ನ್ಯೂಸ್

ರಾಜ್ಯದಲ್ಲಿ 2000ದ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಡಿಸ್​ಚಾರ್ಜ್ ಆದವರು 654, ಐಸಿಯುನಲ್ಲಿ 17 ಮಂದಿ

ಬೆಂಗಳೂರು: ರಾಜ್ಯದಲ್ಲಿ ಕೊವಿಡ್​ -19 ಸೋಂಕಿತರ ಸಂಖ್ಯೆ ಪ್ರತಿದಿನವೂ ಹೆಚ್ಚುತ್ತಲೇ ಇದೆ. ಇಂದು ಸಂಜೆ ಆರೋಗ್ಯ ಇಲಾಖೆ ನೀಡಿದ ವರದಿ ಪ್ರಕಾರ ಕರೊನಾ ಸೋಂಕಿತರ ಸಂಖ್ಯೆ 2089ಕ್ಕೆ ಏರಿದೆ.

ಕಳೆದ 24 ಗಂಟೆಯಲ್ಲಿ ( ಮೇ 23ರ ಸಂಜೆ 5ರಿಂದ ಮೇ 24ರ ಸಂಜೆ 5ರವರೆಗೆ) ಒಟ್ಟು 130 ಹೊಸ ಕೇಸ್​​ಗಳು ಪತ್ತೆಯಾಗಿವೆ. ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆಯವರೆಗೆ 97 ಪ್ರಕರಣಗಳು ದಾಖಲಾಗಿದ್ದವು. ಸಂಜೆ ಹೊತ್ತಿಗೆ ಮತ್ತೆ 33 ಜನರಲ್ಲಿ ಸೋಂಕು ದೃಢಪಟ್ಟಿದೆ.

2089 ಪ್ರಕರಣದಲ್ಲಿ ಸಕ್ರಿಯ ಕೇಸ್​ಗಳು 1391. ಆಸ್ಪತ್ರೆಯಿಂದ ಬಿಡುಗಡೆಯಾದವರು 654 ಮಂದಿ. ಕಳೆದ 24ಗಂಟೆಯಲ್ಲೇ 46 ಮಂದಿ ಗುಣಮುಖರಾಗಿ ಡಿಸ್​ಚಾರ್ಜ್​ ಆಗಿದ್ದಾರೆ. 17 ಜನರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊವಿಡ್​-19ನಿಂದಾಗಿ ಮೃತಪಟ್ಟವರು 42 ಮಂದಿ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೊವಿಡ್​-19 ಸೋಂಕಿತರಲ್ಲಿ ಬಹುಪಾಲು ಜನರು ಮುಂಬೈ, ಮಹಾರಾಷ್ಟ್ರದಿಂದ ಬಂದವರು. ಇಂದು ಬೆಂಗಳೂರು ನಗರದಲ್ಲಿ 1, ಮಂಡ್ಯದಲ್ಲಿ 15, ಕಲಬುರಗಿ-6, ಚಿಕ್ಕಬಳ್ಳಾಪುರ 27, ಯಾದಗಿರಿ 24, ಹಾಸನ 14, ಬೀದರ್​ 6, ಉಡುಪಿ 23, ವಿಜಯಪುರ 1, ಉತ್ತರ ಕನ್ನಡ 2, ದಕ್ಷಿಣ ಕನ್ನಡ ಮತ್ತು ಧಾರವಾಡಗಳಲ್ಲಿ ತಲಾ 1, ಶಿವಮೊಗ್ಗ 2, ತುಮಕೂರು 2 ಹಾಗೂ ಕೊಡಗಲ್ಲಿ 1 ಕರೊನಾ ಪ್ರಕರಣ ಪತ್ತೆಯಾಗಿದೆ.

ಬೆಂಗಳೂರು ನಗರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 266ಕ್ಕೆ ಏರಿದ್ದು, ಎರಡನೇ ಸ್ಥಾನದಲ್ಲಿ ಮಂಡ್ಯ (252 ಸೋಂಕಿತರು) ಇದೆ. ಹಾಗೇ ಕಲಬುರಗಿ (141), ಬೆಳಗಾವಿ (127) ಚಿಕ್ಕಬಳ್ಳಾಪುರ (126), ದಾವಣಗೆರೆ (125) ಹಾಗೂ ಯಾದಗಿರಿ (111)ಯಲ್ಲಿ ಕೊವಿಡ್​-19 ಸೋಂಕಿತರ ಸಂಖ್ಯೆ 100ರ ಗಡಿ ದಾಟಿದೆ.