್ನು ಸೋಲಿಸಲು ಕಾಯುತ್ತಾರೆ. ಬಹಳಷ್ಟು ಮೂರ್ಖರು ನಿಮ್ಮ ಸೋಲನ್ನು ಬಯಸುತ್ತಾರೆ. ಅದಕ್ಕಾಗಿಯೇ ನಾವು ಶಿಕ್ಷಣವನ್ನು ದೃಢವಾಗಿ ಹಿಡಿದಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಅಲ್ಲದೆ, 2017ರಲ್ಲಿ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಜಾರಿಗೆ ತಂದ ನೀಟ್ ಪರೀಕ್ಷೆಯು ಹಲವಾರು ವಿದ್ಯಾರ್ಥಿಗಳ ಅವಕಾಶಗಳನ್ನು ಕಡಿಮೆ ಮಾಡಿದೆ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.
ಅಗರಂ ಪ್ರತಿಷ್ಠಾನದ ಕೆಲಸದ ಕುರಿತು ಮಾತನಾಡಿದ ಕಮಲ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರೊಂದಿಗಿನ ಇತ್ತೀಚಿನ ಸಂವಾದವನ್ನು ನೆನಪಿಸಿದ್ದು, ಎನ್‌ಜಿಒಗಳು ಹಣವನ್ನು ಕೇಳುತ್ತಿಲ್ಲ ಬದಲಿಗೆ ಕೆಲಸ ಮಾಡಲು ಅನುಮತಿ ಕೇಳುತ್ತಿದ್ದಾರೆ ಎಂದು ನಾನು ಮುಖ್ಯಮಂತ್ರಿಗಳಿಗೆ ಹೇಳಿದೆ. ಆ ದಿಕ್ಕಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ನನಗೆ ಭರವಸೆ ನೀಡಿದರು. ಈ ಉದ್ದೇಶದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಹೆಮ್ಮೆ ಇದೆ" ಎಂದು ಹೇಳಿದರು.
ಕಳೆದ ಜುಲೈ 25 ರಂದು, ಕಮಲ್ ಹಾಸನ್ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಮಲ್ ಹಸನ್ ಅವರ ಹೆಸರನ್ನು ಆಡಳಿತಾರೂಢ ಡಿಎಂಕೆ ಮೈತ್ರಿಕೂಟ ಬೆಂಬಲಿಸಿತು. ಅಲ್ಲದೆ, 2024ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಎಂಎನ್ಎಂ ಬೆಂಬಲಕ್ಕೆ ಪ್ರತಿಯಾಗಿ ಮೇಲ್ಮನೆಯಲ್ಲಿ ಸ್ಥಾನ ನೀಡುವುದಾಗಿ ಡಿಎಂಕೆ ಭರವಸೆ ನೀಡಿತ್ತು.(ಏಜೆನ್ಸೀಸ್)