ನ್ಯೂಸ್

ವ್ಯಕ್ತಿತ್ವದಲ್ಲಿ ಪಕ್ವತೆ ಮೂಡಿಸುವ ಏಕೈಕ ಗ್ರಂಥ

ಕುಮಟಾ: ಬದುಕಿನ ಉದ್ದೇಶ, ಸತ್ಯಗಳನ್ನು ತಿಳಿಸಿ ವ್ಯಕ್ತಿತ್ವದಲ್ಲಿ ಪಕ್ವತೆ ಮೂಡಿಸುವ ಏಕೈಕ ಗ್ರಂಥ ಭಗವದ್ಗೀತೆ. ಭಗವದ್ಗೀತೆಯು ಲೌಕಿಕ ಜೀವನ ವಿಧಾನವೂ ಸೇರಿ ತತ್ವಶಾಸ್ತ್ರ, ಮನಃಶಾಸ್ತ್ರ, ಜೀವನಶಾಸ್ತ್ರ, ಆಧ್ಯಾತ್ಮ ತತ್ವಗಳನ್ನು ಒಳಗೊಂಡ ಗ್ರಂಥವಾಗಿದೆ. ಜನರ ದಿನನಿತ್ಯದ ಸಮಸ್ಯೆಗಳಿಗೆ ಚಿಕಿತ್ಸಾಕಾರಿಯಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ಶಂಕರ ಭಟ್ಟ ಹೇಳಿದರು.

ತಾಲೂಕು ಭಗವದ್ಗೀತಾ ಅಭಿಯಾನದ ವತಿಯಿಂದ ಪಟ್ಟಣದ ಮಹಾಸತಿ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಗೀತಾಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ಮಾಡಿದರು. ಇಂದಿನ ನಮ್ಮ ಎಲ್ಲ ಸಮಸ್ಯೆಗಳಿಗೆ ಭಾರತೀಯ ಸಂಸ್ಕೃತಿ, ಪರಂಪರೆಯ ಕುರಿತು ಅಸಡ್ಡೆ, ತಾತ್ಸಾರವೆ ಕಾರಣ. ಭಗವದ್ಗೀತೆಗೆ ಭಾರತವನ್ನು ಜಗದ್ಗುರುವನ್ನಾಗಿಸುವ ಶಕ್ತಿಯಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭಗವದ್ಗೀತಾ ಅಭಿಯಾನದ ಅಧ್ಯಕ್ಷ ಮುರಳೀಧರ ಪ್ರಭು ಮಾತನಾಡಿ, ಭಗವದ್ಗೀತಾ ಅಭಿಯಾನದಿಂದ ಸಮಾಜವು ಸದ್ಭಾವದತ್ತ, ಸದ್ಗುಣದತ್ತ ಒಂದು ಹೆಜ್ಜೆಯನ್ನಿಟ್ಟರೂ, ಸಮಾಜದ ಒಬ್ಬ ವ್ಯಕ್ತಿ ಒಳ್ಳೆಯ ಮಾರ್ಗದತ್ತ ಸಾಗಿದರೂ ಈ ಅಭಿಯಾನ ಸಾರ್ಥಕ. ಸ್ವರ್ಣವಲ್ಲಿ ಸಂಸ್ಥಾನದವರು ಆರಂಭಿಸಿದ ಈ ಭಗವದ್ಗೀತಾ ಅಭಿಯಾನದಿಂದ ಈ ಸಮಾಜದಲ್ಲಿ ಅಂತಹ ಬದಲಾಣೆಗಳು ಆಗುತ್ತಿವೆ ಎಂದರು.

ಕುಮಟಾ ತಾಲೂಕು ಭಗವದ್ಗೀತಾ ಅಭಿಯಾನದ ಉಪಾಧ್ಯಕ್ಷೆ ಸುಧಾ ಶಾನಭಾಗ ಇದ್ದರು. ತಾಲೂಕು ಮಟ್ಟದ ವಿವಿಧ ಭಗವದ್ಗೀತಾ ಸ್ವರ್ಧರ್ೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕು ಭಗವದ್ಗೀತಾ ಅಭಿಯಾನದ ಅಧ್ಯಕ್ಷ ಎಂ.ಆರ್. ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೀತಾ ವಾಚಕರು ಭಗವದ್ಗೀತೆಯ 18 ಅಧ್ಯಾಯಗಳನ್ನು ಪಠಿಸಿದರು. ಶಿಕ್ಷಕಿ ಜಯಾ ಶಾನಭಾಗ ಹಾಗೂ ಉಪನ್ಯಾಸಕ ಗಣೇಶ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.