ಬೆಂಗಳೂರು: ಆನ್‌ಲೈನ್‌ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ನಗದು ಪಡೆದು ವಂಚಿಸುತ್ತಿದ್ದವನನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರಣ್ಯಪುರದ ರೋಹಿತ್ ಬಂಧಿತ. ಈತನಿಂದ 25 ಸಾವಿರ ರೂ. ನಗದು ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವ ದಿನ ಕನ್ನಮಂಗಲ ಗೇಟ್ ಬಸ್ ನಿಲ್ದಾಣದ ಸಮೀಪ ಬಸವೇಶ್ವರ ಎಂಟರ್‌ಪ್ರೈಸಸ್ ಮೊಬೈಲ್ ಅಂಗಡಿ ಮಾಲೀಕ ಶಿವಬಸಪ್ಪ ಅವರಿಂದ 50 ಸಾವಿರ ರೂ. ಪಡೆದು ವಂಚಿಸಿದ್ದ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಿಕಾಂ ಪದವೀಧರ ರೋಹಿತ್, ಕ್ಯಾಬ್ ಚಾಲಕನಾಗಿದ್ದ. ಸುಲಭವಾಗಿ ಹಣ ಸಂಪಾದನೆಗೆ ಅಡ್ಡದಾರಿ ತುಳಿದು ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದ್ದ. ದಿನಸಿ, ಮೊಬೈಲ್ ಮಾರಾಟ ಮಳಿಗೆ ವ್ಯಾಪಾರಿಗಳ ಬಳಿಗೆ ತೆರಳಿ ನಗದು ನೀಡಿದರೆ ಆನ್‌ಲೈನ್‌ನಲ್ಲಿ ಹಣ ಮರಳಿಸುತ್ತೇನೆ. ತುರ್ತು ನಗದು ಬೇಕಿದೆ ಎಂದು ಗೊಗರೆಯುತ್ತಿದ್ದ. ಈತನ ಮಾತು ನಂಬಿ ನಗದು ನೀಡಿದರೆ ಫೋನ್ ೆನ್ ಮಾದರಿ ನಕಲಿ ಆ್ಯಪ್ ಬಳಸಿ ಆನ್‌ಲೈನ್‌ನಲ್ಲಿ ಹಣ ಜಮೆಯಾಗಿರುವಂತೆ ಸಂದೇಶ ತೋರಿಸಿ ವಂಚಿಸುತ್ತಿದ್ದ.
ಕನ್ನಮಂಗಲ ಬಸ್ ನಿಲ್ದಾಣದ ಬಳಿಕ ಬಸವೇಶ್ವರ ಎಂಟರ್‌ಪ್ರೈಸಸ್ ಅಂಗಡಿ ಮಾಲೀಕರಿಂದ ಆ.15ರಂದು 49,500 ರೂ., 50 ಸಾವಿರ ರೂ. ಆನ್‌ಲೈನ್ ಮೂಲಕ ಹಣ ಪಾವತಿಸುವುದಾಗಿ ಹೇಳಿ ವಂಚಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಏಳೆಂಟು ತಿಂಗಳಿಂದ ಈ ವಂಚನೆ ಕೃತ್ಯವನ್ನೇ ವೃತ್ತಿ ಮಾಡಿಕೊಂಡಿದ್ದ. ಜನರಿಗೆ ಮೋಸ ಅರಿವಿಗೆ ಬಾರದ ಕಾರಣ ದೂರುಗಳು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.