ನ್ಯೂಸ್

ರೂ.30,000 ಕೋಟಿ ಸಂಪತ್ತಿನ ಉತ್ತರಾಧಿಕಾರಕ್ಕೆ ನಿಲ್ಲದ ಕದನ

ನವದೆಹಲಿ: ಉದ್ಯಮಿ ಸಂಜಯ್ ಕಪೂರ್​ರ ಅಕಾಲಿಕ ಮರಣದ ನಂತರ, ಅವರ ಪತ್ನಿ ಪ್ರಿಯಾ ಸಚ್​ದೇವ್ ಕಪೂರ್ 30,000 ಕೋಟಿ ರೂ.ಗಳ ಸೋನಾ ಗ್ರೂಪ್​ನ ಉತ್ತರಾಧಿಕಾರ ವಿವಾದದ ಕೇಂದ್ರಬಿಂದುವಾಗಿದ್ದಾರೆ. ತಮ್ಮ ಮಗನ ಸಾವಿನ ನಂತರ ಕೆಲವು ದಾಖಲೆಗಳ ಮೇಲೆ ಒತ್ತಡದಿಂದ ಸಹಿ ಹಾಕಿಸಿಕೊಳ್ಳಲಾಗಿದೆ ಎಂದು ಸಂಜಯ್ರ ತಾಯಿ ರಾಣಿ ಕಪೂರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಿಯಾ ಮೇಲೆ ಹಲವರಿಗೆ ಶಂಕೆ ಮೂಡಿದೆ. ಆದರೆ ಅವರ ಹೆಸರು ನೇರವಾಗಿ ಎಲ್ಲಿಯೂ ಉಲ್ಲೇಖವಾಗಿಲ್ಲ.

ವಿವಾದದ ಹಿನ್ನೆಲೆ: ಸೋನಾ ಕಾಮ್​ಸ್ಟಾರ್​ನ ಅಧ್ಯಕ್ಷರಾಗಿದ್ದ ಸಂಜಯ್ ಜೂ. 12ರಂದು ಇಂಗ್ಲೆಂಡ್​ನಲ್ಲಿ ಪೋಲೊ ಪಂದ್ಯದ ವೇಳೆ ಹೃದಯಾಘಾತದಿಂದ ನಿಧನರಾದರು. ಅದಾಗಿ 1 ತಿಂಗಳ ನಂತರ, ರಾಣಿ ಅವರು ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಗೆ ಮುಂಚೆ ನಿರ್ದೇಶಕ ಮಂಡಳಿಗೆ ಪತ್ರ ಬರೆದಿದ್ದಾರೆ. ತಾವು ಕಂಪನಿಯ ಬಹುಪಾಲು ಷೇರು ಹೊಂದಿದ್ದು, ಮಗನ ಸಾವಿನ ನಂತರ ಕೆಲವರು ಒತ್ತಾಯದಿಂದ ದಾಖಲೆಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ, ಕುಟುಂಬದ ಪ್ರತಿನಿಧಿಯಾಗಿ ಕೆಲವರು ತಪ್ಪಾಗಿ ಬಿಂಬಿಸಿಕೊಳ್ಳು ತ್ತಿದ್ದಾರೆಂದು ಆ ಪತ್ರದಲ್ಲಿ ದೂರಿ ದ್ದಾರೆ. ಆದರೆ ಕಂಪನಿಯು ರಾಣಿ ಅವರ ಆರೋಪಗಳನ್ನು ತಳ್ಳಿಹಾಕಿದೆ. ರಾಣಿ 2019ರಿಂದ ಕಂಪನಿಯ ಷೇರುದಾರರಾಗಿಲ್ಲ ಎಂದು ಸ್ಪಷ್ಟಪಡಿ ಸಿದೆ. ಜು. 25ರ ಎಜಿಎಂನಲ್ಲಿ, ಪ್ರಿಯಾ ಅವರನ್ನು ಹೆಚ್ಚುವರಿ ಕಾರ್ಯನಿರ್ವಾಹಕೇತರ ನಿರ್ದೇಶಕರನ್ನಾಗಿ ನೇಮಕ ಮಾಡಿದೆ. ಕಾನೂನು ಸಮರ?: ಈ ವಿವಾದ ದೇಶದ ಪ್ರಮುಖ ಆಟೋ ಉದ್ಯಮ ಕುಟುಂಬಗಳಲ್ಲಿ ಒಂದಾದ ಕಪೂರ್ ಕುಟುಂಬದ ಒಳಗಿನ ಗೊಂದಲವನ್ನು ಬಹಿರಂಗಪಡಿಸಿದ್ದು, ಕಾನೂನು ಸಮರದ ಸ್ವರೂಪ ಪಡೆಯುವ ಸಾಧ್ಯತೆ ಇದೆ.

ಯಾರು ಈ ಪ್ರಿಯಾ?

ದೆಹಲಿಯಲ್ಲಿ ಜನಿಸಿದ ಪ್ರಿಯಾ, ಆಟೋಮೊಬೈಲ್ ಡೀಲರ್ ಅಶೋಕ್ ಸಚ್​ದೇವ್ ಅವರ ಪುತ್ರಿ. ಆಟೋಮೊಬೈಲ್ ರಿಟೇಲ್, ವಿಮೆ, ಫ್ಯಾಷನ್, ಇ-ಕಾಮರ್ಸ್ ಕ್ಷೇತ್ರಗಳಲ್ಲಿ ವ್ಯವಹಾರ ಹೊಂದಿದ್ದಾರೆ. ಪ್ರಿಯಾ 2017 ರಲ್ಲಿ ಸಂಜಯ್ರನ್ನು ವಿವಾಹವಾದರು. ಸಂಜಯ್ ಈ ಹಿಂದೆ ಬಾಲಿವುಡ್ ನಟಿ ಕರಿಷ್ಮಾ ಕಪೂರ್​ರನ್ನು ವಿವಾಹವಾಗಿದ್ದರು. ಪ್ರಿಯಾ ಮತ್ತು ಸಂಜಯ್ಗೆ ಒಬ್ಬ ಮಗನಿದ್ದಾನೆ. ಇದಕ್ಕೂ ಮುಂಚೆ, ಪ್ರಿಯಾ ಅಮೆರಿಕದ ಹೋಟೆಲಿಯರ್ ವಿಕ್ರಮ್ ಚಾಟ್ವಾಲ್​ರನ್ನು ವಿವಾಹವಾಗಿದ್ದರು. 2011ರಲ್ಲಿ ವಿಚ್ಛೇದನವಾಗಿತ್ತು.