ನವದೆಹಲಿ: ಜಾಗತಿಕವಾಗಿ ಮಾರಕ ಕರೊನಾ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ 50 ಲಕ್ಷದ ಗಡಿ ಸಮೀಪಿಸಿದ್ದು, ಪ್ರತಿ ದಿನ ಸರಾಸರಿ 80ರಿಂದ 90 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಮಂಗಳವಾರ 50 ಸಾವಿರ ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 49.38 ಲಕ್ಷಕ್ಕೆ ಏರಿಕೆಯಾಗಿದೆ.
ವಿಶ್ವಾದ್ಯಂತ ಈವರೆಗೆ 3.21 ಲಕ್ಷ ಜನರು ಸಾವನ್ನಪ್ಪಿದ್ದಾರೆ. 19.32 ಲಕ್ಷ ರೋಗಿಗಳು ಈವರೆಗೆ ಚೇತರಿಸಿಕೊಂಡಿದ್ದು, ಇನ್ನೂ 26 ಲಕ್ಷ ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 45 ಸಾವಿರ ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ. ಅಮೆರಿಕದಲ್ಲಿ ಈವರೆಗೆ 92 ಸಾವಿರ ಜನರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 15.52 ಲಕ್ಷಕ್ಕಿಂತ ಅಧಿಕವಾಗಿದೆ. ನಂತರದ ಸ್ಥಾನದಲ್ಲಿ ರಷ್ಯಾ ಇದ್ದು, ಅಲ್ಲಿನ ಸೋಂಕಿತರ ಸಂಖ್ಯೆ 2.99 ಲಕ್ಷಕ್ಕೆ ಏರಿಕೆಯಾಗಿದೆ.
ಭಾರತದಲ್ಲಿ ಕರೊನಾ ತೀವ್ರ: ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗಾಗಲೇ ಲಕ್ಷ ದಾಟಿದೆ. ಜಾಗತಿಕವಾಗಿ 1 ಲಕ್ಷಕ್ಕೂ ಅಧಿಕ ಸೋಂಕು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 11ನೇ ಸ್ಥಾನಕ್ಕೇರಿದೆ. ಮಂಗಳವಾರ 3,601 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,03,928ಕ್ಕೆ ಏರಿಕೆಯಾಗಿದೆ. ಜತೆಗೆ ಹೊಸದಾಗಿ 60 ಸಾವು ಪ್ರಕರಣಗಳು ವರದಿಯಾಗಿದ್ದು, ಮೃತರ ಸಂಖ್ಯೆ 3,216ಕ್ಕೆ ಏರಿದೆ. ಈವರೆಗೆ 40 ಸಾವಿರಕ್ಕೂ ಅಧಿಕ ರೋಗಿಗಳು ಚೇತರಿಸಿಕೊಂಡಿದ್ದಾರೆ. 59 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಮಹಾರಾಷ್ಟ್ರದಲ್ಲಿ 35 ಸಾವಿರಕ್ಕೂ ಅಧಿಕ ಕೇಸ್ ವರದಿಯಾಗಿದೆ. ಮೃತರ ಸಂಖ್ಯೆ 1,200ಕ್ಕಿಂತ ಹೆಚ್ಚಿದ್ದು, ದೇಶದ ಒಟ್ಟು ಸೋಂಕು ಮತ್ತು ಸಾವಿನಲ್ಲಿ ಮಹಾರಾಷ್ಟ್ರದಲ್ಲೇ ಶೇ. 30ಕ್ಕಿಂತ ಅಧಿಕ ಪಾಲು ಹೊಂದಿದೆ.
1 ಲಕ್ಷ ಮಂದಿಗೆ 0.2 ಸಾವು
ಭಾರತದಲ್ಲಿ ಪ್ರತಿ 1 ಲಕ್ಷ ಜನರಲ್ಲಿ ಕರೊನಾಗೆ ಸಾವನ್ನಪು್ಪವವರ ಪ್ರಮಾಣ 0.2 ಇದ್ದು, ಜಾಗತಿಕವಾಗಿ ಈ ಪ್ರಮಾಣ 4.1 ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರೊನಾದಿಂದ ತೀವ್ರ ಬಾಧಿತವಾಗಿರುವ ಅಮೆರಿಕದಲ್ಲಿ ಪ್ರತಿ 1 ಲಕ್ಷ ಜನರಿಗೆ 26.6 ಸಾವು ಸಂಭವಿಸುತ್ತಿವೆ. ಬ್ರಿಟನ್ನಲ್ಲಿ 52.1, ಇಟಲಿಯಲ್ಲಿ 52.8, ಫ್ರಾನ್ಸ್ನಲ್ಲಿ 41.9 ಹಾಗೂ ಸ್ಪೇನ್ನಲ್ಲಿ 59.2 ಸಾವುಗಳು ಪ್ರತಿ 1 ಲಕ್ಷಕ್ಕೆ ಸಂಭವಿಸುತ್ತಿವೆ. ಭಾರತದಲ್ಲಿ ಈವರೆಗೆ 24.25 ಲಕ್ಷ ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.