ನ್ಯೂಸ್

ತಂಗಿ ಕರೆಯಲು ಹೊರಟಿದ್ದ ಅಣ್ಣ ವಿಧಿಯಾಟಕ್ಕೆ ಬಲಿ

ಶಂಕರ ಈ.ಹೆಬ್ಬಾಳ
ಮುದ್ದೇಬಿಹಾಳ: ತಂಗಿಯ ಪರೀಕ್ಷಾ ಕೇಂದ್ರಕ್ಕೆ ಹೊರಟಿದ್ದ ಅಣ್ಣನಿಗೆ ತನ್ನ ಜೀವ ಇಲ್ಲೇ ಹೋಗುತ್ತದೆ ಎಂದು ಬಹುಶಃ ಗೊತ್ತಿರಲಿಲ್ಲವೆನೋ, ವಿಧಿಯಾಟವೇ ಬೇರೆ. ತಂಗಿಯನ್ನು ಕರೆತರಲು ಹೊರಟಿದ್ದ ಅಣ್ಣನನ್ನು ವಿಧಿ ರಸ್ತೆಯ ಅಪಘಾತದ ನೆಪದಲ್ಲಿ ತನ್ನತ್ತ ಸೆಳೆದುಕೊಂಡು ಅಟ್ಟಹಾಸ ಮೆರೆದಿದೆ.

ಪಟ್ಟಣದ ಹುಡ್ಕೋಗೆ ತೆರಳುವ ಪುರಸಭೆ ಪಕ್ಕದಲ್ಲೇ ಇರುವ ರಾಜ್ಯ ಹೆದ್ದಾರಿಯಲ್ಲಿ ಮತ್ತೊಂದು ರಸ್ತೆ ಅಪಘಾತವಾಗಿದ್ದು ಕಡಿ ಸಾಗಿಸುವ ಟ್ರಕ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಲಕಾರಿಯಾಗದೆ ಅಸುನೀಗಿರುವ ಘಟನೆ ಗುರುವಾರ ನಡೆದಿದೆ.

ನಡೆದಿದ್ದೇನು?: ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ಸರ್ಕಲ್‌ದಿಂದ ಬಸವೇಶ್ವರ ವೃತ್ತದ ಕಡೆಗೆ ಬರುತ್ತಿದ್ದ ಟಿಪ್ಪರ್ ವಾಹನ ಮತ್ತು ತಮ್ಮ ಸಹೋದರಿಯ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆಯ ಸಲುವಾಗಿ ಎಸ್.ಎಸ್.ಶಿವಾಚಾರ್ಯ ಕಾಲೇಜಿನ ಕಡೆಗೆ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಹುಡ್ಕೋಗೆ ಹೋಗುವ ಕ್ರಾಸ್‌ನಲ್ಲಿ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಬ.ಬಾಗೇವಾಡಿ ತಾಲೂಕಿನ ಸಾಸನೂರ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಎಸ್.ಡಿ.ಸಿ ರಾಮು ಚನ್ನಪ್ಪ ಉಪ್ಪಾರ (28) ತೀವ್ರವಾಗಿ ಗಾಯಗೊಂಡ ಬಳಿಕ ಅವರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಚಿಕಿತ್ಸೆ ಲಕಾರಿ ಆಗದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸುತ್ತಲೇ ಟಿಪ್ಪರ್ ಚಾಲಕ ವಾಹನ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಜನ ಜಮಾಯಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಮುಶಾಪುರಿ, ಎಎಸ್‌ಐ ಎ.ಬಿ.ಟಕ್ಕಳಕಿ ನೇತೃತ್ವದ ತಂಡ ನೆರೆದ ಜನರನ್ನು ತೆರವುಗೊಳಿಸಿತು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಾರ್ವಜನಿಕರ ಆಕ್ರೋಶ

ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಕ್ರಾಸ್ ಬಳಿ ಇನ್ನು ಎಷ್ಟು ಬಲಿ ಅಧಿಕಾರಿಗಳಿಗೆ ಬೇಕಾಗಿದೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಅಪಘಾತದಲ್ಲಿ ಜೀವ ಕಳೆದುಕೊಂಡಿರುವ ವ್ಯಕ್ತಿ ಎರಡನೇಯವರು. ಈ ಹಿಂದೆ ಬಸರಕೋಡ ಗ್ರಾಮದ ನಿವೃತ್ತ ಎಎಸ್‌ಐ ಒಬ್ಬರು ಸ್ಕೂಟಿ ಮೇಲೆ ತೆರಳುವ ವೇಳೆ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ್ದರು. ಈ ಕ್ರಾಸ್‌ನಲ್ಲಿ ಆಯ್ದ ಎರಡ್ಮೂರು ಕಡೆಗಳಲ್ಲಿ ರಸ್ತೆ ತಡೆಗಳನ್ನು (ಹಂಪ್ಸ್) ಅಳವಡಿಸುವಂತೆ ಹತ್ತಾರು ಬಾರಿ ಆಗ್ರಹಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಈ ರಸ್ತೆ ನಿರ್ಮಾಣ ಮಾಡಿರುವ ಅಶೋಕಾ ಬಿಲ್ಡ್‌ಕಾನ್ ಕಂಪನಿಯವರು ಮತ್ತು ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳು ಎಚ್ಚರ ವಹಿಸದ ಪರಿಣಾಮ ಮೇಲಿಂದ ಮೇಲೆ ಇಲ್ಲಿ ಅಪಘಾತಗಳು ಸಂಭವಿಸುವುದಕ್ಕೆ ಕಾರಣವಾಗಿವೆ. ಇನ್ನೂ ಎಷ್ಟು ಅಮಾಯಕರು ಜೀವ ಕಳೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಅಪಘಾತ ತಡೆಗಟ್ಟಲು ಹಂಪ್ಸ್ ಅಳವಡಿಕೆಗೆ ಕ್ರಮ ಜರುಗಿಸುವಂತೆ ಸಾರ್ವಜನಿಕರಾದ ಸಿದ್ದರಾಜ ಹೊಳಿ, ಎ.ಗಣೇಶ, ಸೋಮು ಸಜ್ಜನ, ಕಿರಣ ಕಡಿ, ಅಮರೇಶ ಐಹೊಳೆ ಮೊದಲಾದವರು ಒತ್ತಾಯಿಸಿದ್ದಾರೆ.

ರಸ್ತೆಯಲ್ಲಿ ಹಂಪ್ಸ್ ಅಳವಡಿಸುವಂತೆ ಅಶೋಕಾ ಬಿಲ್ಡ್‌ಕಾನ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅವರು ಪತ್ರ ಕೊಡಲು ತಿಳಿಸಿದ್ದಾರೆ. ನಾಳೆಯೇ ಪತ್ರ ಕಳಿಸಿಕೊಡುತ್ತೇವೆ. ರಸ್ತೆಯ ಡಿವೈಡರ್‌ನಲ್ಲಿ ಬೆಳೆದಿರುವ ಗಿಡಗಳು ಈ ಕ್ರಾಸ್ ಬಳಿ ಹೆಚ್ಚು ಎತ್ತರದಲ್ಲಿದ್ದು ಅಲ್ಪಪ್ರಮಾಣದಲ್ಲಿ ಕತ್ತರಿಸಿ ವಾಹನಗಳ ಸವಾರರಿಗೆ ಸ್ಪಷ್ಟವಾಗಿ ಕಾಣುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕರು ಸಂಚಾರಿ ನಿಯಮಗಳ ಅರಿವು ಹೊಂದಬೇಕು.ಆರೀ ಮುಶಾಪುರಿ, ಪಿಎಸ್‌ಐ
ಅಶೋಕಾ ಬಿಲ್ಡ್‌ಕಾನ್ ಹಾಗೂ ಕೆ.ಆರ್.ಡಿ.ಸಿ.ಎಲ್ ಅಧಿಕಾರಿಗಳಿಗೆ ಈ ಸ್ಥಳದಲ್ಲಿ ಹಂಪ್ಸ್ ಅಳವಡಿಸಲು ಎರಡ್ಮೂರು ಬಾರಿ ಮೌಖಿಕವಾಗಿ ಹೇಳಿದ್ದರೂ ಸ್ಪಂದಿಸಿಲ್ಲ. ಈಗ ಮತ್ತೆ ಅಪಘಾತ ಸಂಭವಿಸಿದೆ. ಇಲ್ಲೊಂದು ಸಮಯ ಆಧಾರಿತ ಟ್ರಾಫಿಕ್ ಸಿಗ್ನಲ್ ಅಳವಡಿಸಲು ಪೊಲೀಸರು ಕ್ರಮ ಜರುಗಿಸಬೇಕು.ಜಿ.ವೈ.ದೇದಾರ್, ಪ್ರಧಾನ ಕಾರ್ಯದರ್ಶಿ, ಜನಸೇವಾ ಸಂಸ್ಥೆ, ಮುದ್ದೇಬಿಹಾಳ