ನ್ಯೂಸ್

ಗಂಡನ ಮನೆಗೆ ಹೋಗಲ್ಲ ಅಂತಾ ಪಟ್ಟು ಹಿಡಿದ ನವವಿವಾಹಿತೆ ಬಸ್ ನಿಲ್ದಾಣದ ಟಾಯ್ಲೆಟ್​ನಲ್ಲಿ ನಿಗೂಢ ನಾಪತ್ತೆ!​

ವಿಜಯವಾಡ: ಬಸ್​ ನಿಲ್ದಾಣದಲ್ಲಿ ಟಾಯ್ಲೆಟ್​ಗೆ ಹೋಗಿ ಬರುತ್ತೇನೆಂದು ಪಾಲಕರಿಗೆ ಹೇಳಿ ಹೋದ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

ನಾಪತ್ತೆಯಾಗಿರುವ ಮಹಿಳೆ ಹೆಸರು ಮಾದೇಶ್ವರಿ. ಈಕೆ ನೆಲ್ಲೂರು ಜಿಲ್ಲೆಯ ಆತ್ಮಕೂರ್ ಮಂಡಲದ ನಿವಾಸಿಯಾಗಿದ್ದು, ಮೂರು ತಿಂಗಳ ಹಿಂದಷ್ಟೇ ರಾಮಗಿರಿ ಮೂಲದ ಯುವಕನೊಂದಿಗೆ ಮದುವೆಯಾಗಿದ್ದಳು. ಕೆಲವು ದಿನಗಳ ಹಿಂದೆ ತವರಿಗೆ ಬಂದಿದ್ದ ಮಾದೇಶ್ವರಿ ಮತ್ತೆ ಅತ್ತೆಯ ಮನೆಗೆ ಹಿಂದಿರುಗಬೇಕಿತ್ತು.

ಭಾನುವಾರ ಬೆಳಗ್ಗೆ ತಮ್ಮ ಪಾಲಕರೊಂದಿಗೆ ಮಾದೇಶ್ವರಿ ಅನಂತಪುರ ಬಸ್​ ನಿಲ್ದಾಣಕ್ಕೆ ತೆರಳಿದ್ದಳು. ಈ ವೇಳೆ ಅತ್ತೆಯ ಮನೆಗೆ ಹೋಗುವುದಿಲ್ಲ ಅಂತಾ ಪಾಲಕರ ಬಳಿ ಮಾದೇಶ್ವರಿ ಪಟ್ಟು ಹಿಡಿದಿದ್ದಳು. ಆದರೆ, ಪಾಲಕರು ಆಕೆಯ ಮನವೊಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ಈ ವೇಳೆ ಟಾಯ್ಲೆಟ್​ಗೆ ತೆರಳುವುದಾಗಿ ಪಾಲಕರಿಗೆ ಹೇಳಿ ಹೋದ ಮಾದೇಶ್ವರಿ ತುಂಬಾ ಸಮಯವಾದರೂ ಮರಳಿ ಬರಲೇ ಇಲ್ಲ. ಇದರಿಂದ ಅನುಮಾನಗೊಂಡ ಪಾಲಕರು ಟಾಯ್ಲೆಟ್​ ಬಳಿ ತೆರಳಿ ಪರಿಶೀಲಿಸಿದಾಗ ಆಕೆಯ ಸುಳಿವು ಸಿಗಲೇ ಇಲ್ಲ.

ಟಾಯ್ಲೆಟ್​ ಮಾತ್ರವಲ್ಲದೆ, ಬಸ್​ ನಿಲ್ದಾಣದ ಅಕ್ಕ-ಪಕ್ಕದ ಜಾಗದಲ್ಲೂ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಡೀ ಪ್ರಕರಣ ಇದೀಗ ನಿಗೂಢತೆಗೆ ತಿರುಗಿದೆ. ಮಾದೇಶ್ವರಿ ಎಲ್ಲಿ ಹೋದಳು ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾದೇಶ್ವರಿಯ ಪಾಲಕರನ್ನು ವಿಚಾರಣೆಗೆ ಒಳಪಡಿಸಿದ್ದು, ತನಿಖೆ ತೀವ್ರ ಗೊಳಿಸಿದ್ದಾರೆ. (ಏಜೆನ್ಸೀಸ್​)