ಮೈಸೂರು: ಮೈಸೂರು ಮಹಾರಾಜರು ರಾಜಪ್ರಭುತ್ವದಲ್ಲಿ ಪ್ರಜಾಪ್ರಭುತ್ವದ ಮಾದರಿ ಆಡಳಿತ ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಮ್ ಅಧ್ಯಯನ ಮತ್ತು ವಿಸ್ತರಣ ಕೇಂದ್ರದ ಸಂಶೋಧನಾ ಅಧಿಕಾರಿ ಶ್ರೀನಿವಾಸ ಮೂರ್ತಿ ಹೇಳಿದರು.
ನಜರ್‌ಬಾದ್‌ನ ವಾಣಿವಿಲಾಸ ಅರಸು ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಸ್ಥೆಯ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮೈಸೂರಿನ ಅಭಿವೃದ್ಧಿಗೆ ಮೈಸೂರು ಸಂಸ್ಥಾನ ಭದ್ರವಾದ ಅಡಿಪಾಯ ಹಾಕಿಕೊಟ್ಟಿದೆ. ಅವರು ಜನಸಾಮಾನ್ಯರ ಜೀವನ ಮಟ್ಟವನ್ನು ಉನ್ನತೀಕರಿಸಿದರು. ಬಸವಣ್ಣ ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದರು ಎಂದು ಹೇಳಿದರು.
ಮೈಸೂರಿನ ಅಭಿವೃದ್ಧಿಯಲ್ಲಿ ಕೆಂಪನಂಜಮ್ಮಣಿ ವಾಣಿವಿಲಾಸ ಸನ್ನಿಧಾನ ಅವರ ಕೊಡುಗೆ ಅಪಾರವಾಗಿದೆ. ವಾಣಿವಿಲಾಸ ಸನ್ನಿಧಾನ ಅವರು ಕಳಲೆ ಗ್ರಾಮದವರು. ಹೀಗಾಗಿ ಅವರು ಗ್ರಾಮೀಣ ಜನ ಜೀವನ ಕಂಡು ಬೆಳೆದರು. ಈ ಕಾರಣಕ್ಕೆ ಜನರ ಒಳಿತಿಗೋಸ್ಕರ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದರು. ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದರು ಎಂದು ಹೇಳಿದರು.
ವೇದಿಕೆಯಲ್ಲಿ ಜಯಚಾಮರಾಜೇಂದ್ರ ಅರಸು ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷೆ ಡಾ. ಭಾರತಿ ಶ್ರೀಧರ್‌ರಾಜೇ ಅರಸ್, ಗೌರವ ಕಾರ್ಯದರ್ಶಿ ಮಹೇಶ್ ಅರಸ್, ಸಹ ಕಾರ್ಯದರ್ಶಿ ಶ್ರೀಕಂಠ ರಾಜೇ ಅರಸ್, ಸದಸ್ಯ ಬಾಲಚಂದ್ರ ಅರಸ್, ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿದ್ದಪ್ಪ, ಪದವಿ ಕಾಲೇಜು ಪ್ರಾಂಶುಪಾಲ ಡಾ. ಜಗದೀಶ್‌ಕೃಷ್ಣ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಅನಿತಾ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಆಶಾ ಹಾಗೂ ಇತರರು ಇದ್ದರು.