ನ್ಯೂಸ್

ಪಾರದರ್ಶಕತೆ ಅಗತ್ಯ; ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಡೆಗಟ್ಟಬೇಕು

ಅಭಿವೃದ್ಧಿ ಕಾರ್ಯಗಳ ಅನುಷ್ಠಾನ, ಮೂಲಸೌಕರ್ಯಗಳ ಒದಗಿಸುವಿಕೆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಪಾತ್ರ ಬಹುಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹತ್ವದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ತಳಮಟ್ಟದಲ್ಲಿ ತಲುಪಿಸುವ ಉದ್ದೇಶದಿಂದ ಅವುಗಳ ಅನುಷ್ಠಾನದ ಹೊಣೆಯನ್ನು ಸ್ಥಳೀಯ ಸಂಸ್ಥೆಗಳ ಹೆಗಲಿಗೆ ನೀಡಿವೆ. ಪರಿಣಾಮ, ಕೆಲ ಯೋಜನೆಗಳು ಯಶಸ್ವಿಯೂ ಆಗಿವೆ. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳಿಗೆ ಈಗ ಸಾಕಷ್ಟು ಅನುದಾನವೂ ಬರುತ್ತಿದೆ. ಆದರೆ, ಅವುಗಳ ಖರ್ಚು-ವೆಚ್ಚ, ಕಾಮಗಾರಿಯ ಗುಣಮಟ್ಟದ ಕುರಿತಂತೆ ಅಪಸ್ವರಗಳು ಕೇಳಿಬರುತ್ತಿರುವುದು, ಹಲವೆಡೆ ವ್ಯಾಪಕ ಅವ್ಯವಹಾರಗಳು ನಡೆದಿರುವುದು ಸ್ಥಳೀಯ ಸಂಸ್ಥೆಗಳಲ್ಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಗ್ರಾಮ ಪಂಚಾಯಿತಿಗಳಲ್ಲಂತೂ ಪಿಡಿಒಗಳು ಸ್ಥಳೀಯ ಪುಢಾರಿಗಳ ಒತ್ತಡದಲ್ಲಿ ಕೆಲಸ ಮಾಡುವಂಥ ದಯನೀಯ ವಾತಾವಾರಣವಿದೆ. ಈ ವ್ಯವಸ್ಥೆಯನ್ನೇ ಸರಿಪಡಿಸದಿದ್ದರೆ ಸರ್ಕಾರ ಎಷ್ಟು ಅನುದಾನ ಕೊಟ್ಟರೂ; ಅದು ಸಮರ್ಪಕವಾಗಿ ಬಳಕೆಯಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ.

ನಗರ, ಪಟ್ಟಣ, ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ, ದುರುಪಯೋಗದ ದೂರುಗಳ ಸ್ವತಂತ್ರ ತನಿಖೆಗೆ ಸಾರ್ವಜನಿಕ ತನಿಖಾಧಿಕಾರಿ (ಒಂಬುಡ್ಸ್​ಮನ್) ನೇಮಿಸುತ್ತೇವೆ ಎಂದು ಹೇಳಿದ್ದ ಸರ್ಕಾರ ಈ ಭರವಸೆಯನ್ನೇ ಮರೆತುಬಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ತರಲೆಂದು 13ನೇ ಹಣಕಾಸು ಆಯೋಗವು ಸಾರ್ವಜನಿಕ ತನಿಖಾಧಿಕಾರಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು ಎಂಬುದು ಗಮನಾರ್ಹ. ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಭ್ರಷ್ಟಾಚಾರ ಹಾಗೂ ದುರುಪಯೋಗದ ದೂರುಗಳ ಸ್ವತಂತ್ರ ತನಿಖೆಗೆ ಸಾರ್ವಜನಿಕ ತನಿಖಾಧಿಕಾರಿ ನೇಮಕ ಅಗತ್ಯವಿದೆ. ಇಲ್ಲದಿದ್ದಲ್ಲಿ ಭ್ರಷ್ಟಾಚಾರ, ಅವ್ಯವಹಾರದಂಥ ಅಪಸವ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಒಂಬುಡ್ಸ್​ಮನ್ ನೇಮಕಾತಿಗೆ ಇರುವ ಅಡ್ಡಿಯಾದರೂ ಏನು? ಎಂಬುದು ಸರ್ಕಾರ ಸ್ಪಷ್ಟಪಡಿಸಿಲ್ಲ. ಇಲ್ಲಿ ಕಾಣುವುದು ಇಚ್ಛಾಶಕ್ತಿಯ ಕೊರತೆಯಷ್ಟೇ.

ಹಣಕಾಸು ಆಯೋಗದ ವರದಿಯನ್ನು ನಿರ್ಲಕ್ಷಿಸಿರುವುದು ಏಕೆ, ಸ್ಥಳೀಯ ಸಂಸ್ಥೆಗಳಿಗೆ ಬರೀ ಅನುದಾನ ಕೊಟ್ಟರೆ ಸಾಕೆ? ಅದು ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಅಲ್ಲವೇ? ಹೀಗಿರುವಾಗ ಯಾರಾದರೂ ತಪು್ಪ ಮಾಡಿದಲ್ಲಿ ಅಂಥ ದೂರುಗಳ ವಿಚಾರಣೆಗೆ ಸೂಕ್ತ ವ್ಯವಸ್ಥೆ ರೂಪಿಸಬೇಕಿದೆ. ಇಲ್ಲದಿದ್ದಲ್ಲಿ, ಸರ್ಕಾರಿ ಯೋಜನೆಗಳಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಸಿನಿಕತೆ ಬೆಳೆದು, ಭ್ರಷ್ಟರ ಮನೋಬಲ ಹೆಚ್ಚುತ್ತದೆ. ಅಂಥ ಸ್ಥಿತಿ ಯಾವುದೇ ಕಾರಣಕ್ಕೂ ಸೃಷ್ಟಿಯಾಗಬಾರದು.

ನರೇಗಾದಡಿ ಒಂಬುಡ್ಸ್​ಮನ್ ನೇಮಕ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದ್ದು, ಸ್ಥಳೀಯ ಸಂಸ್ಥೆಗಳಲ್ಲೂ ಇದು ಅನುಷ್ಠಾನಕ್ಕೆ ಬರಬೇಕು. ವಿವಿಧ ಇಲಾಖೆಗಳು ಜಾರಿಗೆ ತಂದಿರುವ ಯೋಜನೆಗಳು ಅಥವಾ ಕಾರ್ಯಕ್ರಮಗಳ ಪರಿಣಾಮಕಾರಿ ಸಾಮಾಜಿಕ ಲೆಕ್ಕಪರಿಶೋಧನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಯೋಜನೆಗಳ ಮೂಲೋದ್ದೇಶ, ಅಭಿವೃದ್ಧಿಯ ಆಶಯ ಈಡೇರಲು ಸಾಧ್ಯವಿಲ್ಲ. ಆದ್ದರಿಂದ, ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಅಗತ್ಯ ಎಂಬುದನ್ನು ಮರೆಯುವಂತಿಲ್ಲ.