ಗುಂಡ್ಲುಪೇಟೆ ತಾಲೂಕಿನ ವೀರನಪುರ ಗ್ರಾಮದಲ್ಲಿ ಸಣ್ಣಈರುಳ್ಳಿಯನ್ನು ಮಹಿಳಾ ಕಾರ್ಮಿಕರು ಬಿಡಿಸುತ್ತಿದ್ದಾರೆ.  
ನ್ಯೂಸ್

ಕಣ್ಣೀರು ತರಿಸುತ್ತಿದೆ ಸಣ್ಣಈರುಳ್ಳಿ

ಗುಂಡ್ಲುಪೇಟೆ : ಕಳೆದ ಕೆಲ ದಿನಗಳಿಂದ ಮೋಡ ಮುಸುಕಿದ ವಾತಾವರಣ ಹಾಗೂ ಇದ್ದಕ್ಕಿದ್ದಂತೆ ಬೀಳುತ್ತಿರುವ ಮಳೆ ಸಣ್ಣ ಈರುಳ್ಳಿಯ ಬೆಲೆ ಕುಸಿತಕ್ಕೆ ಕಾರಣವಾಗುತ್ತಿದ್ದು, ಬೆಳೆಗಾರರು ನಷ್ಟ ಅನುಭವಿಸುವಂತೆ ಮಾಡಿದೆ.

ತಾಲೂಕಿನ ಬಹುತೇಕ ರೈತರು 60 ದಿನಗಳ ಅಲ್ಪಾವಧಿ ಬೆಳೆಯಾದ ಸಣ್ಣ ಈರುಳ್ಳಿ ಬೆಳೆಯುತ್ತಾ ಬಂದಿದ್ದಾರೆ. ಒಮ್ಮೊಮ್ಮೆ ಉತ್ತಮ ಬೆಲೆ ಸಿಕ್ಕಿ ಲಾಭ ಪಡೆದರೆ, ಹಲವಾರು ಬಾರಿ ಬೆಲೆ ಕುಸಿತದಿಂದ ಕೈ ಸುಟ್ಟುಕೊಳ್ಳುತ್ತಿದ್ದರೂ ಈ ಬಾರಿ ತಾಲೂಕಿನ ಬಹುತೇಕ ರೈತರು ತಮ್ಮ ಜಮೀನುಗಳಲ್ಲಿ ಅರಿಶಿಣ ಬೆಳೆಯ ಜತೆಗೆ ಸಣ್ಣ ಈರುಳ್ಳಿಯನ್ನೂ ಮಿಶ್ರಬೆಳೆಯಾಗಿ ಬಿತ್ತನೆ ಮಾಡಿದ್ದಾರೆ.

ಏಪ್ರಿಲ್- ಮೇ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದ ಸಣ್ಣ ಈರುಳ್ಳಿ ಕಟಾವಿಗೆ ಬಂದಿದ್ದು, ಈ ಸಮಯದಲ್ಲಿ ಭಾರಿ ಬೇಡಿಕೆ ಹೊಂದಿದೆ. ನಿನ್ನೆವರೆಗೂ ಕ್ವಿಂಟಾಲಿಗೆ 2.5ರಿಂದ 4.6 ಸಾವಿರದವರೆಗೆ ಖರೀದಿಸಲಾಗುತ್ತಿತ್ತು. ಆದರೀಗ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ 1.5 ದಿಂದ 2.5 ಸಾವಿರ ರೂ.ಗೆ ಇಳಿಯುವ ಮೂಲಕ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.

ಆದರೆ ಮೋಡ ಕವಿದ ವಾತಾವರಣ ಹಾಗೂ ಇದ್ದಕ್ಕಿದ್ದಂತೆ ಬೀಳುವ ಮಳೆ ಈರುಳ್ಳಿ ಬೆಲೆ ಕುಸಿತಕ್ಕೆ ಕಾರಣವಾಗುತ್ತಿದೆ. ಕಟಾವು ಸಂದರ್ಭದಲ್ಲಿ ಮಳೆ ಬೀಳುವುದರಿಂದ ನೀರಿನಾಂಶ ಸೇರಿ ಈರುಳ್ಳಿ ತನ್ನ ಹೊಳಪು ಕಳೆದುಕೊಳ್ಳುತ್ತಿದೆ. ಇದರಿಂದ ಇದನ್ನು ಹೆಚ್ಚುದಿನಗಳ ಕಾಲ ಇಟ್ಟುಕೊಳ್ಳಲು ಸಾಧ್ಯವಾಗದಂತಾಗಿದೆ. ರಫ್ತು ಗುಣಮಟ್ಟ ಕಳೆದುಕೊಳ್ಳುತ್ತಿರುವ ಸಣ್ಣಈರುಳ್ಳಿ ಖರೀದಿಗೆ ಖರೀದಿದಾರರು ಹಿಂಜರಿಯುತ್ತಿದ್ದಾರೆ.

ಕಾರ್ಮಿಕರಿಗೆ ಬೇಡಿಕೆ: ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತದೆ ಎಂಬ ಆಸೆಗೊಳಗಾದ ರೈತರು ಕಟಾವು ಆರಂಭಿಸಿದ್ದಾರೆ. ಎಲ್ಲ ರೈತರೂ ಈರುಳ್ಳಿ ಕೀಳಿಸಲು ಮುಂದಾಗಿದ್ದರಿಂದ ಕಾರ್ಮಿಕರಿಗೆ ತುಂಬ ಬೇಡಿಕೆ ಉಂಟಾಗಿದೆ. ತಮ್ಮ ಊರುಗಳಲ್ಲಿ ಕಾರ್ಮಿಕರ ಕೊರತೆ ಆಗಿದ್ದರಿಂದ ಬೇರೆ ಊರುಗಳಿಂದ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಗ್ರಾಮಗಳಿಂದಲೂ ಕಾರ್ಮಿಕರನ್ನು ಜಮೀನುಗಳಿಗೆ ಕರೆದೊಯ್ಯಲು ಹಾಗೂ ದೂರದೂರಿನಿಂದ ಕರೆತರಲು ಆಟೋಗಳಿಗೆ ಕನಿಷ್ಠ 500 ರೂ. ಬಾಡಿಗೆ ನೀಡಬೇಕಾಗಿದೆ. ಆಟೋಗಳ ಬಾಡಿಗೆ ಜತೆಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ಎರಡು ಹೊತ್ತು ಕಾಫಿ-ಟೀ ಸರಬರಾಜು ಮಾಡದಿದ್ದರೆ ಮರುದಿನ ಕಾರ್ಮಿಕರು ಕೆಲಸಕ್ಕೆ ಬರುವುದಿಲ್ಲ ಎಂಬಂತಾಗಿದೆ.

ದಿನೇದಿನೆ ಹೆಚ್ಚುತ್ತಿರುವ ವೆಚ್ಚ: ಬಿತ್ತನೆ ಈರುಳ್ಳಿಗೆ ಪ್ರತಿ ಎಕರೆಗೆ 2.5 ಕ್ವಿಂಟಾಲ್‌ನಂತೆ 15 ಸಾವಿರ ರೂ., ನಾಟಿ ಮಾಡಲು 5 ಸಾವಿರ ರೂ., ಮೇಲುಗೊಬ್ಬರ 15 ಸಾವಿರ ರೂ., ಎರಡು ಬಾರಿ ಕಳೆ ಕೀಳಿಸಲು 15 ಸಾವಿರ ರೂ., ಎರಡು ಮೂರು ಬಾರಿ ಕ್ರಿಮಿನಾಶಕ ಸಿಂಪಡಿಸಲು 7-8 ಸಾವಿರ, ಕಟಾವು ಮಾಡಲು ಕಾರ್ಮಿಕರಿಗೆ 10 ಸಾವಿರ ರೂ., ಕಿತ್ತ ಈರುಳ್ಳಿಯನ್ನು ಪ್ರತ್ಯೇಕಿಸಲು ಮಹಿಳಾ ಕಾರ್ಮಿಕರಿಗೆ ಪ್ರತಿ ಕೆಜಿಗೆ 4 ರಿಂದ 5 ರೂ., ಕಾರ್ಮಿಕರನ್ನು ಜಮೀನುಗಳಿಗೆ ಕರೆತರುವ ಆಟೋಗಳಿಗೆ ಪ್ರತಿ ದಿನ 500 ರಿಂದ 600 ರೂ. ನೀಡಬೇಕಾಗಿದ್ದು, ಒಂದು ಲಕ್ಷ ರೂ. ದಾಟುತ್ತಿದೆ. ಪ್ರತಿ ಎಕರೆಗೆ 24 ಕ್ವಿಂಟಾಲ್‌ವರೆಗೆ ಇಳುವರಿ ಬರುತ್ತಿದೆ. ಪ್ರತಿ ಕ್ವಿಂಟಾಲಿಗೆ 3 ಸಾವಿರ ರೂ. ಬೆಲೆ ದೊರಕಿದರೂ 75 ಸಾವಿರ ರೂ. ಮಾತ್ರ ಸಿಗುತ್ತದೆ. ಇನ್ನುಳಿದ ವೆಚ್ಚ ನಷ್ಟದ ಖಾತೆಗೆ ಸೇರುತ್ತಿದೆ.

ತಮಿಳುನಾಡೇ ಪ್ರಮುಖ ಮಾರುಕಟ್ಟೆ : ಪ್ರತಿ ಬಾರಿಯೂ ಈರುಳ್ಳಿ ಬೆಳೆಯುತ್ತಿದ್ದರೂ ಉತ್ತಮ ಬೆಲೆ ಸಿಗುವುದು ಕಡಿಮೆ. ಅಪರೂಪಕ್ಕೆ ಬಂಪರ್ ಬೆಲೆ ಸಿಕ್ಕುವ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ರೈತರು ಆಸೆಯಿಂದ ನಾಟಿ ಮಾಡುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಉಂಟಾಗುವ ಏರುಪೇರುಗಳು ಬಹಳಷ್ಟು ರೈತರಿಗೆ ನಷ್ಟ ಉಂಟು ಮಾಡುತ್ತವೆ.

ಸಣ್ಣಈರುಳ್ಳಿ ಪ್ರಮುಖ ಮಾರುಕಟ್ಟೆ ತಮಿಳುನಾಡೇ ಆಗಿದ್ದು, ಅಲ್ಲಿನ ಸ್ಥಿತಿಗತಿ ಹಾಗೂ ವಾತಾವರಣದ ಮೇಲೆ ಇಲ್ಲಿನ ಈರುಳ್ಳಿಗೆ ಬೇಡಿಕೆ ಹಾಗೂ ಬೆಲೆ ನಿಗದಿಯಾಗುತ್ತಿದೆ. ಅಲ್ಲಿ ಸೈಕ್ಲೋನ್‌ನಿಂದ ಬೆಳೆ ಹಾನಿಯಾದರೆ ನಮ್ಮ ಬೆಳೆಗೆ ಬಂಪರ್ ಬೆಲೆ ದೊರಕುತ್ತದೆ.

ಇಲ್ಲಿ ಈರುಳ್ಳಿ ಕಟಾವು ಸಂದರ್ಭದಲ್ಲಿ ಸಣ್ಣದಾಗಿ ಮಳೆ ಬಿದ್ದರೂ ಉತ್ಪನ್ನಗಳ ಬೆಲೆ ಪಾತಾಳಕ್ಕಿಳಿಯುತ್ತದೆ. ಅಲ್ಲದೆ ನೆರೆಯ ತಮಿಳುನಾಡಿನ ರೈತರು ಕಟಾವು ಮಾಡಿದರೆ ಇಲ್ಲಿನ ಬೆಳೆಯನ್ನು ಕೇಳುವವರೇ ಇಲ್ಲವಾಗುತ್ತದೆ.

ಸ್ವಲ್ಪ ಮಳೆ ಬಿದ್ದರೂ ಬೆಲೆ ಕುಸಿತ: ಈರುಳ್ಳಿ ಕೀಳುವ ಸಂದರ್ಭದಲ್ಲಿ ಸ್ವಲ್ಪ ಮಳೆಬಿದ್ದರೂ ಇಲ್ಲಿನ ದಲ್ಲಾಳಿಗಳು ಬೆಳೆ ಖರೀದಿಗೆ ಹಿಂದೇಟು ಹಾಕುತ್ತಾರೆ. ಕಟಾವು ಮಾಡಿದ ನಂತರ ಬೆಳೆಗಳನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲದ ಕಾರಣ ರೈತರು ತಮ್ಮ ಮಾಲನ್ನು ವ್ಯಾಪಾರಿಗಳು ಕೇಳಿದ ಬೆಲೆಗೆ ಮಾರಬೇಕಾದ ಅನಿವಾರ್ಯತೆಗೆ ಸಿಲುಕುವಂತಾಗುತ್ತಿದೆ.

ಪ್ರತಿ ಎಕರೆ ಈರುಳ್ಳಿ ಬೆಳೆಯಲು ಬಿತ್ತನೆ, ಕ್ರಿಮಿನಾಶಕ, ಗೊಬ್ಬರ ಸೇರಿದಂತೆ ಕನಿಷ್ಠ 50ರಿಂದ 60 ಸಾವಿರ ರೂ. ವೆಚ್ಚವಾಗುತ್ತಿದೆ. ಅದರೆ ಈರುಳ್ಳಿ ಕಟಾವು ತುಂಬ ದುಬಾರಿಯಾಗಿ ಪರಿಣಮಿಸಿದೆ. ಈರುಳ್ಳಿ ಕೊಯ್ಲು ಮಾಡುವ ಮಹಿಳಾ ಕಾರ್ಮಿಕರಿಗೆ ಪ್ರತಿ ಕೆಜಿಗೆ 4ರಿಂದ 5 ರೂ. ನೀಡಬೇಕಾಗಿದೆ. ಅಲ್ಲದೆ ಪ್ರತಿ ವರ್ಷವೂ ಹಿಂದಿನ ಬಾರಿಗಿಂತ ಹೆಚ್ಚಿನ ಗೊಬ್ಬರ ನೀಡಿದರೆ ಮಾತ್ರ ಬೆಳೆ ಉತ್ತಮವಾಗಿ ಬರುತ್ತದೆ. ಇದರಿಂದ ರೈತರು ತುಂಬ ನಷ್ಟ ಅನುಭವಿಸುವಂತಾಗಿದೆ. ಎಚ್.ಎಂ.ಮಹೇಶ್ ಹಂಗಳ ಗ್ರಾಮದ ರೈತ ಅರಿಶಿಣ ಬೆಳೆಯ ಜತೆ ಸಣ್ಣ ಈರುಳ್ಳಿ ಬೆಳೆಯುವುದರಿಂದ ತಾಲೂಕಿನಲ್ಲಿ ಸುಮಾರು 1,200ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ಬಾರಿ ಉತ್ತಮ ಇಳುವರಿ ಬಂದಿದ್ದು ಎಲ್ಲಿಯೂ ರೋಗಬಾಧೆ ಕಾಣಿಸಿಕೊಂಡಿಲ್ಲ. ಭಾಸ್ಕರ್ ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ