ನವದೆಹಲಿ: ಕರೊನಾ ವೈರಸ್ನಿಂದಾಗಿ ಸಂಪೂರ್ಣ ಜಗತ್ತು ತತ್ತರಿಸಿದೆ. ಭಾರತದಲ್ಲಿಯೂ ಕರೊನಾ ಆರ್ಭಟ ಹೆಚ್ಚಾಗಿದ್ದು ಇದುವರೆಗೆ ಸೋಂಕಿತರ ಸಂಖ್ಯೆ 93ಕ್ಕೆ ಏರಿಕೆಯಾಗಿದೆ.
ಕರ್ನಾಟಕದ ಕಲಬುರಿಗೆಯಲ್ಲಿ ಒಂದು ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಸಾವು ಸೇರಿದಂತೆ ಇದುವರೆಗೆ ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಒಟ್ಟು 93ಕ್ಕೆ ಏರಿಕೆಯಾಗಿದೆ. ಇದನ್ನು ವೈದ್ಯಕೀಯ ಆಪತ್ತು ಎಂದು ಸರ್ಕಾರ ಘೋಷಣೆ ಮಾಡಿದೆ. ಸೋಂಕು ಹರಡದಿರುವಂತೆ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆಗೆದುಕೊಳ್ಳುತ್ತಿವೆ.
ವಿಶ್ವದಲ್ಲಿ ಹೆಚ್ಚುತ್ತಿರುವ ಕರೊನಾ ಸೋಂಕಿನ ಕುರಿತಾಗಿ ಇಂದು ಸಂಜೆ 5 ಗಂಟೆಗೆ ಸಾರ್ಕ್ ನಾಯಕರೊಂದಿಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡ ಈ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ. ಪ್ರಧಾನಿ ನೆರೇಂದ್ರ ಮೋದಿಯವರು ದೇಶದ ಯಾವುದೇ ಸಚಿವರು ಬೇರೆ ದೇಶಗಳಿಗೆ ಪ್ರಯಾಣ ಮಾಡುವಂತಿಲ್ಲ ಎಂದು ಆದೇಶಿಸಿದ್ದು ನಾಗರಿಕರಲ್ಲಿಯೂ ಸಹ ಪ್ರಯಾಣ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸೋಂಕು ತಡೆಗಟ್ಟುವಲ್ಲಿ ಸಹಕಾರಿಯಾಗಿರುವ ಮಾಸ್ಕ್ ಮತ್ತು ಸ್ಯಾನಿಟೈಸರ್ಗಳನ್ನು ಅಗತ್ಯ ಸರಕುಗಳ ಕಾಯ್ದೆಯಡಿ ಜೂನ್ 30ರವರೆಗೆ ಅಗತ್ಯ ಸರಕುಗಳು ಎಂದು ಘೋಷಿಸಲಾಗಿದೆ. ಈ ಕಾಯ್ದೆಯ ಅನುಸಾರ ರಾಜ್ಯ ಸರ್ಕಾರಗಳು ಅಗತ್ಯ ಸರಕುಗಳ ಉತ್ಪಾದನೆಯನ್ನು ಹೆಚ್ಚಿಸುವಂತೆ ತಯಾರಕರನ್ನು ಕೇಳಬಹುದಾಗಿದೆ.
ತೆಲಂಗಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಖಂಡ, ಗೋವಾ ಮತ್ತು ಕರ್ನಾಟಕದಲ್ಲಿ ಶಾಲೆಗಳು ಮತ್ತು ಅನೇಕ ಸಾರ್ವಜನಿಕ ಸ್ಥಳಗಳನ್ನು ಮುಚ್ಚಲಾಗಿದೆ. ಕರ್ನಾಟಕದಲ್ಲಿರುವ ಐಟಿ ಬಿಟಿ ಸಂಸ್ಥೆಗಳ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. (ಏಜೆನ್ಸೀಸ್)